ಡಾ.ಧನಂಜಯ ಸರ್ಜಿ ಪರ ಬ್ಯಾಟಿಂಗ್ ಆರಂಭಿಸಿದ ಹೊನ್ನಾಳಿ ರೇಣುಕಾಚಾರ್ಯ

ಸಮಸ್ಯೆಗಳ ಪರಿಹಾರ ದೊರಕಿಸುವ ಸಾಮರ್ಥ್ಯ ಡಾ.ಧನಂಜಯ ಸರ್ಜಿ ಅವರಲ್ಲಿದೆ : ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ: ನೈರುತ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಸಾತ್ವಿಕ ಮನಸ್ಥಿತಿ ಹಾಗೂ ಸೇವಾ ಮನೋಭಾವನೆಯ ಡಾ.ಧನಂಜಯ ಸರ್ಜಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿ ವಿಧಾನ ಪರಿನ ಪರಿಷತ್ ಗೆ ಕಳಿಸಿಕೊಡಬೇಕಿದೆ, ಈ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕುಗಳ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ, ಆಡಳಿದ ಸರಕಾರ ಸಾಧನೆ ಶೂನ್ಯ. ಸರಕಾರದ ವೈಫಲ್ಯಗಳನ್ನು ಎತ್ತಿ ಹಿಡಿದು ಸಮಸ್ಯೆಗಳ ಪರಿಹಾರ ದೊರಕಿಸುವ ಸಾಮರ್ಥ್ಯ ಡಾ.ಸರ್ಜಿ ಅವರಿಗಿದೆ. ಈ ನಿಟ್ಟಿನಲ್ಲಿ ವೈದ್ಯ ಡಾ.ಧನಂಜಯ ಸರ್ಜಿ ಅವರನ್ನು ಪಕ್ಷವು ಸ್ಪರ್ಧೆಗಿಳಿಸಿದ್ದು,ನೂರಕ್ಕೆ ನೂರರಷ್ಟು ಗೆಲುವು ಖಚಿತ ಎಂದು ಭರವಸೆ ವ್ಯ ಕ್ತಪಡಿಸಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಸಮಿತಿ ಉಪಾಧ್ಯಕ್ಷರಾದ ಕುಬೇಂದ್ರಪ್ಪ ಮಾತನಾಡಿ, ಮಾನ್ಯ ನರೇಂದ್ರ ಮೋದಿ ಜೀ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂಬ ಮಹದಾಸೆಯೊಂದಿಗೆ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳನ್ನು ನೀಡಿದ್ದಾರೆ, ಅದೇ ರೀತಿ ಪದವೀಧರರ ಪ್ರತಿನಿಧಿಯಾಗಿ ಡಾ.ಧನಂಜಯ ಸರ್ಜಿ ಅವರು ನಿಂತಿದ್ದಾರೆ, ಅವರಿಗೆ ಪ್ರಜ್ಞಾವಂತರೆಲ್ಲರೂ ಮತಗಳನ್ನು ನೀಡುವ ಮೂಲಕ ಜಯಶೀಲರನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್ ಮಾತನಾಡಿ, ನೈರುತ್ಯ ಪದವೀಧರರ ಕ್ಷೇತ್ರವು ಆರಂಭಗೊಂಡಾಗಿನಿಂದ ಆರು ಚುನಾವಣೆಗಳು ನಡೆದಿವೆ, ಆರೂ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ವಿಧಾನ ಪರಿಷತ್ ನಲ್ಲಿ ಧ್ವನಿ ಎತ್ತಿ ಪದವೀಧರರ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲರು ಎಂಬ ನಂಬಿಕೆಯಿಂದ ಪಕ್ಷ ತೀರ್ಮಾನ ಮಾಡಿ ಡಾ.ಧನಂಜಯ ಸರ್ಜಿ ಅವರಿಗೆ ಟಿಕೆಟ್ ನೀಡಿದೆ, ಹಾಗಾಗಿ ಸಮರ್ಥರಾಗಿರುವ ಇವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ, ವೈದ್ಯನಾಗಿ ಸೇವೆಲ್ಲಿಸುತ್ತಿರುವ ನನಗೆ ಪದವೀಧರರ ಸಮಸ್ಯೆಗಳ ಸಂಪೂರ್ಣ ಅರಿವಿದೆ, ವಿಧಾನ ಪರಿಷತ್ ಗೆ ನನ್ನನ್ನು ಆಯ್ಕೆ ಮಾಡಿ ಕಳಿಸಿದರೆ ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲೆ, ಪ್ರತಿ ಮತದಾರರನ್ನು ವೈಯಕ್ತಿಕವಾಗಿ ಕಷ್ಟದ ಕೆಲಸ, ಹಾಗಾಗಿ ಕಾರ್ಯಕರ್ತರು ಪ್ರತಿ ತಲುಪಲು ಸಾಧ್ಯ, ಈ ನಿಟ್ಟಿನಲ್ಲಿ ಗೆಲುವಿಗೆ ಕಾರಣರಾಗಬೇಕು ಎಂದು ವಿನಂತಿಸಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುರೇಶ್ ಮಾತನಾಡಿ, ನೈರುತ್ಯ ಪದವೀಧರ ಮತ್ತು ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹಾರ ನೀಡಬಲ್ಲ ಶಕ್ತಿ ಡಾ.ಧನಂಜಯ ಸರ್ಜಿ ಹಾಗೂ ಎಸ್.ಎಲ್.ಭೋಜೇಗೌಡರಿಗಿದೆ, ಹಾಗಾಗಿ ಮತದಾರರು ಮತವನ್ನು ನೀಡಿ ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಂಜುನಾಥ್, ಜಿಲ್ಲಾ ಮಾಜಿ ಉಪಾಧ್ಯಕ್ಷ ಸುರೇಂದ್ರ ನಾಯ್ಕ್, ಶಿವಮೊಗ್ಗ ಜಿಲ್ಲಾ ಸಿ.ಎಚ್.ಮಾಲತೇಶ್, ಜಿಲ್ಲಾ ಬಿಜೆಪಿ ಖಂಜಾಂಚಿ ಎನ್. ಡಿ. ಸತೀಶ್, ಅರಕೆರೆ ನಾಗರಾಜ್ ಮತ್ತಿತರರು ಹಾಜರಿದ್ದರು.