ಕಾಶಿ, ಪ್ರಿಂಟಿಂಗ್ ಪ್ರೆಸ್ಸು, ರಾಶಿ ರಾಶಿ ಕನಸುಗಳು!*
*ಕಾಶಿ, ಪ್ರಿಂಟಿಂಗ್ ಪ್ರೆಸ್ಸು, ರಾಶಿ ರಾಶಿ ಕನಸುಗಳು!*
ಮೆದುಳು ರಕ್ತಸ್ರಾವದಿಂದ ಕಾಶಿ @ ವಿಶ್ವನಾಥ ಕಾಶಿ ತಮ್ಮ ಮಧ್ಯ ವಯಸ್ಸಿನಲ್ಲಿ ಸಾವಿಗೀಡಾಗಿದ್ದಾರೆ. ನಾನು ಮತ್ತು ಕಾಶಿ ಒಟ್ಟೊಟ್ಟಿಗೆ ಪತ್ರಿಕೋದ್ಯಮಕ್ಕೆ ಕಾಲಿಟ್ಟವರು. ಅವರು ಪ್ರಿಂಟಿಂಗಿನ ಕಡೆ ಮುಖ ಮಾಡಿದರು, ನಾನು ಬರವಣಿಗೆಯತ್ತ ಹೆಜ್ಜೆ ಹಾಕಿದೆ. ನಾವಿಕ ಪತ್ರಿಕೆಯಲ್ಲಿದ್ದ ದಿನಗಳಲ್ಲಿ ಆಪ್ತರಾದ ಕಾಶಿ ಮತ್ತು ನಾವೆಲ್ಲ( ನಾವಿಕ ಟೀಮ್ ಮತ್ತು ವಾಲಗದ ಟೀಮ್ ಅಂತ) ಒಟ್ಟೊಟ್ಟಿಗೆ ಸಣ್ಣಪುಟ್ಟ ಚಾರಣ, ಪ್ರವಾಸ ಹೋಗುತ್ತಿದ್ದದ್ದು ಸಾಮಾನ್ಯವಾಗಿತ್ತು. ಆ ನಡುವೆ ಪದ್ಮಿನಿ ಪರಿಚಯವಾಗಿ ಕಾಶಿ ದಾಂಪತ್ಯ ಯಾತ್ರೆ ಆರಂಭಿಸಿದ್ದರು.
ಲವಲವಿಕೆಯ, ಸುಮ್ಮನಿರಲಾರದ, ವರ್ಕೋ ಹಾಲಿಕ್ ಆಗಿರುತ್ತಿದ್ದ ಕಾಶಿ ತಮ್ಮ ಖುಷಿಗಷ್ಟೇ ಬದುಕಿದವರಲ್ಲ…ಯಾವಾಗಲೂ ಕೆಲಸ…ಕೆಲಸ…
ಸ್ಥಳೀಯ, ರಾಜ್ಯಮಟ್ಟದ ಪತ್ರಿಕೆಗಳನ್ನು ಗುಣಮಟ್ಟದಲ್ಲಿ ಮುದ್ರಿಸಿ ಕೊಡುವ ಕಲೆ ಕಾಶಿಗೆ ಸಿದ್ಧಿಸಿತ್ತು. ತಮ್ಮದೇ ಸದ್ಗುರು ಪ್ರಿಂಟರ್ಸ್ ಆರಂಭಿಸಿದ್ದರು. ಉದಾರ ಗುಣಗಳ ಕಾರಣದಿಂದ ನಷ್ಟಕ್ಕೀಡಾಗಿ ಗಳಿಸಿದ್ದೆಲ್ಲ ಕಳಕೊಂಡ ಕಾಶಿ, ಪ್ರೀತಿಯಿಂದ ಕಟ್ಟಿಸಿದ್ದ ಮನೆ ಕೂಡ ಕೈಬಿಡುವಂತಾಗಿತ್ತು. ಪ್ರತಿಯೊಂದಕ್ಕೂ ಸಲಹೆ ಪಡೆಯುತ್ತಿದ್ದ ಕಾಶಿ, ಆರೋಗ್ಯದ ವಿಚಾರದಲ್ಲಿ ಸೂಕ್ಷ್ಮವಾಗಿ ಇರುತ್ತಿದ್ದರು. ತೊಂದರೆಗಳು ಬೆಟ್ಟದಷ್ಟಿದ್ದರೂ ಧೃತಿಗೆಡದ ಕಾಶಿ ಒಂದಿಷ್ಟು ದಿನ ಬೇರೆ ರಾಜ್ಯಗಳಲ್ಲೂ ಹೋಗಿ ಪ್ರಿಂಟಿಂಗ್ ಕೆಲಸ ಮಾಡಿಬಂದರು. ಮತ್ತೊಂದಿಷ್ಟು ದಿನ ಕೋಡಬಳೆ, ಚಕ್ಕಲಿ, ಚಿಪ್ಸಿನ ಉತ್ಪಾದನೆಯಲ್ಲಿ ತೊಡಗಿಕೊಂಡರು. ಮತ್ತೆ ಹೊಸ ಪ್ರಿಂಟಿಂಗ್ ಪ್ರೆಸ್ ಹಾಕಿಕೊಳ್ಳುವ ಒದ್ದಾಟದಲ್ಲಿ ಮೋಸವೂ ಹೋಗಿದ್ದರು.
ಹಾಲಿ, ಕ್ರಾಂತಿದೀಪ ಪತ್ರಿಕೆಯ ಪ್ರಿಂಟಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಕಾಶಿ ಒತ್ತಡದಲ್ಲೇ ಬದುಕಿದ್ದರು.ಒತ್ತಡದಲ್ಲೇ ನಿಧನವೂ ಆದರು.
ಅವರ ಮಗಳು ಫಾರೆನ್ಸಿಕ್ ವಿಭಾಗದಲ್ಲಿ ದೊಡ್ಡ ಹೆಸರು, ಹುದ್ದೆ ಪಡೆಯುತ್ತಾಳೆಂಬ ಮಹದಾಸೆ ಕಾಶಿದು.
ಪತ್ರಕರ್ತೆಯೂ ಆಗಿರುವ ಪದ್ಮಿನಿ ಗಟ್ಟಿ ನಿಂತು ಕಾಶಿಯ ಕನಸುಗಳಿಗೆ ಇಟ್ಟಿಗೆ, ಕಲ್ಲು, ಸಿಮೆಂಟು ಜೋಡಿಸಬೇಕಿದೆ. ಆ ಹೆಣ್ಣುಮಗಳ ಮೂಲಕ ಇಬ್ಬರು ಮಕ್ಕಳು ಅರಳಬೇಕಿದೆ….ಒಳ್ಳೇದಾಗಲಿ… ಕಾಶಿಯ ದಾನಕ್ಕೊಳಗಾದ ಕಣ್ಣುಗಳು ಅವರಿಬ್ಬರು ಮಕ್ಕಳ ಭವಿಷ್ಯಕ್ಕೆ ಬುನಾದಿ ಕಟ್ಟಿಕೊಡಲಿ…
– *ಶಿ.ಜು.ಪಾಶ*
ಸಂಪಾದಕರು
*ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆ*
21/7/24