ಜಿಲ್ಲಾ ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗಗಳ ಜನ ಜಾಗೃತಿ ವೇದಿಕೆ: ಮುಂಗಾರು ಅಧಿವೇಶನದಲ್ಲಿಯೇ ಕಾಂತರಾಜ ವರದಿ ಅಂಗೀಕರಿಸಿ: ಸಿಎಂ- ಡಿಸಿಎಂಗೆ ಆರ್. ಮೋಹನ್/ ತೀ.ನಾ.ಶ್ರೀನಿವಾಸ್ ಬಳಗ ಒತ್ತಾಯ
ಜಿಲ್ಲಾ ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗಗಳ ಜನ ಜಾಗೃತಿ ವೇದಿಕೆ:
ಮುಂಗಾರು ಅಧಿವೇಶನದಲ್ಲಿಯೇ ಕಾಂತರಾಜ ವರದಿ ಅಂಗೀಕರಿಸಿ: ಸಿಎಂ- ಡಿಸಿಎಂಗೆ ಆರ್. ಮೋಹನ್/ ತೀ.ನಾ.ಶ್ರೀನಿವಾಸ್ ಬಳಗ ಒತ್ತಾಯ
ಶಿವಮೊಗ್ಗ: ಹಿಂದುಳಿದ ವರ್ಗಗಳ ಜಾತಿ, ರಾಜಕೀಯ ಅಧಿಕಾರ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿ- ಗತಿಯ ಮಾಹಿತಿ ಸಂಗ್ರಹಿಸಿ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಸಿದ್ಧಪಡಿಸಲಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾಂತರಾಜ ವರದಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ರಾಜ್ಯ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿಯೇ ಘೋಷಣೆ ಮಾಡಬೇಕೆಂದು ಶಿವಮೊಗ್ಗ ಜಿಲ್ಲಾ ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗಗಳ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಆರ್. ಮೋಹನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
ಸಾವಿರಾರು ವರ್ಷಗಳಿಂದ ಜಾತಿ ಪದ್ಧತಿ ಹಿನ್ನೆಲೆಯಲ್ಲಿ ಶೋಷಣೆಗೆ ಒಳಗಾಗಿರುವ ಹಿಂದುಳಿದ ಜಾತಿಗಳಿಗೆ ಸಾಮಾಜಿಕ ನ್ಯಾಯದ ಹರಿಕಾರರಾದ ಮಾಜಿ ಮುಖ್ಯಮಂತ್ರಿ ಶ್ರೀ ಡಿ. ದೇವರಾಜ ಅರಸ್ ಹಾಗೂ ಶ್ರೀ ಬಂಗಾರಪ್ಪನವರ ಇಚ್ಛಾಶಕ್ತಿಯಿಂದಾಗಿ ಶ್ರೀ ಹಾವನೂರು ವರದಿ ಜಾರಿಗೆ ಬಂದ ನಂತರ ಮೀಸಲಾತಿ ಲಭಿಸಿ ಸಾಮಾಜಿಕ ನ್ಯಾಯದ ರಥ ಚಲಿಸಲಾರಂಭಿಸಿತು.
ಶೋಷಣೆಗೆ ಒಳಪಟ್ಟ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಬೇಕೆಂದು ಹಿಂದುಳಿದ ಆಯೋಗ ರಚಿಸಿ ಹಿಂದುಳಿದ ಜಾತಿಗಳ ಗುರುತಿಸಿ ಸೂಕ್ತ ಮೀಸಲಾತಿ ಜಾರಿ ಮಾಡಬೇಕೆಂದು ಡಾ. ಅಂಬೇಡ್ಕರ್ ಸಂವಿಧಾನದ ಪರಿಚ್ಛೇದದ 15 (4) 16 (4)ರ ಹಾಗೂ ಪರಿಚ್ಛೇದದ 340ರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವುದನ್ನು ನೋಡಿದರೆ ಹಿಂದುಳಿದ ಜಾತಿ, ವರ್ಗದವರಿಗೆ ನೀಡುತ್ತಿರುವ “ಮೀಸಲಾತಿ ಭಿಕ್ಷೆಯಲ್ಲ” ಅದು ಅವರ ಸಂವಿಧಾನ ಬದ್ಧ ಹಕ್ಕು ಎನ್ನುವುದು ಸ್ಪಷ್ಟವಾಗುತ್ತದೆ.
ಆದ್ದರಿಂದ ಕಾಂತರಾಜ ಆಯೋಗದ ವರದಿ ಕುರಿತು ಕೈಗೊಳ್ಳುವ ಅಗತ್ಯ ಕ್ರಮಗಳ ಬಗ್ಗೆ ಅಧಿವೇಶನದಲ್ಲಿಯೇ ಪ್ರಕಟಣೆ ಹೊರಡಿಬೇಕೆಂದು ಅವರು ರಾಜ್ಯ ಸರ್ಕಾರಕ್ಕೆ ಇ ಮೇಲ್ ಮೂಲಕ ರವಾನಿಸಿರುವ ಪತ್ರದಲ್ಲಿ ಆಗ್ರಹ ಪೂರ್ವಕವಾಗಿ ಒತ್ತಾಯಿಸಿದ್ದಾರೆ.
ಅಲ್ಲದೆ ರಾಜ್ಯ ಸರ್ಕಾರ ನೂತನವಾಗಿ ನಾಮಕರಣ ಮಾಡುತ್ತಿರುವ ವಿವಿಧ ನಿಗಮ, ಮಂಡಳಿಗಳಲ್ಲಿ ಹಿಂದುಳಿದ ವರ್ಗಗಳ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು, ದೇವರಾಜ ಅರಸು ನಿಗಮ ಸೇರಿದಂತೆ ವಿವಿಧ ಹಿಂದುಳಿದ ವರ್ಗಗಳ ನಿಗಮ ಮಂಡಳಿಗಳಿಗೆ ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಅನುದಾನ ಘೋಷಿಸಿ ಕೂಡಲೇ ಹಣ ಬಿಡುಗಡೆ ಮಾಡಬೇಕು.
ಮುಂಬರುವ ಜಿಪಂ, ತಾಪಂ, ಪುರಸಭೆ- ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಿಳೆಯರಿಗೆ ನೀಡುವ ಮೀಸಲಾತಿ ಪ್ರಮಾಣದಲ್ಲಿ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಆದ್ಯತೆಯ ಮೇಲೆ ಮೀಸಲಾತಿ ಹೆಚ್ಚಿಸಬೇಕು.
ರಾಜ್ಯದಲ್ಲಿ ಹೊಸದಾಗಿ ವೈದ್ಯಕೀಯ, ತಾಂತ್ರಿಕ ಹಾಗೂ ಇನ್ನಿತರ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲು ಹಿಂದುಳಿದ ವರ್ಗದವರಿಗೆ ಅವಕಾಶ ನೀಡುವುದರ ಮೂಲಕ ಈ ವರ್ಗಗಳ ಅಭಿವೃದ್ಧಿಗೆ ವಿಶೇಷ ಗಮನ ನೀಡಬೇಕು, ನೆನೆÀಗುದಿಗೆ ಬಿದ್ದಿರುವ ಶಿವಮೊಗ್ಗದ ಡಿ. ದೇವರಾಜ ಅರಸು ಭವನ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಿ ಹಿಂದುಳಿದ ವರ್ಗಗಳ ಕಾರ್ಯಚಟುವಟಿಕೆಗಳಿಗೆ “ಅರಸು ಭವನ’’ ದೊರೆಯುವಂತೆ ತುರ್ತು ನಿಗಾವಹಿಸಬೇಕು. ಪ್ರತಿ ತಾಲೂಕು ಕೇಂದ್ರಗಳಲ್ಲಿ ದೇವರಾಜ ಅರಸು ಸಮುದಾಯ ಭವನಗಳನ್ನು ನಿರ್ಮಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಪ್ರೊ.ಹೆಚ್.ರಾಚಪ್ಪ, ತೀ.ನ ಶ್ರೀನಿವಾಸ್, ಪ್ರೊ. ಉಮೇಶ್ ಯಾದವ್, ಪ್ರೊ.ಜಿ. ಪರಮೇಶ್ವರಪ್ಪ, ಪ್ರೊ. ಪ್ರಭಾಕರ್, ಬಿ. ಜನಮೇಜಿರಾವ್, ಆರ್.ಟಿ. ನಟರಾಜ್ ಮತ್ತಿತರರು ಪತ್ರ ಮೂಲಕ ಒತ್ತಾಯಿಸಿದ್ದಾರೆ.