ಶಿವರುದ್ರಯ್ಯ ಸ್ವಾಮಿಯವರ ವಿಶೇಷ ಲೇಖನ- ಒಳ ಮೀಸಲಾತಿ ಜಾತಿ ಸಮೀಕ್ಷೆ ಹಳಿ ತಪ್ಪುತ್ತಿದೆ*
*ಒಳ ಮೀಸಲಾತಿ ಜಾತಿ ಸಮೀಕ್ಷೆ ಹಳಿ ತಪ್ಪುತ್ತಿದೆ*~
–
ಶಿವರುದ್ರಯ್ಯ ಸ್ವಾಮಿ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಘಟನೆ ಓಡ್ ಕಮ್ಯೂನಿಟಿ ಕೌನ್ಸಿಲ್ ಆಫ್ ಇಂಡಿಯಾ, ನವದೆಹಲಿ
ದಲಿತ ಸಮುದಾಯವನ್ನು ಒಳ ಮೀಸಲಾತಿ ಹೆಸರಿನಲ್ಲಿ ಸುಪ್ರೀಂ ಕೋರ್ಟ್ ಮುಖಾಂತರ ವಿಭಜಿಸಿದ ಮೇಲು ಸಮುದಾಯದ ರಾಜಕೀಯ ನಾಯಕರ ಮೇಲಾಟ ಈಗ ಕರ್ನಾಟಕದಲ್ಲಿ ಹೊಸ ಹೊಸ ಆಟಗಳಿಗೆ ನಾಟಕಗಳಿಗೆ ವೇದಿಕೆಯಾಗಿದೆ. ದಲಿತರಲ್ಲಿನ ಪರಸ್ಪರ ಅಸೂಯೆ ಮತ್ತು ಮತ್ಸರಗಳನ್ನು ಬಹಳ ಯಶಸ್ವಿಯಾಗಿ ತಮ್ಮ ಚಿಲ್ಲರೆ ರಾಜಕೀಯ ತಂತ್ರಗಾರಿಕೆಗೆ ಬಳಸಿಕೊಂಡ ಬಲಾಢ್ಯ ಸಮುದಾಯಗಳ ನಾಯಕರು ಭವಿಷ್ಯದಲ್ಲಿ ದಲಿತರು ತಮ್ಮೊಳಗೆ ಗುಂಪು ಮಾಡಿಕೊಂಡು ಒಬ್ಬರಿಗೊಬ್ಬರು ದೂರಿಕೊಂಡು ಮುಂದೆ ಎಂದೂ ಮುಖ್ಯಮಂತ್ರಿ ಸ್ಥಾನವನ್ನು ತಮ್ಮ ಸಂಖ್ಯಾ ಬಲದಿಂದ ಪ್ರತಿಪಾದಿಸಲು ಸಾಧ್ಯವಾಗದೆ ಬಲಾಢ್ಯ ಸಮುದಾಯಗಳ ಶಾಶ್ವತ ಹಿಂಬಾಲಕರೂ ಮತ್ತು ಹಿಂಬಾಗಿಲ ದಯಾ ಭಿಕ್ಷುಕರಾಗಿ ಎಷ್ಟು ಇರಬೇಕೋ ಅಷ್ಟು ವ್ಯವಸ್ಥೆಯನ್ನು ಬುದ್ಧಿಗೇಡಿ , ಆಸೆಬುರುಕ, ದುರ್ಬಲ ದಲಿತ ನಾಯಕರ ಮುಖಾಂತರವೇ ದಲಿತರ ಒಟ್ಟು ಬಲವನ್ನು ಒಳ ಮೀಸಲಾತಿ ಹೆಸರಿನಲ್ಲಿ ವಿಭಜಿಸಿ ಪರಸ್ಪರ ಕಚ್ಚಾಡಿ ಕಿತ್ತು ತಿನ್ನುವ ಸ್ಥಿತಿಗೆ ತಂದಿದ್ದಾರೆ. ಆ ಕುತಂತ್ರದ ಮುಂದುವರೆದ ಭಾಗವಾಗಿ ಹುಟ್ಟು ಹಾಕಿರುವ ಜಸ್ಟಿಸ್ ನಾಗಮೋಹನ್ ದಾಸ್ ಆಯೋಗವು ಸಮೀಕ್ಷೆಯ ಹೆಸರಿನಲ್ಲಿ ದಲಿತರಲ್ಲಿ ಬಹಳ ವ್ಯವಸ್ಥಿತವಾಗಿ ಗೊಂದಲಗಳನ್ನು ಸೃಷ್ಟಿಸಿ ದಲಿತರ ನಡುವೆ ಮತ್ತಷ್ಟು ಅಪನಂಬಿಕೆ ಪರಸ್ಪರ ಕೆಸರೆರಚಾಟಕ್ಕೆ ಅಖಾಡವನ್ನು ಸಿದ್ಧ ಮಾಡಿದೆ. ಅದೃಷ್ಟವಶಾತ್ ದಲಿತರು ಯಾವುದೇ ಭಾವೋದ್ವೇಗಕ್ಕೆ ಒಳಗಾಗದೆ ಸಂಯಮದಿಂದ ಆಯೋಗದ ಲೋಪಗಳನ್ನು ಎತ್ತಿ ತೋರಿಸಿ, ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ನೀಡಿದ್ದಾರೆ. ದಲಿತ ಸಂಘಟನೆಗಳ ಮತ್ತು ಮುಖಂಡರ ಈ ನಡೆ ಶ್ಲಾಘನೀಯ. ದಲಿತರ ಈ ಸೌಜನ್ಯವನ್ನು ಆಯೋಗ ದಲಿತರ ದೌರ್ಬಲ್ಯ ಎಂದು ಪರಿಗಣಿಸದೆ ಲೋಪಗಳನ್ನು ಸರಿಪಡಿಸಿಕೊಂಡು ಸಮೀಕ್ಷೆಯನ್ನು ಸರ್ವರಿಗೂ ವೇದ್ಯವಾಗುವಂತೆ ಸಮಂಜಸವಾಗಿ ನಡೆಸಬೇಕು.
ಆಯೋಗದ ಸಮೀಕ್ಷೆಯಲ್ಲಿ ಕಂಡು ಬಂದ ಪ್ರಧಾನ ಲೋಪಗಳು ಇಂತಿವೆ.
1. ಸಂವಿಧಾನದ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕ ಸೇರಿದಂತೆ ಒಟ್ಟು 101 ಜಾತಿಗಳನ್ನು ಮತ್ತು ಆಯಾ ಜಾತಿಗಳ ತತ್ಸಮಾನ ಹೆಸರುಗಳನ್ನು ಸ್ಪಷ್ಟವಾಗಿ ನಮೂದಿಸಿದೆ, ಆದರೆ ಆಯೋಗ ಯಾವ ಉದ್ದೇಶಕ್ಕೆ ಆದಿ ಆಂಧ್ರ, ಆದಿ ದ್ರಾವಿಡ ಮತ್ತು ಆದಿ ಕರ್ನಾಟಕ ಜಾತಿಗಳನ್ನು ಪ್ರದಾನ ಜಾತಿಗಳೆಂದು ಈ ಮೂರು ಜಾತಿಗಳಡಿ ಉಳಿದ 98 ಜಾತಿಗಳನ್ನು ಉಪಜಾತಿ ಎಂದು ಆಯೋಗ ಪರಿಗಣಿಸಿತು. ಸುಪ್ರಿಂ ಕೋರ್ಟ್ ಇವು ಒಂದೇ ಗುಂಪಿನ ಅಂದರೆ ಹೋಮೋಜಿನಿಯಸ್ ಅಲ್ಲ ತಮ್ಮದೇ ಪ್ರತ್ಯೇಕತೆ ಮತ್ತು ಅಸ್ತಿತ್ವ ಇರುವ ಜಾತಿಗಳು ಎಂದ ಮೇಲೆ ಆಂಧ್ರ ಮೂಲದ ಜಾತಿಗಳೆಂದು ಆದಿ ಆಂಧ್ರ ಜಾತಿಯಲ್ಲಿ ಕರ್ನಾಟಕದ ಬಂಜಾರ ಸಮುದಾಯವನ್ನು ಉಪ ಜಾತಿ ಎಂದು ನಮೂದಿಸಿದ ಕಾರಣಕ್ಕೆ ಕಲಬುರ್ಗಿ ಜಿಲ್ಲೆಯ ಜಿಲ್ಲಾಧಿಕಾರಿ ಸಮೀಕ್ಷಕನನ್ನು ಅಮಾನತ್ತು ಮಾಡಿದ್ದಾರೆ. ಇಲ್ಲಿ ಸಮೀಕ್ಷಕನ ತಪ್ಪು ಏನಿದೆ, ಆಯೋಗವು ಬಂಜಾರ ಸಮುದಾಯವನ್ನು ಆದಿ ಆಂಧ್ರದ ಗುಂಪಿನಲ್ಲಿ ಸೇರಿಸಲು ಮಾಡಿಕೊಟ್ಟ ಅವಕಾಶವನ್ನು ಈ ಸಮೀಕ್ಷಕ ತಿಳಿದೋ ತಿಳಿಯದೆಯೋ ಸೇರ್ಪಡೆ ಮಾಡಿರಬಹುದು. ತಿಳಿದು ಮಾಡಿದ್ದರೆ, ತಕ್ಕ ಶಿಕ್ಷೆ ಆತನಿಗೆ ಆಗುತ್ತದೆ. ಅದು ಬೇರೆ ವಿಷಯ, ಆದರೆ ಆಯೋಗವು ಈ ರೀತಿ ಅಕ್ರಮವಾಗಿ ಅಥವಾ ಉದ್ದೇಶಪೂರ್ವಕವಾಗಿ ಈ ಆಯ್ಕೆಯನ್ನು ಸಮೀಕ್ಷೆಯಲ್ಲಿ ನೀಡಿದ್ದೆಂದು ಮುಂದಿನ ತನಿಖೆಯಲ್ಲಿ ಕಂಡು ಬಂದರೆ, ಯಾರನ್ನು ಹೊಣೆ ಮಾಡುವುದು. ಆಯೋಗವು ಯಾವುದು ಎಡ ಮತ್ತು ಬಲ ಎಂದು ಖಚಿತಪಡಿಸಿಕೊಂಡು ಅಂತಹ ಸಮುದಾಯಗಳಿಗೆ ಮಾತ್ರ ಈ AA AD AK ಗುಂಪಿನಲ್ಲಿ ಉಪಜಾತಿ ಸೇರ್ಪಡೆಗೆ ಅವಕಾಶ ನೀಡುವುದನ್ನು ಬಿಟ್ಟು ಸಾರಾಸಗಟಾಗಿ 98 ಸಮುದಾಯಗಳನ್ನು ಈ ಮೂರು ಜಾತಿಯಲ್ಲದ ಜಾತಿಗಳಿಗೆ ಉಪ ಜಾತಿಯೆಂದು ಯಾವ ಆಧಾರದಲ್ಲಿ ನಿರ್ಧರಿಸಿದರು. ಈ ವಿಚಾರದಲ್ಲಿ ಸಾರ್ವಜನಿಕರ ಸಲಹೆ ಮತ್ತು ಅಭಿಪ್ರಾಯ ಕರೆದು ನಂತರದಲ್ಲಿ ಸಮೀಕ್ಷೆಯ ಅಪ್ ನಲ್ಲಿ ಹಾಕುವುದು ಆಯೋಗದ ಕರ್ತವ್ಯ ಆಗಿದ್ದಿತು. ಈಗ ಆಯೋಗದ ಲೋಪಕ್ಕೆ ಅಮಾಯಕ ಸಮೀಕ್ಷಕರನ್ನು ಬಲಿ ಪಶು ಮಾಡುವುದು ನ್ಯಾಯವೇ.
2. ಇನ್ನು ಮುಂದುವರೆದು ಹೇಳುವುದಾದರೆ ಚಮ್ಮಾರ ಸೇರಿದಂತೆ ಕೆಲವು ಸಮುದಾಯಗಳು ನಾವು ಎಡಗೈ ಅಥವಾ ಬಲಗೈ ಗುಂಪು ಅಲ್ಲ ನಮಗೆ ಪ್ರತ್ಯೇಕ ಮೀಸಲಾತಿ ಮತ್ತು ಪ್ರತಿಶತ ಪಾಲು ಕೊಡಿ ಎಂದು ಕೇಳುತ್ತಿದ್ದಾರೆ. ಇವರ ಈ ಅಹವಾಲನ್ನು ಸಮೀಕ್ಷೆಗೆ ಮೊದಲು ಕೇಳಬೇಕಿತ್ತಲ್ಲವೇ. ಇದೇ ರೀತಿ ಅಲೆಮಾರಿ ಸಮುದಾಯಗಳ ಬೇಡಿಕೆ ಮತ್ತು ಅವರನ್ನು ಗುರುತಿಸುವ ಬಗೆ ಮತ್ತು ಮಾನದಂಡಗಳನ್ನು ಗೊತ್ತು ಮಾಡದೆ ಕೇವಲ ರೇಶನ್ ಕಾರ್ಡ್ ಆಧಾರದಲ್ಲಿ ಸಮೀಕ್ಷೆಗೆ ಮುಂದಾಗಿ ಇನ್ನು ಉಳಿದ ಆಧಾರ ಮತ್ತು ದಾಖಲೆಗಳನ್ನು ಪರಿಗಣಿಸದಿರುವ ಕಾರಣಗಳೇನು. ಆಯೋಗ ಈ ಅಂಶಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಷ್ಟೆಲ್ಲಾ ವಿಚಾರಗಳನ್ನು ಸಾವಧಾನವಾಗಿ ಪರಿಗಣಿಸದೆ ದಿಢೀರನೆ ಸಮೀಕ್ಷೆಗೆ ಇಳಿದ ಆಯೋಗದ ಉದ್ದೇಶವೇ ಪ್ರಶ್ನಾರ್ಹ. ಮೊದಲು ಈ ಅಂಶಗಳನ್ನು ಆಯೋಗ ಸಮಚಿತ್ತದಿಂದ ಪ್ರೀತಿಯಿಂದ ಪರಿಗಣಿಸಿ, ಈ ವಿಚಾರಗಳು ಸಾರ್ವಜನಿಕ ಚರ್ಚೆಯಾಗಿ, ಎಡಗೈ, ಬಲಗೈ, ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾಟಕದ ಜಾತಿಗಳನ್ನು ಮೊದಲು ಸ್ಪಷ್ಟ ಪಡಿಸಿ ಮತ್ತು ಈ ಕುರಿತು ಸಮಗ್ರವಾಗಿ ಪ್ರತಿ ಗ್ರಾಮ ಪಂಚಾಯತ್ ಗಳ ಸಭೆ, ನಗರಗಳಲ್ಲಿ ವಾರ್ಡ್ ವಾರು ಸಭೆಗಳ ಮೂಲಕ ಜಾಗೃತಿ ಮೂಡಿಸಿ, ತಕ್ಕಂತೆ ಆ್ಯಪ್ ನ್ನು ಸಿದ್ಧ ಮಾಡಿ ಸೂಕ್ತವಾಗಿ ಸಮೀಕ್ಷಕರಿಗೆ ತರಬೇತಿ ನೀಡಿ ಪ್ರಾಮಾಣಿಕವಾಗಿ ಆಯೋಗ ಸಮೀಕ್ಷೆ ನಡೆಸಲಿ. ಈ ಹಿಂದಿನ ಸದಾಶಿವ ಮತ್ತು ಕಾಂತರಾಜ್ ಆಯೋಗಗಳ ಕೆಸರನ್ನು ಮಾನ್ಯ ಜಸ್ಟಿಸ್ ನಾಗಮೋಹನ್ ದಾಸ್ ಅವರು ಮೆತ್ತಿಕೊಳ್ಳದಿರಲಿ.
3. ಇನ್ನು ಹೊಸ ಸುದ್ದಿಎಂದರೆ ಪರಿಶಿಷ್ಟ ಜಾತಿಪಟ್ಟಿಯಲ್ಲಿ ಇಲ್ಲದ ಜಾತಿಗಳವರು AA AD AK ಅಡಿಯಲ್ಲಿ ಮೀಸಲಾತಿ ಪಡೆದಿರುವುದಾಗಿ ಆಯೋಗದ ಅಧ್ಯಕ್ಷರು ಹೇಳಿದಂತೆ ವರದಿಯಾಗಿರುತ್ತದೆ. ಪಟ್ಟಿಯಲ್ಲಿ ಹೆಸರೇ ಇಲ್ಲದ ಜಾತಿಗಳು ಮೀಸಲಾತಿ ಪಡೆದಿದ್ದಲ್ಲಿ ಇದು ಅಸಂವಿಧಾನಿಕ ಮತ್ತು ಅಕ್ರಮ. ಈ ರೀತಿ ಅಕ್ರಮವಾಗಿ ಮೀಸಲಾತಿ ಪಡೆದಿರುವವರಿಗೆ ಆಯೋಗದ ಸಮೀಕ್ಷೆಯಲ್ಲಿ ಪರಿಗಣಿಸುವ ವಿಚಾರ ಸಮಂಜಸವಲ್ಲ. ಅಕ್ರಮವಾಗಿ ಪಟ್ಟಿಯಲ್ಲಿ ಇಲ್ಲದ ಹೆಸರುಗಳಿಗೆ ಸದರಿ ಸಮೀಕ್ಷೆಯಲ್ಲಿ ಸೇರ್ಪಡೆಗೆ ಕುಮ್ಮಕ್ಕು ನೀಡುತ್ತಿರುವುದು ಸರಿಯಲ್ಲ. ಪಟ್ಟಿಯಲ್ಲಿರುವ ಜಾತಿಗಳಿಗಷ್ಟೇ ಮೀಸಲಾತಿ ಸೀಮಿತ. ಪಟ್ಟಿಯಲ್ಲಿ ಇಲ್ಲದ ಹೆಸರುಗಳಿಗೆ ಅವಕಾಶ ನೀಡುವುದಾದರೆ ಚಮ್ಮಾರ, ಬಂಜಾರ, ದೊಂಬ, ದಾಸರ, ಭೋವಿ , ವಡ್ಡರ ಮತ್ತು ಇಂತಹ ಇತರೆ ಜನಾಂಗದ ಸಮಾನಾಂತರ ಮತ್ತು ಪರ್ಯಾಯ ಹೆಸರುಗಳಿಗೆ ಅವಕಾಶ ನೀಡಬೇಕು. ಇದು ಸಂವಿಧಾನ ತಿದ್ದುಪಡಿ ಆಗದೆ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆ ಆಗದೆ ಸಾಧ್ಯವಾಗದು. ನ್ಯಾಯಮೂರ್ತಿ ಗಳಾಗಿ ಕರ್ತವ್ಯ ನಿರ್ವಹಿಸಿದವರು ಇಂತಹ ಹೇಳಿಕೆ ನೀಡಿದ್ದು ಬಹಳ ಆಶ್ಚರ್ಯ ಉಂಟು ಮಾಡಿದೆ. ಈ ಕುರಿತು ನ್ಯಾಯಮೂರ್ತಿ ನಾಗಮೋಹ ದಾಸ್ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ, ಸ್ಪಷ್ಟಪಡಿಸಬೇಕು. ಈಗಾಗಲೆ ಸಮೀಕ್ಷೆ ಕುರಿತು ಸಲ್ಲಿಸಿರುವ ಅಹವಾಲುಗಳನ್ನು ಅಧ್ಯಕ್ಷರು ಆಲಿಸಿ ಸಮೀಕ್ಷೆಯನ್ನು ಮುಂದೂಡಿ ಇವೆಲ್ಲಾ ಅಂಶಗಳನ್ನು ಪರಿಗಣಿಸಿ ಸಾಕಷ್ಟು ಕಾಲಾವಕಾಶ ನೀಡಿದ ನಂತರವೇ ಸಮೀಕ್ಷೆ ಮಾಡಲಿ ಎಂಬುದು ಪ್ರಜ್ಞಾವಂತರ ಆಗ್ರಹ.