ಸಾಸ್ವೆಹಳ್ಳಿ ರಂಗರಾಜ್ ಪ್ರೀತಿಯ ಕುರಿತು ಬರೆದ ಮೂರು ಪದ್ಯಗಳು…ನಿಮಗಾಗಿ…

  • ಸಾಸ್ವೆಹಳ್ಳಿ ರಂಗರಾಜ್ ಪ್ರೀತಿಯ ಕುರಿತು ಬರೆದ ಮೂರು ಪದ್ಯಗಳು…ನಿಮಗಾಗಿ…

 

ಪ್ರೀತಿ ಎಂದರೆ..?!
***************
ಹನ್ನೆರಡು ವರುಷ ಸತತ
ನನಗಾಗಿ ಕಾದಿರುವ ನೀನು
ಶಬರಿಯೂ ಅಲ್ಲ.., ಸಖೀ ?

ಅಪಾರ ಭಕ್ತಿಯನು ಸ್ವೀಕರಿಸಿ,
ನಿನ್ನ ಉದ್ಧಾರ ಮಾಡಲೆಂದು
ಅವತರಿಸಿದ ರಾಮನೂ ನಾನಲ್ಲ !

ಲೋಕ ಒಪ್ಪಲು ರುಕ್ಮಿಣಿಯೂ
ಮೋಹನ ಒಪ್ಪಲು ರಾಧೆಯೂ,
ಇತ್ತ ಗೋಪಿಕೆಯೂ ನೀನಲ್ಲ ?

ಎಲ್ಲರಿಗೂ ಪ್ರೀತಿಯ ಸಿಂಚನ
ಮಾಡುತ್ತಲೇ ಆರೋಪವೂ
ಹೊರಲು ಕೃಷ್ಣ‌ನೂ ನಾನಲ್ಲ !

ಯಶೋಧರೆಯ ಮಡಿಲಿಗೆ
ರಾಹುಲನ ಇತ್ತು, ಪ್ರೀತಿ ಅರ್ಥ
ಹುಡುಕ ಹೊರಟ ಬುದ್ಧನೂ ಅಲ್ಲ,

‘ಪ್ರೀತಿ’ ಎಂದಾಗ, ಹುಟ್ಟುವಂತಹ
ಎಲ್ಲ ಭಾವ ಬಣ್ಣಗಳೂ ಪ್ರೀತಿಯೇ,
ಮೇಳೈಸಿ ಮೆರೆವ ಮನಗಳು ಬೇಕಷ್ಟೆ!

2.

ಅರ್ಪಣೆಯೆ ಪ್ರೀತಿ
***************
ಸಖೀ, ಮನದಲಿ
ಸಂಚರಿಸುವೆಲ್ಲ
ಭಾವಗಳನೂ
ಅಳುಕಿಲ್ಲದೆ
ಇನಿಯನೆದುರು
ತೆರೆದಿಡುವಂತ
ಅದ್ಭುತ ಪರಿಯೇ
ಭಾವ ಪರವಶತೆ !

ಒಂದಿಷ್ಟು ಬಚ್ಚಿಟ್ಟು
ಕೆಲವಷ್ಟೇ ತೆರೆದಿಟ್ಟು,
ನಾನೇ ನೀನಾಗಲು
ಸಾಧ್ಯವೇ ಗೆಳತಿ ?
ಈ ಪ್ರೀತಿಯಲಿ
ಖಾಸಗೀತನದ
ಗೊಡವೆ ಆದರೂ ಏಕೆ ?
ಸಮರ್ಪಣೆಯೇ ಪ್ರೀತಿ!

3.

ಅರ್ಥವಾಗದ ಪ್ರೀತಿ
*****************
ಪ್ರೀತಿ ಎಂದರೆ..,
ಬಾಹ್ಯಾಂತರ
ಸೌಂದರ್ಯದ
ತೀವ್ರ ಸೆಳೆತವೂ,
ಕುತೂಹಲ
ತಳಮಳವೂ,
ಮೌನ, ಧ್ಯಾನ
ಮಧುರ ಸಂಭಾಷಣೆ
ಭಾವ ವಿನಿಮಯವೂ,
ನಂಬಿಕೆ, ಭರವಸೆ
ಗೌರವಾಭಿಮಾನ
ಸಂವೇದನಶೀಲತೆ
ಪ್ರತಿಸ್ಪಂದನೆ,
ತಲ್ಲೀನತೆಯೂ
ಪರಾವಲಂಬನೆ
ಪರವಶತೆಯೂ,
ರುಚಿ ಅಭಿರುಚಿ,
ಹುಸಿ ಮುನಿಸು
ನಿಸ್ವಾರ್ಥ ಮನದ
ಸ್ಪರ್ಶ ಸುಖವೂ,
ಮೊಗೆದಷ್ಟೂ ದಕ್ಕುವ
ಭಾವೋದ್ವೇಗವೂ,
ದಿನದಿನಕೂ ಹೆಚ್ಚುವ
ಲವಲವಿಕೆಯೂ,
ಜಗದೊಳಗೆ ಇದ್ದೂ
ಎಲ್ಲವನೂ ಮರೆತು
ನಿರಂತರ ಬೆಸೆದಿರುವುದೇ
ಪ್ರೀತಿ, ಪ್ರೇಮ ಸಖೀ !

# ಸಾರಂಗರಾಜ್