ಸೋಗಾನೆ ಲೇಔಟ್ ನಿರ್ಮಾಣ-ರೈತರನ್ನು ಒಕ್ಕಲೆಬ್ಬುಸುವುದಿಲ್ಲ : ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್*
*ಸೋಗಾನೆ ಲೇಔಟ್ ನಿರ್ಮಾಣ-ರೈತರನ್ನು ಒಕ್ಕಲೆಬ್ಬುಸುವುದಿಲ್ಲ : ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್*
ಶಿವಮೊಗ್ಗ,
ಸೋಗಾನೆಯಲ್ಲಿ ಸೂಡಾ ವತಿಯಿಂದ ಅಭಿವೃದ್ದಿಪಡಿಸಲು ಉದ್ದೇಶಿಸಿರುವ ಲೇಔಟ್ ಕುರಿತು ರೈತರಲ್ಲಿ ತಪ್ಪು ತಿಳುವಳಿಕೆ ನಿವಾರಣೆ ಆಗಬೇಕು. ಅಲ್ಲಿ ಯಾವುದೇ ಬಗರ್ ಹುಕುಂ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಸೂಡಾ ಅಧ್ಯಕ್ಷರಾದ ಹೆಚ್.ಎಸ್.ಸುಂದರೇಶ್ ತಿಳಿಸಿದರು.
ಶಿವಮೊಗ್ಗ ತಾಲ್ಲೂಕು ಸೋಗಾನೆ ಗ್ರಾಮದ ಸ.ನಂ 156 ರ ಪ್ರದೇಶದಲ್ಲಿ ಸೂಡಾ ಲೇಔಟ್ ನಿರ್ಮಿಸುವ ಕುರಿತು ರೈತರೊಂದಿಗೆ ಚರ್ಚಿಸಲು ಶನಿವಾರ ಸೂಡಾ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸೋಗಾನೆಯಲ್ಲಿ ಸಾರ್ವಜನಿಕರ ಹಿತಾಸಕ್ತಿಗಾಗಿ ಸೂಡಾ ವತಿಯಿಂದ ನಿವೇಶನ ನಿರ್ಮಿಸಲು ಜಿಲ್ಲಾಧಿಕಾರಿಗಳು ಮತ್ತು ಎಸಿ ಯವರಿಗೆ ಪತ್ರೆ ಬರೆದು 200 ಎಕರೆ ಜಾಗ ಮಂಜೂರು ಮಾಡುವಂತೆ ಮನವಿ ಮಾಡಲಾಗಿತ್ತು. ಅದರೆಂತೆ ನಿವೇಶನ ನಿರ್ಮಿಸಲು ಸರ್ವೇ ನಂ.156 ರ 96 ಎಕರೆ ಜಾಗ ಮಂಜೂರಾಗಿದೆ. ಈಗಾಗಲೇ ಅಲ್ಲಿ 600 ಎಕರೆ ಕೆಐಎಡಿಬಿ ವಶದಲ್ಲಿದೆ.
ಉದ್ದೇಶಿತ ಪ್ರದೇಶದಲ್ಲಿ ಪ್ರಸ್ತುತ 49 ಎಕರೆ ಜಾಗದಲ್ಲಿ ರೈತರು ಸಾಗುವಳಿ ಮಾಡುತ್ತಿದ್ದಾರೆ. 2 ಎಕರೆ ಸ್ಮಶಾನ ಜಾಗವಿದೆ. ಮತ್ತೆ ಕೆಲ ರೈತರು ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ ಎಷ್ಟು ಜನ ರೈತರು ಬಗರ್‌ಹುಕುಂ ಅರ್ಜಿಗಳನ್ನು ಸಲ್ಲಿಸಿದ್ದಾರೆ, ತೋಟ, ಗದ್ದೆ ಎಷ್ಟಿದೆ ಎಂದು ಸರ್ವೇ ಕಾರ್ಯ ಮಾಡಿದ ನಂತರವೇ ಹಾಗೂ ಸಾಧಕ ಬಾಧಕಗಳನ್ನು ನೋಡಿ, ಅಗತ್ಯ ಕ್ರಮ ಕೈಗೊಂಡು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಕ್ರಮ ವಹಿಸಲಾಗುವುದು.
ಹಾಗೂ ರೈತರ ಬೇಡಿಕೆಯಂತೆ ರೈತರಿಗೆ ಬಗರ್ ಹುಕುಂ ಸಮಿತಿಯಿಂದ ಹಕ್ಕು ಪತ್ರ ಕೊಡಿಸಲು ಸಹ ಸಹಕರಿಸುವುದಾಗಿ ರೈತರಿಗೆ ಭರವಸೆ ನೀಡಿದ ಅವರು, ಹಕ್ಕುಪತ್ರ ಪಡೆದ ನಂತರ ಸದರಿ ಭೂಮಿಯನ್ನು ಖಾಸಗಿಯಾಗಿ ಯಾರಿಗೇ ಆಗಲಿ 20 ವರ್ಷ ಪರಭಾರೆ ಮಾಡಲು ಬರುವುದಿಲ್ಲ. ಆದರೆ ಸರ್ಕಾರಿ ಉದ್ದೇಶಕ್ಕೆ ನೀಡಬಹುದಾಗಿದ್ದು, ಹಾಗೆ ರೈತರು ನೀಡಿದ ಭೂಮಿಯನ್ನು 50:50 ಅನುಪಾತದಲ್ಲಿ ಪಡೆಯಲಾಗುವುದು. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.
ರೈತರು ಮಾತನಾಡಿ, ಈ ಹಿಂದೆ ವಿಮಾನ ನಿಲ್ದಾಣಕ್ಕೆ ಭೂಮಿ ನೀಡಿದ ರೈತರಿಗೆ ಸರಿಯಾದ ನ್ಯಾಯ ಒದಗಿಲ್ಲ. ಇದೀಗ ಸೂಡಾ ಲೇಔಟ್ ಮಾಡಲು ಇಲ್ಲಿ ಭೂಮಿ ಪಡೆಯಲು ಮುಂದಾಗಿದ್ದಾರೆ. ಮೊದಲು ಅರ್ಜಿ ಸಲ್ಲಿಸಿರುವ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಿ, ನಂತರ ಭೂಮಿ ಪಡೆಯುವ ಪ್ರಕ್ರಿಯೆ ಮಾಡುವಂತೆ ಮನವಿ ಮಾಡಿದರು.
ಗ್ರಾಮಾಂತರ ಕ್ಷೇತ್ರದ ಶಾಸಕರಾದ ಶಾರದಾ ಪರ‍್ಯಾನಾಯ್ಕ ಮಾತನಾಡಿ, ಎಷ್ಟು ಜನ ರೈತರು ಅಲ್ಲಿ ಸಾಗುವಳಿ ಮಾಡುತ್ತಿದ್ದಾರೆ, ಬಗರ್ ಹುಕುಂ ಅಡಿಯಲ್ಲಿ ಎಷ್ಟು ಜನ ರೈತರು ಅರ್ಜಿ ಸಲ್ಲಿಸಿದ್ದಾರೆ ಎಂಬ ನಿಖರ ಮಾಹಿತಿಯೊಂದಿಗೆ ಸಮಿತಿಗೆ ಮಂಡಿಸಿರಿ. ಬಡವರು, ಎಸ್‌ಸಿ/ಎಸ್‌ಟಿ ಸೇರಿದಂತೆ ಅರ್ಹರಿಗೆ ಮಾತ್ರ ಹಕ್ಕುಪತ್ರ ನೀಡಲಾಗುವುದು. ಹೀಗೆ ಹಕ್ಕುಪತ್ರ ಪಡೆದವರು ಬೇರೆಯವರಿಗೆ ಪರಭಾರೆ ಮಾಡುವಂತಿಲ್ಲ. ಒಂದು ವೇಳೆ ಮಾಡಿದಲ್ಲಿ ಹಕ್ಕುಪತ್ರವನ್ನು ರದ್ದುಪಡಿಸಲಾಗುವುದು. ಸರ್ಕಾರಿ ಉದ್ದೇಶಕ್ಕೆ ನೀಡಬಹುದು. ಮುಂದಿನ ಸಮಿತಿ ಸಭೆಯಲ್ಲಿ ಸೋಗಾನೆ ಭಾಗದ ರೈತರ ಅರ್ಜಿಯನ್ನು ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು ಎಂದರು.
ಉಪವಿಭಾಗಾಧಿಕಾರಿ ಸತ್ಯನಾರಾಯಣ್ ಮಾತನಾಡಿ, ಸೋಗಾನೆಯ ಉದ್ದೇಶಿತ ಪ್ರದೇಶದಲ್ಲಿ 50 ರಿಂದ 54 ರೈತರು ಸಾಗುವಳಿ ಮಾಡುತ್ತಿದ್ದು 30 ಎಕರೆ ತೋಟವಿದೆ. ರೈತರ ರಿಟ್ ಪೆಟಿಷನ್ ಪೆಂಡಿಗ್ ಇವೆ. ಬಗರ್ ಹುಕುಂ ಸಾಗುವಳಿದಾರರು ಎಷ್ಟು ಜನ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪರಿಶೀಲನೆ ನಡೆಸಬೇಕು. ಎಷ್ಟು ಗದ್ದೆ, ತೋಟ, ಕರಾಬು ಇದೆ ಎಂದು ಸರ್ವೇ ಕಾರ್ಯ ನಡೆಸಬೇಕು. ನಂತರ ಮುಂದಿನ ಕ್ರಮ ಎಂದು ತಿಳಿಸಿದರು.
ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಸೂಡಾ ಸದಸ್ಯರು, ಸೂಡಾ ಆಯುಕ್ತರಾದ ವಿಶ್ವನಾಥ ಮುದಜ್ಜಿ, ತಹಶೀಲ್ದಾರ್ ರಾಜೀವ್ , ಮುಖಂಡರು ರೈತರು ಹಾಜರಿದ್ದರು.