ಸೇವಾನ್ಯೂನ್ಯತೆ ಪರಿಗಣಿಸಿ ವಿಮಾ ಪರಿಹಾರ ನೀಡಲು ಆದೇಶ* ಬಜಾಜ್ ಇನ್ಸ್ಯೂರೆನ್ಸ್ ಕಂಪನಿ ಲಿ., ವಿರುದ್ಧ ತೀರ್ಪು ನೀಡಿದ ಗ್ರಾಹಕರ ನ್ಯಾಯಾಲಯ  

*ಸೇವಾನ್ಯೂನ್ಯತೆ ಪರಿಗಣಿಸಿ ವಿಮಾ ಪರಿಹಾರ ನೀಡಲು ಆದೇಶ*

ಬಜಾಜ್ ಇನ್ಸ್ಯೂರೆನ್ಸ್ ಕಂಪನಿ ಲಿ., ವಿರುದ್ಧ ತೀರ್ಪು ನೀಡಿದ ಗ್ರಾಹಕರ ನ್ಯಾಯಾಲಯ


ಶಿವಮೊಗ್ಗ

ಅರ್ಜಿದಾರರಾದ ಶ್ರೀಮತಿ ಲಕ್ಷ್ಮಮ್ಮ ಎಂಬುವವರು ಬಜಾಜ್ ಅಲಿಯನ್ಸ್ ಜನರಲ್ ಇನ್ಸೂರೆನ್ಸ್ ಕಂ.ಲಿ., ಮಂಗಳೂರು ಮತ್ತು ಶಿವಮೊಗ್ಗ ಇವರ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಅರ್ಜಿದಾರರಿಗೆ ವಿಮಾ ಪರಿಹಾರ ಪಾವತಿಸುವಂತೆ ಎದುರುದಾರರಿಗೆ ಆದೇಶಿಸಿದೆ.

ಶ್ರೀಮತಿ ಲಕ್ಷ್ಮಮ್ಮ ಇವರ ಮಗ ಗಣೇಶ ಎಂಬುವವರು ಖರೀದಿಸಿದ ಯಮಹ ಎಂ.ಟಿ.15 ಮೋಟಾರ್ ಬೈಕ್ ವಾಹನಕ್ಕೆ ವಿಮಾ ಪಾಲಿಸಿಯನ್ನು ಪಡೆದಿದ್ದು, ಈತ ದಿ: 24/03/2023 ರಂದು ಶಿವಮೊಗ್ಗದಲ್ಲಿ ಬೈಕ್ ಅಪಘಾತದಿಂದ ಮೃತಪಟ್ಟಿರುತ್ತಾರೆ.

ಈ ಸಂಬಂಧ ಮೃತನ ತಾಯಿಯು ಬಜಾಜ್ ಅಲಿಯನ್ಸ್ ಜನರಲ್ ಇನ್ಸೂರೆನ್ಸ್ ಕಂಪನಿಯನ್ನು ಸಂಪರ್ಕಿಸಿ ವಿಮಾ ಪರಿಹಾರ ಮೊತ್ತ ಸಂದಾಯ ಮಾಡುವಂತೆ ಕೋರಿರುತ್ತಾರೆ. ಆದರೆ ಕಂಪನಿಯವರು ವಾಹನ ಚಾಲಕರು ಎಲ್‍ಎಲ್‍ಆರ್ ಮಾತ್ರ ಹೊಂದಿದ್ದು, ವಾಹನ ಚಾಲನ ಪರವಾನಿಗೆ ಹೊಂದಿರುವುದಿಲ್ಲವಾದ್ದರಿಂದ ವಿಮಾ ಪಾಲಿಸಿಯ ನಿಬಂಧನೆಯ ಉಲ್ಲಂಘನೆಯಾಗಿರುವುದರಿಂದ ವಿಮಾ ಪರಿಹಾರ ಪಡೆಯಲು ಅರ್ಹರಾಗಿರುವುದಿಲ್ಲ ಎಂಬ ಕಾರಣ ನೀಡಿ ಪರಿಹಾರ ಮೊತ್ತ ನೀಡಲು ನಿರಾಕರಿಸಿರುತ್ತಾರೆ.

ಆಯೋಗವು ಪ್ರಕರಣದ ಅಂಶಗಳು, ಎದುರುದಾರರ ಪ್ರತಿ ಹೇಳಿಕೆಗಳು, ಪೀರ್ಯಾದಿದಾರರು ಹಾರುಪಡಿಸಿದ ದಾಖಲೆಗಳು ಮತ್ತು ವಿಮಾ ಪಾಲಿಸಿಯ ಷರತ್ತು ಮತ್ತು ನಿಬಂಧನೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ವಿಮಾ ಕಂಪೆನಿಯು ಪರಿಹಾರವನ್ನು ಪಾವತಿಸದೆ ಸೇವಾ ನ್ಯೂನತೆಯನ್ನು ಎಸಗಿದ್ದಾರೆಂದು ನಿರ್ಣಯಿಸಿ, ಅರ್ಜಿದಾರರು ವಿಮಾ ಪರಿಹಾರವನ್ನು ಪಡೆಯಲು ಅರ್ಹರಾಗಿರುತ್ತಾರೆಂದು ಪರಿಗಣಿಸಿ ಪ್ರಕರಣವನ್ನು ಪುರಸ್ಕರಿಸಿರುತ್ತದೆ.

ಎದುರುದಾರು ಅರ್ಜಿದಾರರಿಗೆ ಪಾಲಿಸಿಗೆ ಅನುಗುಣವಾಗಿ ಪಾಲಿಸಿ ಪರಿಹಾರ ಮೊತ್ತ ರೂ. 15.00 ಲಕ್ಷಗಳನ್ನು ಶೇ.9% ವಾರ್ಷಿಕ ಬಡ್ಡಿಯೊಂದಿಗೆ ಪಾವತಿಸುವುದು. ಹಾಗೂ ತಮ್ಮ ಸೇವಾ ನ್ಯೂನತೆಯಿಂದಾಗಿ ಉಂಟಾದ ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ ಪರಿಹಾರ ಹಾಗೂ ರೂ.30,000 ಗಳನ್ನು ಮತ್ತು ವ್ಯಾಜ್ಯದ ಖರ್ಚು-ವೆಚ್ಚಗಳ ಬಾಬ್ತಾಹಿ ರೂ. 10,000/-ಗಳನ್ನು ಪಾವತಿಸಬೇಕೆಂದು ನಿರ್ದೇಶಿಸಿ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಶ್ರೀಮತಿ ಸವಿತಾ ಬಿ.ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಬಾಂಡ್ಯ ಇವರ ಪೀಠವು ಮೇ.15 ರಂದು ಆದೇಶಿಸಿದೆ.