ವಿವಾದದಲ್ಲಿ ದಶಗ್ರಂಥ ಘನಪಾಠಿಗಳ ಗೌರವ ಸಮರ್ಪಣೆ- ಶೋಭಾಯಾತ್ರೆ!**ನಡೆಯುತ್ತಾ? ಅಥವಾ ರದ್ದಾಗುತ್ತಾ? ಗೊಂದಲದಲ್ಲಿ ಭಕ್ತರು!!*

*ವಿವಾದದಲ್ಲಿ ದಶಗ್ರಂಥ ಘನಪಾಠಿಗಳ ಗೌರವ ಸಮರ್ಪಣೆ- ಶೋಭಾಯಾತ್ರೆ!*

*ನಡೆಯುತ್ತಾ? ಅಥವಾ ರದ್ದಾಗುತ್ತಾ? ಗೊಂದಲದಲ್ಲಿ ಭಕ್ತರು!!*

ದಶಗ್ರಂಥ ಘನಪಾಠಿಗಳ ಗೌರವ ಸಮರ್ಪಣಾ ಸಮಿತಿಯ ಸಭೆ-ಶೋಭಾಯಾತ್ರೆಗೂ ಶ್ರೀಮಠಕ್ಕೂ ಯಾವುದೇ ಸಂಬಂಧವಿಲ್ಲ: ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಶ್ರೀಗಳು

ಶಿವಮೊಗ್ಗ: ಶಿವಮೊಗ್ಗದಲ್ಲಿ ಅಕ್ಟೋಬರ್ ೧೯ ರಂದು ದಶಗ್ರಂಥ ಘನಪಾಠಿಗಳ ಗೌರವ ಸಮರ್ಪಣಾ ಸಮಿತಿಯ ಹೆಸರಿನಲ್ಲಿ ಶ್ರೀಮದ್ ಜಗದ್ಗುರು ಶ್ರೀ ಕೂಡಲಿ ಶೃಂಗೇರಿ ಶಂಕರಾಚಾರ್ಯ ಮಹಾಸಂಸ್ಥಾನಮ್ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠಮ್ ಕೂಡಲಿ ಮಠದಿಂದ ಕಂಠಸ್ಥ ಹಾಗೂ ಏಕಾಕೀ ದಶಗ್ರಂಥ ಸಹಿತ ಸಂಪೂರ್ಣ ಋಗ್ವೇದ ಘನ ಪಾರಾಯಣ ಸಮಾರೋಪ ಸಮಾರಂಭ ಹಾಗೂ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ನಾವು ಮಾಧ್ಯಮಗಳಲ್ಲಿ ಗಮನಿಸಿದ್ದು, ಇದು ನಮ್ಮ ಗಮನಕ್ಕೆ ತಾರದೇ ಮಾಡುತ್ತಿರುವ ಕಾರ್ಯಕ್ರಮವಾಗಿದೆ ಎಂದು ಮಠದ ಪೀಠಾಧಿಪತಿ ಶ್ರೀಂದ್ ಜಗದ್ಗುರು ಶಂಕರಾಚಾರ್ಯ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಮಹಾಸ್ವಾಮಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಶ್ರೀಮಠದ ಪೀಠಾಧಿಪತಿಗಳಾಗಿರುವ ನಮ್ಮ ಗಮನಕ್ಕೆ ತಾರದೇ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ನಮಗೆ ತುಂಬಾ ಬೇಸರ ಉಂಟುಮಾಡಿದ್ದು, ಈ ಕಾರ್ಯಕ್ರಮಕ್ಕೂ ನಮ್ಮ ಶ್ರೀಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
*ಅ.19 ರಂದು ಶೋಭಾಯಾತ್ರೆ;*

ಶಿವಮೊಗ್ಗದ ದಶಗ್ರಂಥ ಘನಪಾಠಿಗಳ ಗೌರವ ಸಮರ್ಪಣಾ ಸಮಿತಿ ಅ. 19 ರಂದು ಸಂಜೆ 5 ಕ್ಕೆ ಶೋಭಾಯಾತ್ರೆ ಹಮ್ಮಿಕೊಂಡಿರುವ ಹಾಗೂ ಚಂದ್ರಮೌಳಿ ಘನಪಾಠಟಿಗಳಿಗೆ ಸನ್ಮಾನಿಸಿ 10 ಲಕ್ಷ ರೂ., ಗಳನ್ನು ನೀಡುವ ಕಾರ್ಯಕ್ರಮದ ವಿವರಗಳನ್ನು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ. ಈ ಗೌರವ ಸಮರ್ಪಣೆ ಮತ್ತು ಶೋಭಾಯಾತ್ರೆ ಶ್ರೀಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ನಡೆಯಲಿದ್ದು, ಇದರ ದಿವ್ಯ ಸಾನಿಧ್ಯವನ್ನು ಕೂಡಲಿ ಶೃಂಗೇರಿ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದ ಶ್ರೀಮದ್ ಜಗದ್ಗುರು ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು ವಹಿಸಲಿದ್ದಾರೆಂದು ಸಮಿತಿ ಹೇಳಿದೆ.

ಆದರೆ, ಅದೇ ದಿವ್ಯಸಾನಿಧ್ಯ ವಹಿಸಬೇಕಾದ ಸ್ವಾಮೀಜಿಗಳೇ ಪತ್ರಿಕಾ ಪ್ರಕಟಣೆ ಹೊರಡಿಸಿ, ಇದಕ್ಕೂ ಮಠಕ್ಕೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿರುವುದು ಸಾಕಷ್ಟು ಕುತೂಹಲಕ್ಕೂ ಕಾರಣವಾಗಿದೆ.

ವಿಶೇಷವೆಂದರೆ, ಈ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಾಸಕ ಎಸ್.ಎನ್. ಚನ್ನ ಬಸಪ್ಪ(ಚೆನ್ನಿ) ಸೇರಿದಂತೆ ಮಹಾಮಹಿಮರಿದ್ದರು.

ಈ ವಿವಾದ ಈಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದು, ಈ ಕಾರ್ಯಕ್ರಮ ನಡೆಯುತ್ತಾ? ಅಥವಾ ರದ್ದಾಗುತ್ತಾ? ಎಂಬ ಗೊಂದಲದಲ್ಲಿ ಭಕ್ತಗಣ ಇರುವುದಾಗಿ ಹೇಳಲಾಗುತ್ತಿದೆ.