ಪದವೀಧರ ನೈರುತ್ಯ ಕ್ಷೇತ್ರದ ಬಿಜೆಪಿ ಟಿಕೇಟ್ ಡಾ.ಧನಂಜಯ ಸರ್ಜಿಗೆ; ಏನಂತಾರೆ ಮಾಜಿ ಶಾಸಕ ರಘುಪತಿ ಭಟ್; ಬಿಜೆಪಿಯಲ್ಲೂ ಬಂಡಾಯ?

ಪದವೀಧರ ನೈರುತ್ಯ ಕ್ಷೇತ್ರದ ಬಿಜೆಪಿ ಟಿಕೇಟ್ ಡಾ.ಧನಂಜಯ ಸರ್ಜಿಗೆ;

ಏನಂತಾರೆ ಮಾಜಿ ಶಾಸಕ ರಘುಪತಿ ಭಟ್; ಬಿಜೆಪಿಯಲ್ಲೂ ಬಂಡಾಯ?

ವಿಧಾನ ಪರಿಷತ್ ಟಿಕೆಟ್ ಘೋಷಣೆಯಾಗಿದೆ. ಶಿಕ್ಷಕರ ಕ್ಷೇತ್ರದ ಟಿಕೆಟ್ ಜೆಡಿಎಸ್ ಪಕ್ಷದ ಚಿಕ್ಕಮಗಳೂರು ಅಭ್ಯರ್ಥಿಗೆ ನೀಡಿ ಪದವೀಧರ ಕ್ಷೇತ್ರದ ಟಿಕೆಟ್ ಶಿವಮೊಗ್ಗದ ಬಿಜೆಪಿ ಅಭ್ಯರ್ಥಿಗೆ ನೀಡಲಾಗಿದೆ. ಇದು ನಾಲ್ಕು ದಶಕಗಳಿಂದ ಬಿಜೆಪಿ ಸಂಪ್ರದಾಯ ಮುರಿದು ಕರಾವಳಿ ಭಾಗಕ್ಕೆ ನೀಡುತ್ತಿದ್ದ ಶಿಕ್ಷಕರ ಕ್ಷೇತ್ರದ ಟಿಕೆಟ್ ನೀಡದೆ ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಭಾಗದ ವಿದ್ಯಾವಂತ, ಪ್ರಜ್ಞಾವಂತ ಮತದಾರರಿಗೆ ಅನ್ಯಾಯ ಮಾಡಿದ ಹಾಗಾಗಿದೆ. ಪ್ರಸ್ತುತ ಸ್ಥಿತಿಯಲ್ಲಿ ಬಿಜೆಪಿಯ ನಿಲುವಿನಿಂದ ವಿಚಲಿತನಾಗಿದ್ದೇನೆ.

1994 ರಿಂದಲೂ ಭಾರತೀಯ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತನಾಗಿ, ಪದಾಧಿಕಾರಿಯಾಗಿ ವಿವಿಧ ಸ್ಥರಗಳಲ್ಲಿ ಕೆಲಸ ಮಾಡಿದ್ದೇನೆ. ವಿಧಾನ ಸಭೆಗೆ ಸ್ಪರ್ಧಿಸಿದ 3 ಬಾರಿಯೂ ಗೆದ್ದಿರುತ್ತೇನೆ. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನಗೆ ಯಾವುದೇ ಮಾಹಿತಿ ನೀಡದೆ ನನ್ನನ್ನು ಬದಲಾಯಿಸಲಾಯಿತು.

ನನ್ನ ಹೆಸರಿನ ಬದಲು ಬೇರೆ ಹೆಸರು ಘೋಷಣೆಯಾಗಿದ್ದು, ಟಿವಿ ಮೂಲಕ ತಿಳಿಯಿತು. ಆದರೆ ನಾನು ವಿಚಲಿತನಾಗದೆ ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ. ಆ ಸಂದರ್ಭದಲ್ಲಿ ನನಗೆ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಪಕ್ಷದ ಹಿರಿಯರು ಭರವಸೆ ನೀಡಿದ್ದರು. ಆ ಪ್ರಕಾರ ಪದವೀಧರರ ಸದಸ್ಯತ್ವ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅತಿ ಹೆಚ್ಚು ಸದಸ್ಯರನ್ನು ನೋಂದಾಯಿಸಿದ್ದೇನೆ. ಅಲ್ಲದೆ ಪಕ್ಷ ನೀಡಿದ ಶಿವಮೊಗ್ಗ ಲೋಕಸಭಾ ಚುನಾವಣಾ ಪ್ರಭಾರಿ ಜವಾಬ್ದಾರಿಯನ್ನು 40 ದಿನಗಳ ಕಾಲ ಶಿವಮೊಗ್ಗದಲ್ಲಿ ಉಳಿದು ಪಕ್ಷದ ಪರವಾಗಿ ಕೆಲಸ ಮಾಡಿದ್ದೇನೆ.

ಈಗ ವಿಧಾನ ಪರಿಷತ್ ಟಿಕೆಟ್ ಘೋಷಣೆಯಾಗಿದೆ. ಆದರೆ ನಾಲ್ಕು ದಶಕಗಳಿಂದ ಬಿಜೆಪಿ ಸಂಪ್ರದಾಯ ಮುರಿದು ಕರಾವಳಿ ಭಾಗಕ್ಕೆ ನೀಡುತ್ತಿದ್ದ ಶಿಕ್ಷಕರ ಕ್ಷೇತ್ರ ನೀಡದೆ ಮಾಡಿದ ಅನ್ಯಾಯಕ್ಕೆ ನ್ಯಾಯ ಕೊಡುವವರು ಯಾರು?

ಪಕ್ಷ ತೆಗೆದುಕೊಂಡಿರುವ ಈ ನಿಲುವಿಂದ ವಿಚಲಿತನಾಗಿದ್ದೇನೆ. ಇದು ಪಕ್ಷದ ಪ್ರತಿಯೊಬ್ಬ ಸಾಮಾನ್ಯ ಕಾರ್ಯಕರ್ತ ಮತ್ತು ಪಕ್ಷದ ಅಭಿಮಾನಿಗಳು ಚಿಂತಿಸುವ ಕಾಲ. ಚರ್ಚಿಸೋಣ, ನಿಮ್ಮ ಸಲಹೆಯ ನಿರೀಕ್ಷೆಯಲ್ಲಿ…

ರಘುಪತಿ‌ ಭಟ್ ( ಮಾಜಿ ಶಾಸಕರು)