ಡಾ.ಬಾಲಕೃಷ್ಣ ಹೆಗಡೆಯವರ ವಿಶೇಷ ರಾಜಕೀಯ ವಿಶ್ಲೇಷಣೆ;ಕರ್ನಾಟಕ ನೈಋತ್ಯ ಪದವೀಧರ, ಶಿಕ್ಷಕ ಕ್ಷೇತ್ರದ ಚುನಾವಣೆ-೨೦೨೪ ಓಟ್ ಫಾರ್ ಒ.ಪಿ.ಎಸ್.ಅಭಿಯಾನ: ಮತದಾರನ ಮನ ಗೆಲ್ಲುವವರಾರು?

ಕರ್ನಾಟಕ ನೈಋತ್ಯ ಪದವೀಧರ, ಶಿಕ್ಷಕ ಕ್ಷೇತ್ರದ ಚುನಾವಣೆ-೨೦೨೪

ಟ್ ಫಾರ್ ಒ.ಪಿ.ಎಸ್.ಅಭಿಯಾನ: ಮತದಾರನ ಮನ ಗೆಲ್ಲುವವರಾರು?

 ಲೋಕಸಭಾ ಚುನಾವಣೆ ಮುಗಿದಿದೆ. ಫಲಿತಾಂಶದ ವಿಶ್ಲೇಷಣೆಯ ಗುಂಗಿನಲ್ಲಿರುವಾಗಲೇ ರಾಜಕೀಯ ಪಕ್ಷಗಳಿಗೆ ಮತ್ತೊಂದು ಚುನಾವಣೆ ಎದುರಾಗಿವೆ. ಇದರ ತಯಾರಿ ಮಾಡುವಷ್ಟರಲ್ಲಿ ಚುನಾವನೆಯೇ ಮುಗಿಯುತ್ತದೆ. ಕೆಲವು ಪಕ್ಷಗಳು ಮೊನ್ನೆ ಮೊನ್ನೆಮೊನ್ನೆಯಷ್ಟೇ ತಮ್ಮ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದರೆ ಕೆಲವರು 4-5 ತಿಂಗಳಿನಿಂದ ವ್ಯವಸ್ಥಿತ ತಯಾರಿ ಮಾಡಿಕೊಂಡಿದ್ದಾರೆ

ಕರ್ನಾಟಕ ವಿಧಾನ ಪರಿಷತ್ತಿನ ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಗೆ ನಡೆಯುವ ೨೦೨೪ರ ಚುನಾವಣೆ ಅನೇಕ ಸಂಗತಿಗಳಿಂದ ಗಮನ ಸೆಳೆಯುವಂತಾಗಿದೆ. ಒಂದೆಡೆ ರಾಷ್ಟ್ರೀಯ ಪಕ್ಷಗಳ ಅಧೀಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯವೆದ್ದ ಆಕಾಂಕ್ಷಿಗಳಾದರೆ ಮತ್ತೊಂದೆಡೆ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದ ಸಮಸ್ಯೆಗಳನ್ನು ಬಗೆಹರಿಸುವ ಸಾಮರ್ಥ್ಯವುಳ್ಳ ವ್ಯಕ್ತಿಗಳನ್ನೇ ಆಯ್ಕೆ ಮಾಡಲು ಪದವೀಧರ-ನೌಕರರ ಸಂಘಟನೆಗಳು  ನೇರವಾಗಿ ಅಖಾಡಕ್ಕೆ ಇಳಿದಿದ್ದಾರೆ. ಇದು ಕಣದಲ್ಲಿರುವ ಅಭ್ಯರ್ಥಿಗಳ ನಿದ್ದೆ ಗೆಡಿಸಿದೆ, ಕುತೂಹಲಕ್ಕೂ ಎಡೆಮಾಡಿಕೊಟ್ಟಿದೆ.
ನೈಋತ್ಯ ಪದವೀಧರ ಕ್ಷೇತ್ರವು ೧೪ ಮೆಡಿಕಲ್ ಕಾಲೇಜು, ೩೦ ಇಂಜಿನಿಯರಿಂಗ ಕಾಲೇಜು, ೧೦೦ಕ್ಕಿಂತ ಹೆಚ್ಚು ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ ಸುಶಿಕ್ಷಿತ ಕ್ಷೇತ್ರವಾಗಿದೆ. ಸುಮಾರು ೮೫ ಸಾವಿರ ಮತದಾರರನ್ನು ಹೊಂದಿರುವ ಈ ಕ್ಷೇತ್ರ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉಡುಪಿ, ಮಂಗಳೂರು, ದಕ್ಷಿಣ ಕನ್ನಡ ಹಾಗೂ ದಾವಣಗೆರೆ ಜಿಲ್ಲೆಯ ಹೊನ್ನಾಳಿ, ಚೆನ್ನಗಿರಿ ಮತ್ತು ನ್ಯಾಮತಿ ತಾಲೂಕುಗಳನ್ನು ಹೊಂದಿದೆ.
ಕಾಂಗ್ರೆಸ್ಸಿನಿಂದ ಪದವೀಧರ ಕ್ಷೇತ್ರಕ್ಕೆ ಅಧಿಕೃತ ಅಭ್ಯರ್ಥಿಯಾಗಿ ಆಯನೂರು ಮಂಜುನಾಥ ಸ್ಪರ್ಧೆಗಿಳಿದಿದ್ದಾರೆ. ಈಗಾಗಲೇ ಅನೇಕ ವರ್ಷಗಳಿಂದ ಅನ್ಯಾಯಕ್ಕೊಳಗಾದ ಶಿಕ್ಷಕರ, ಶಿಕ್ಷಕೇತರರ ಹಾಗೂ ಕಾರ್ಮಿಕರ ಸಮಸ್ಯೆಗಳ ವಿರುದ್ಧ ಹೋರಾಡುತ್ತ ಬಂದವರಾಗಿದ್ದಾರೆ. ಅದೇ ಪಕ್ಷದ ಈ ಹಿಂದೆ ಎರಡು ಬಾರಿ ಪರಿಷತ್ ಚುನಾವಣೆಗೆ ಸ್ಪರ್ಧಿಸಿ ಸೋತಿರುವ ಎಸ್.ಪಿ.ದಿನೇಶ ಅವರು ತಮಗೆ ಟಿಕೆಟ್ ಸಿಗಲಿಲ್ಲ ಎಂಬ ಅಸಮಾಧಾನದಿಂದ ಬಂಡಾಯವಾಗಿ ಸ್ಪರ್ಧಿಸುತ್ತಿದ್ದಾರೆ. ಇನ್ನು ಶಿಕ್ಷಕರ ಕ್ಷೇತ್ರಕ್ಕೆ ಎನ್.ಡಿ.ಎ. ಅಭ್ಯರ್ಥಿಯಾಗಿ ಹಾಲಿ ಶಾಸಕರಾಗಿರುವ ಜೆ.ಡಿ.ಎಸ್.ನ ಭೋಜೇಗೌಡರು ಮತ್ತೆ ಕಣಕ್ಕಿಳಿದಿದ್ದಾರೆ. ಬಿಜೆಪಿಯೊಳಗಿಂದಲೇ ಅವರ ಸ್ಪರ್ಧೆಗೆ ವಿರೋಧ ವ್ಯಕ್ತವಾಗುತ್ತಿದೆ. ಇವರಿಗೆ ಪ್ರತಿಸ್ಪರ್ಧಿಯಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿ.ಅವರ ಆಪ್ತರೂ ಈ ಹಿಂದೆ ಎರಡು ಬಾರಿ ಸ್ಪರ್ಧಿಸಿ ಕೆಲವೇ ಮತಗಳಿಂದ ಪರಾಭವ ಹೊಂದಿದ್ದ ಕೆ.ಕೆ.ಮಂಜುನಾಥ ಪುನ: ಫೀಲ್ಡಿಗಿಳಿದಿದ್ದಾರೆ. ಶಿವಮೊಗ್ಗದ ಯುವ ವಕೀಲ ಷಡಕ್ಷರಿಯವರೂ ಕಣದಲ್ಲಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ರಾಜ್ಯದ ಪದವೀಧರರ, ಶಾಲಾ ಕಾಲೇಜು ಶಿಕ್ಷಕ-ಶಿಕ್ಷಕೇತರರ ಹಲವಾರು ಸಮಸ್ಯೆಗಳು ಪರಿಹಾರವಾಗದೆ ಹಾಗೆಯೇ ಉಳಿದುಕೊಂಡಿವೆ. ತಾವು ಆರಿಸಿ ಕಳುಹಿಸಿದ ಅನೇಕ ಸದಸ್ಯರು ಪರಿಷತ್ತಿನಲ್ಲಿ ಸಮಸ್ಯೆಗಳ ಬಗ್ಗೆ ಸರಿಯಾಗಿ ಪ್ರಸ್ತಾಪಿಸದೆ, ಚರ್ಚೆಯನ್ನೂ ಮಾಡದೆ ಸಮಸ್ಯೆಗಳ ಸರಮಾಲೆಗಳು ಹಾಗೆಯೇ ಉಳಿಯುವಂತೆ ನೋಡಿಕೊಂಡಿರುವುದು ದುರ್ದೈವದ ಸಂಗತಿ. ವಿಶೇಷವಾಗಿ ಹೊಸ ಪಿಂಚಣಿ (ಎನ್.ಪಿ.ಎಸ್.) ಪದ್ಧತಿಯ ರದ್ಧತಿಗೆ ಆಸಕ್ತಿ ತೋರದಿರುವುದು, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಿಗೆ ಕಾಲ್ಪನಿಕ ವೇತನ ಸೌಲಭ್ಯ ನೀಡದಿರುವುದು, ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಕೊಡಿಸದೇ ಇರುವುದು, ಯುಯುಸಿಎಂಎಸ್ ಸಾಫ್ಟ್ ವೇರ್ ನಿಂದಾಗುತ್ತಿರುವ ಆವಾಂತರ, ಅನುದಾನಿತ ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ ನೀಡಬೇಕಾದ ಅನುಪಾತ ಗಳಿಕೆ ರಜೆಯನ್ನು ಹಿಂದಿನ ಸರ್ಕಾರ ರದ್ದುಗೊಳಿಸಿರುವುದು,  ಇತ್ಯಾದಿಗಳ ಬಗ್ಗೆ ಹಾಲಿ ಪದವೀಧರ-ಶಿಕ್ಷಕರ ಕ್ಷೇತ್ರದ ಶಾಸಕರು ಸ್ಪಂದಿಸುತ್ತಿಲ್ಲ ಎಂಬ ತೀವ್ರ ಆಕ್ರೋಶ ಈಗಿನ ಮತದಾರರಲ್ಲಿದೆ.
ಈ ಹಿಂದಿನ ಪರಿಷತ್ ಚುನಾವಣೆಯಲ್ಲಿ ಆಯನೂರು ಬಿ.ಜೆ.ಪಿ.ಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಆದರೆ ಈಗ ಅವರು ಕಾಂಗ್ರೆಸ್ ಪಕ್ಷ ಸೇರಿ ಆ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಆಡಳಿತ ಪಕ್ಷದ ಸದಸ್ಯರಾಗಿದ್ದರೂ ಒಪಿಎಸ್ ಜಾರಿಗೆ, ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಬಗ್ಗೆ, ಪದವೀಧರ, ಶಿಕ್ಷಣ ಸಂಸ್ಥೆಗಳ ನೌಕರರ ಪರವಾಗಿ ನಿಷ್ಟುರವಾಗಿಯೇ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದರು. ಶಾಸನ ಸಭೆಯಲ್ಲಿ ಶಿಕ್ಷಕರ ಪರವಾಗಿ ಮಾತನಾಡಿದಾಗ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದೇ ಇದ್ದಾಗ ಮತ್ತು ೨೦೦೬ನಂತರ ಶಾಸಕರಾದವರಿಗೆ ಹಳೆ ಪಿಂಚಣಿಯನ್ನೂ ಪ್ರಶ್ನಿಸಿದ್ದು ಶಿಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದೆ. ಕೇವಲ ಶಾಸಕರ ಭತ್ಯೆ ಇನ್ನಿತರ ಲಾಭಗಳ ಬಗ್ಗೆಯೇ ಚರ್ಚೆ ಇಲ್ಲದೆ ಅನುಮೋದನೆ ಪಡೆಯುವ ಶಾಸನ ಸಭೆಯ ಪ್ರವೃತ್ತಿಯನ್ನು ಪ್ರಶ್ನಿಸುವುದರ ಮೂಲಕ  ಸಾರ್ವಜನಿಕರ ಮನಸ್ಸಿನಲ್ಲಿ ಇವರು ವಿಭಿನ್ನವಾಗಿ ಕಾಣುತ್ತಾರೆ. ಈ ತರಹದ ಇವರ ಗುಣ, ಕಾಳಜಿ ಮತ್ತು ಹೋರಾಟ ಪಕ್ಷಾತೀತವಾಗಿ ಮೆಚ್ಚುಗೆಯನ್ನು ಪಡೆದಿದ್ದು ಇವರಿಗೆ ಮತ ನೀಡುವ ವಿಷಯ ಬಂದಾಗ ಪಕ್ಷ, ಇನ್ನಿತರ ಅಂಶಗಳನ್ನು ನೋಡಬಾರದೆಂಬ ಅಭಿಪ್ರಾಯ ಮತದಾರರಲ್ಲಿ ದಟ್ಟವಾಗಿ ಕಂಡುಬರುತ್ತಿದೆ. ಈ ಕಾರಣಕ್ಕಾಗಿಯೇ ಇವರು ಗೆದ್ದರೆ ಸರ್ಕಾರದಿಂದ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸುಲಭ ಸಾಧ್ಯ  ಎಂಬುದು ಕ್ಷೇತ್ರದಾದ್ಯಂತ ಕೇಳಿ ಬರುತ್ತಿರುವ ಮಾತಾಗಿದೆ.
ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಡಾ.ಧನಂಜಯ ಸರ್ಜಿ ಅವರು ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ರಾಜಕೀಯಕ್ಕೆ ತೀವ್ರ ಹೊಸಬರು. ಕಳೆದ ಒಂದು ವರ್ಷದ ಹಿಂದಷ್ಟೇ ಬಿಜೆಪಿ ಪಕ್ಷಕ್ಕೆ ಸೇರಿದವರು. ನೌಕರರ ಸಮಸ್ಯೆಗಳ ಬಗ್ಗೆ ಅವರಿಗೆ  ಗಂಧ-ಗಾಳಿ ಇಲ್ಲ. ಅಲ್ಲದೆ  ಈ ಹಿಂದೆ ಶಿವಮೊಗ್ಗ ರಾಗಿಗುಡ್ಡದಲ್ಲಿ ನಡೆದ ಗಲಾಟೆ ಸಂದರ್ಭದಲ್ಲಿ ಎಡ ಪಂಥೀಯ ಹಿನ್ನೆಲೆಯವರು ಆಯೋಜಿಸಿದ್ದ ‘ನಮ್ಮ ನಡೆ ಶಾಂತಿಯೆಡೆ’ ಜಾಥಾದಲ್ಲಿ ಭಾಗವಹಿಸುವುದರ ಮೂಲಕ  ಅಶಾಂತಿಗೆ ಬಿಜೆಪಿಗರೇ ಕಾರಣ ಎಂಬುವುವರ ಜತೆ ಕೈ ಜೊಡಿಸಿದ್ದರು ಎಂಬ ಗಂಭೀರ ಆರೋಪವನ್ನು ಅವರದೇ ಪಕ್ಷದ ಮುಖಂಡರಾದ ವಕೀಲ ಪ್ರವೀಣ ಮಾಡಿದ್ದಾರೆ.  ಘಟನೆಯನ್ನು ಬಿಜೆಪಿ ಮತ್ತು ಹಿಂದುತ್ವ ವಾದಿಗಳು ಇನ್ನೂ ಮರೆತಿಲ್ಲ. ಇದಲ್ಲದೆ ಇಲ್ಲಿಯ ವರೆಗೆ ನೌಕರರ ಪರವಾಗಿ ಯಾವ ಹೋರಾಟಗಳಲ್ಲಿಯೂ ಭಾಗಿಯಾಗಿಲ್ಲ ಎನ್ನುವುದು ಎಲ್ಲರ ಅಭಿಪ್ರಾಯವಾಗಿದೆ.
ಮೇಲಾಗಿ ಹಿಜಾಬ್ ಹೋರಾಟಕ್ಕೆ ಮುನ್ನುಡಿ ಬರೆದ ಕೆ.ರಘುಪತಿ ಭಟ್ ಅವರಿಗೆ ಟಿಕೆಟ್ ನಿರಾಕರಿಸಿರುವುದು ಹಿಂದುತ್ವ ವಾದಿಗಳ ಕಣ್ಣು ಕೆಂಪಾಗಿಸಿದೆ. ಪಕ್ಷಕ್ಕಾಗಿ ದುಡಿದ ಮೂಲ ಕಾರ್ಯಕರ್ತರಾದ ಗಿರೀಷ ಪಟೇಲ್, ಧರ್ಮಪ್ರಸಾದ್, ದತ್ತಾತ್ರಿ, ಎಂ.ಶಂಕರ್ ಮತ್ತು ಪ್ರವೀಣ ಅವರಿಗೆ ಅವಕಾಶ ನೀಡದಿರುವುದು ಕಾರ್ಯಕರ್ತರಲ್ಲಿ ನಿರುತ್ಸಾಹ ಮೂಡಿಸಿದೆ.
ಇತ್ತ ಆಡಳಿತ ಪಕ್ಷ ಸಂಘಟಿತವಾಗಿ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಯತ್ನಿಸುತ್ತಿರುವುದು, ಒಪಿಎಸ್ ಜಾರಿ ಅದರ ಪ್ರಣಾಳಿಕೆಯ ಭಾಗವಾಗಿರುವುದು ಮತ್ತು ೧೧,೩೩೬ ಸರ್ಕಾರಿ ನೌಕರರನ್ನು ಒಪಿಎಸ್‌ಗೆ ಒಳಪಡಿಸಿ ೨೪-೦೧-೨೦೨೪ರಂದು ಆದೇಶ ಮಾಡಿರುವುದು ಆಯನೂರು ಮಂಜುನಾಥ ಅವರ ಗೆಲುವಿನ ಹಾದಿಯನ್ನು ಸುಗಮಗೊಳಿಸುತ್ತಿದೆ. ಕಾಂಗ್ರೆಸ್ಸಿನ ಎಸ್.ಪಿ.ದಿನೇಶ ಅವರು ಸಹಕಾರ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದವರು. ಈ ಹಿಂದೆ ಎರಡು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೂ ಇವರ ಪ್ರಭಾವ ಶಿವಮೊಗ್ಗಕ್ಕಷ್ಟೇ ಸೀಮಿತವಾಗಿದೆ. ಉಳಿದಂತೆ ಇವರು ಕಳೆದ ಬಾರಿ ಪಡೆದ ಬಹುತೇಕ ಮತಗಳು ಕಾಂಗ್ರೆಸ್ ಪಕ್ಷದ್ದಾಗಿದ್ದು ಇದರ ಲಾಭ ಆಯನೂರು ಅವರಿಗೆ ಆಗುತ್ತದೆ ಎನ್ನಲಾಗುತ್ತಿದೆ. ಮುಂದುವರಿದು ಆಯನೂರು ಅವರಿಗೆ ಆಪ್ತರಾಗಿರುವ ಬಿಜೆಪಿಯ ಅನೇಕರು ಆಯನೂರು ಮಂಜುನಾಥ ಅವರಿಗೆ ಬೆಂಬಲಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ರಾಜಕಾರಣದಲ್ಲಿ ಪಕ್ಷವನ್ನು ಮೀರಿ ಹೊಂದಿದ ಸಂಬಂಧಗಳ ಕಾರಣದಿಂದ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಒಂದು ಕ್ಷೇತ್ರದಿಂದ ಹೊರಟ್ಟಿಯವರು ಗೆದ್ದರೆ ಅವರ ವಿರೋಧಿ ಪಕ್ಷದಿಂದ ಪದವೀಧರ ಕ್ಷೇತ್ರದಲ್ಲಿ ಎಚ್.ಕೆ.ಪಾಟೀಲರು ಗೆಲ್ಲುತ್ತಿದ್ದರು. ತೀರ ಇತ್ತೀಚೆಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಪುಟ್ಟಣ್ಣ ಅವರ ಗೆಲುವಿಗೆ ಯಾರ್‍ಯಾರು ಸಹಕರಿಸಿದ್ದರೆಂಬ ಪೋಸ್ಟ್ ಮಾರ್ಟಂ ಮಾಡಿದರೆ ಅದರ ನೆರಳು ನೈಋತ್ಯ ಪದವೀಧರ ಕ್ಷೇತ್ರದಲ್ಲೂ ಕಂಡುಬರುತ್ತದೆ.
೨೦೨೩ರ ಆರಂಭದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ  ಅನುದಾನಿತ ಶಿಕ್ಷಣ ಸಂಸ್ಥೆಗಳ ಹಳೆ ಪಿಂಚಣಿ ವಂಚಿತ ನೌಕರರು ಸುಮಾರು ೧೪೫ ದಿನಗಳ ಕಾಲ ಹೊಸ ಪಿಂಚಣಿ ಪದ್ಧತಿಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೇ ಜಾರಿಗೊಳಿಸಬೇಕು ಮತ್ತು ಕರ್ನಾಟಕ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಪಿಂಚಣಿ ಕಾಯ್ದೆ ೨೦೧೪ನ್ನೂ ರದ್ದುಗೊಳಿಸಿ ಅನುದಾನಿತ ನೌಕರರಿಗೆ ನ್ಯಾಯ ಒದಗಿಸಿಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿ ಉಪವಾಸ, ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದರೂ ಅಂದಿನ ಸರ್ಕಾರ ಜವಾಬ್ದಾರಿಯುತವಾಗಿ ಸ್ಪಂದಿಸಲಿಲ್ಲ ಮತ್ತು ಕಣ್ಣೊರೆಸುವ ತಂತ್ರದ ಭಾಗವಾಗಿ ಅಂದಿನ ಆರೋಗ್ಯ ಸಚಿವರನ್ನು ಕಳುಹಿಸಿ ಬೇಡಿಕೆ ಈಡೇರಿಸುವ ಹುಸಿ ಭರವಸೆಯನ್ನು ನೀಡಲಾಗಿತ್ತು. ಆದರೆ ಎಂ.ಎಲ್.ಸಿ. ಪುಟ್ಟಣ್ಣನವರ ಮಧ್ಯಸ್ಥಿಕೆಯಲ್ಲಿ  ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಧರಣಿ ನಿರತರನ್ನು ಭೇಟಿ ಮಾಡಿ ಒಪಿಎಸ್ ಜಾರಿಗೊಳಿಸುವ ಭರವಸೆ ನೀಡಿದರು.  ಇವರು ಅಂದು ನೀಡಿದ ಭರವಸೆಯು ಜಾರಿಗೆ ಬಂದೇ ಬರುತ್ತದೆ ಎಂಬ ಬಲವಾದ ನಂಬಿಕೆಯಲ್ಲಿ ಎನ್.ಪಿ.ಎಸ್.ನೌಕರರಿರುವುದು ಆಯನೂರು ಗೆಲ್ಲುವ ಅವಕಾಶವನ್ನು ಹೆಚ್ಚಿಸಿದೆ.
ಈಗಿರುವ ಹೊಸ ಪಿಂಚಣಿ ಕಾಯ್ದೆ ಈ ಹಿಂದೆ ಕೇಂದ್ರದಲ್ಲಿದ್ದ ಎನ್.ಡಿ.ಎ.ಸರ್ಕಾರದ ನೌಕರರ ವಿರೋಧಿ ಕೊಡುಗೆ.  ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಎನ್.ಪಿ.ಎಸ್.ಯೋಜನೆಯ ಅನುಷ್ಠಾನದ ಆದೇಶವನ್ನು ಅಂದಿನ ಸಿ.ಎಂ.ಆಗಿದ್ದ ಬಿ.ಎಸ್.ಯಡಿಯೂಪ್ಪನವರು ೨೦೧೦ಲ್ಲಿ ಹೊರಡಿಸಿದರು. ಆದರೆ ಆದೇಶ ಹೊರಡಿಸಿದ ನಂತರ ನೇಮಕವಾದ ನೌಕರರಿಗೆ ಅನ್ವಯಿಸಬೇಕಾದ ಕಾನೂನನ್ನು ೧-೦೪-೨೦೦೬ರ ಪೂರ್ವಾನ್ವಯ ಮಾಡಿದ್ದರಿಂದ ಸಕಾರದ ದೊಡ್ಡ ಸಂಖ್ಯೆಯ ನೌಕರರಿಗೆ ಅನ್ಯಾಯವಾಯಿತು.  ಕಡೇ ಪಕ್ಷ ಹಿಂದಿನ ರಾಜ್ಯ ಸರ್ಕಾರ ೨೦೦೬ರಿಂದ ೨೦೧೦ರ ವರೆಗೆ ನೇiಕಾತಿ ಹೊಂದಿದ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ ನೌಕರರನ್ನು ಎನ್.ಪಿ.ಎಸ್.ಯೋಜನೆಯಿಂದ ಹೊರತುಪಡಿಸಿದ್ದರೆ ‘ಓಟ್ ಫಾರ್ ಒ.ಪಿ.ಎಸ್.’ ಅಭಿಯಾನಗಳು ನಡೆಯುತ್ತಿರಲಿಲ್ಲ.
ಈ ರೀತಿ ಕಾನೂನುಗಳನ್ನು ಜಾರಿಗೊಳಿಸುವಾಗ ಸ್ವಲ್ಪ ಮಟ್ಟಿನ ವಿವೇಚನೆ, ವಿವೇಕ, ಸಾಧಕ ಭಾದಕಗಳ ಬಗ್ಗೆ ಯೋಚಿಸದೆ ಅಧಿಕಾರಿಗಳ ಮಾತನ್ನೇ ಕೇಳಿ ತೆಗೆದುಕೊಳ್ಳುವ ಏಕ ಮುಖ ನಿರ್ಧಾರ ಇಂಥಹ ಪ್ರಮಾದಗಳಿಗೆ ಕಾರಣವಾಗುತ್ತದೆ. ಕೊನೇ ಪಕ್ಷ ೨೦೧೦ರ ಪೂರ್ವದಲ್ಲಿ ನೇಮಕಾತಿ ಆದವರಿಗೆ ಮೊದಲ ಹಂತದಲ್ಲಿ ಒಪಿಎಸ್ ಜಾರಿ ಮಾಡಿ ನಂತರ ಹಂತ ಹಂತವಾಗಿ ಮಾಡಬೇಕೆನ್ನುವ ನೌಕರರ ಕೋಗಿಗೆ ಆಯನೂರು ಧ್ವನಿಯಾಗಿದ್ದಾರೆ ಎಂಬ ನಂಬಿಕೆಯೇ ಅವರ ಕೈ ಹಿಡಿಯುತ್ತಿದೆ ಎನ್ನಲಾಗುತ್ತಿದೆ.
ನೌಕರರ ಕುಟುಂಬಗಳ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಸದರಿ ಮಾರಕ ಕಾಯ್ದೆಯನ್ನು ತಿದ್ದುಪಡಿ ಮಾಡುವ ಪ್ರಯತ್ನವನ್ನು ರಾಜ್ಯದಲ್ಲಿರುವ ೨೫ ಬಿಜೆಪಿ ಎಂ.ಪಿ.ಗಳು ಮಾಡಬಹುದಿತ್ತು. ಅದನ್ನೂ ಮಾಡಲಿಲ್ಲ ಎಂಬ ಕೊರಗು ನೌಕರರಲ್ಲಿದೆ.  ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಬಂದರೆ ಸರ್ಕಾರ ಎಲ್ಲಿಂದ ದುಡ್ಡು ತರಬೇಕು. ಇದೇನು ಹುಡುಗಾಟವೇ? ಎಂದು ಹಾಲಿ ವಿಧಾನ ಪರಿಷತ್‌ನ ಬಿಜೆಪಿಯ ಕೆಲ ಸದಸ್ಯರೇ ಖಾಸಗಿಯಾಗಿ ಮತದಾರರಲ್ಲಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ ಎಂಬ ಸತ್ಯವೂ ಗುಟ್ಟಾಗಿ ಉಳಿದಿಲ್ಲ. ೨೦೦೬ರ ನಂತರ ಆಯ್ಕೆಯಾದ ಶಾಸಕರಿಗೆ ಮತ್ತು ನ್ಯಾಯಾಂಗದ ನೌಕರರಿಗೆ ಒಪಿಎಸ್ ನೀಡುತ್ತಿರುವುದೇಕೆ ಎಂಬ ಪ್ರಶ್ನೆಗೆ ಇವರ ಬಳಿ ಉತ್ತರವಿಲ್ಲ.
೨೦೨೩ ಮಾರ್ಚ ೧ ರಂದು ಏಳನೇ ವೇತನ ಆಯೋಗ ಜಾರಿ ಮತ್ತು ಒಪಿಎಸ್ ಜಾರಿ ಹೋರಾಟವನ್ನು ಹಮ್ಮಿಕೊಂಡ ರಾಜ್ಯ ಸರ್ಕಾರಿ ನೌಕರರ ಸಂಘ ಕೇವಲ ಒಂದು ಗಂಟೆಯೊಳಗೆ ಚಳುವಳಿ ಹಿಂತೆಗೆದುಕೊಂಡಾಗ ಮತ್ತು ಒಪಿಎಸ್ ಜಾರಿಗಾಗಿ ಅಂದೇ ಸಮಿತಿ ರಚನೆಯಾದಾಗ ಇದೊಂದು ಬ್ರಹನ್ನಾಟಕ ಎಂದು ಎಲ್ಲ ನೌಕರರಿಗೂ ಅರ್ಥವಾಗಿತ್ತು. ಇದು ನಾಟಕವಲ್ಲದಿದ್ದರೆ ಆ ಸಮಿತಿಯು ಸಭೆ ನಡೆಸಿ ಕಾಲಮಿತಿಯೊಳಗೆ ವರದಿಯನ್ನಾದರೂ ನೀಡುತ್ತಿತ್ತು. ಈ ನಾಟಕ ಅರ್ಥವಾಗಿದ್ದರಿಂದಲೇ ‘ಓಟ್ ಫಾರ್ ಒ.ಪಿ.ಎಸ್.ಅಭಿಯಾನ’ ನಡೆಯಿತು. ಇದರ ಪರಿಣಾಮ ಹಿಂದಿನ ಸರ್ಕಾರ ಬಿದ್ದು ಹೋಯಿತು. ಜೂನ್ ೬ರ ನಂತರ ಒಪಿಎಸ್ ಜಾರಿಗೊಳಿಸುತ್ತಾರೆಂಬ ನಂಬಿಕೆಯೇ ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತ ಪಕ್ಷದ ಕೈ ಹಿಡಿಯುತ್ತದೆ ಎನ್ನಲಾಗುತ್ತಿದ್ದು ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಆಯ್ಕೆಯಾಗುವ ಜನಪ್ರತಿನಿಧಿಗಳ ಮೇಲಿರುತ್ತದೆ.
ಇನ್ನು ರಾಜ್ಯದ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ ಯುಜಿಸಿ ನಿಯಮಾವಳಿ ಅನುಸಾರ ಅವರವರ ಸೇವಾ ಪದೋನ್ನತಿ  ದಿನಾಂಕದಿಂದಲೇ ಆರ್ಥಿಕ ಸೌಲಭ್ಯ ನೀಡಬೆಕೆಂಬ ಯುಜಿಸಿ ಆದೇಶವನ್ನು ಹಿಂದಿನ ಸರ್ಕಾರ ೨೦೨೨ರಲ್ಲಿ ಬದಿಗಿರಿಸಿ ಆದೇಶವನ್ನು ಹೊರಡಿಸಿತ್ತು. ಇದು ರಾಜ್ಯದಲ್ಲಿರುವ ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು ೧೪ ಸಾವಿರ ಶಿಕ್ಷಕರ ಮೇಲೆ ಪರಿಣಾಮ ಬೀರಿತ್ತು. ಹಿಂದಿನ  ಸರ್ಕಾರದ ಈ ಆದೇಶವನ್ನು ೨೬-೦೨-೨೦೨೪ರಂದು ಕೆ.ಎ.ಟಿ.ರದ್ದುಗೊಳಿಸಿದ್ದು, ಈ ಸರ್ಕಾರ ಕೆ.ಎ.ಟಿ.ಆದೇಶವನ್ನು ಪಾಲಿಸುತ್ತದೆ ಎಂಬ ನಂಬಿಕೆ ಶಿಕ್ಷಕರ ವಲಯದಲ್ಲಿದೆ.
ಎನ್.ಇ.ಪಿ. ಮತ್ತು ಯುಯುಸಿಎಂಎಸ್ ತಂತ್ರಾಂಶ ದೋಷದಿಂದ ಪದವಿ ವಿದ್ಯಾರ್ಥಿಗಳು ಮತ್ತು ಕಾಲೇಜು  ಸಿಬ್ಬಂಧಿಗಳು ಹೈರಾಣಾಗಿದ್ದು ಇದಕ್ಕೆ ಕಾರಣರಾದವರ ಬಗ್ಗೆ ತೀವ್ರ ಅಸಮಾಧಾನವನ್ನು ಹೊಂದಿರುವುದು ಮತದಾರರ ಮೇಲೆ ಪ್ರಭಾವ ಬೀರಬಹುದಾಗಿದೆ. ಹಲವು ಪದವೀಧರರು ಶಿಕ್ಷಕರ ಕ್ಷೇತ್ರದಲ್ಲಿನ ಅಭ್ಯರ್ಥಿಗೆ ಮತ ಹಾಕುವ ಅಧಿಕಾರ ಹೊಂದಿಲ್ಲವಾದರೂ, ಈ ಶಿಕ್ಷಕರು ಪದವೀಧರರ ಮೇಲೆ ತಮ್ಮ ಅಪಾರ ಪ್ರಭಾವವನ್ನು ಬೀರುತ್ತಾರೆಂಬುದನ್ನು ಅಲ್ಲಗಳೆಯುವಂತಿಲ್ಲ. ಏಕೆಂದರೆ ಶಿಕ್ಷಕರ ಸಮುದಾಯ ಸಮಾಜದಲ್ಲಿ ಅಭಿಪ್ರಾಯ ಮೂಡಿಸುವ ಶಕ್ತಿಯನ್ನು ಹೊಂದಿದೆ.
ಈ ಚುನಾವಣೆಯಲ್ಲಿ ಜಾತಿ,ಪಕ್ಷ, ಹಣ ಬಲಕ್ಕಿಂತಲೂ ತಮ್ಮ ಪ್ರತಿನಿಧಿಯಾಗಲು ಇವರು ಸಮರ್ಥರು ಎನ್ನುವುದೇ ಮಾನದಂಡವಾಗುತ್ತದೆ ಎಂಬುದಕ್ಕೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ನಿಂದ ಆಯ್ಕೆಯಾಗಿರುವ ಪುಟ್ಟಣ್ಣನವರೇ ಉದಾಹರಣೆಯಾಗಿದ್ದಾರೆ. ಇದೇ ಬಗೆಯ ಫಲಿತಾಂಶವು ಆಯನೂರು ಅವರ ವಿಷಯದಲ್ಲೂ ಆಗುತ್ತದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘವೂ ಇವರ ಜತೆ ಇರುವುದು ಆಯನೂರು ಬಲವನ್ನು ಮತ್ತಷ್ಟು ಹೆಚ್ಚಿಸಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಡಾ.ಬಾಲಕೃಷ್ಣ ಹೆಗಡೆ
ರಾಜಕೀಯ ವಿಶ್ಲೇಷಕರು, ಹಿರಿಯ ಪತ್ರಕರ್ತರು
ಶಿವಮೊಗ್ಗ, ಮೊ.೯೪೪೮೧೮೧೪೯೨