ಜೋಗ ಜಲಪಾತ ವೀಕ್ಷಣೆ ನಿರ್ಬಂಧ ತೆರವು: ಹೊಸ ವರ್ಷಕ್ಕೆ ಪ್ರವಾಸಿಗರಿಗೆ ಶಿವಮೊಗ್ಗ ಜಿಲ್ಲಾಡಳಿತದ ಕೊಡುಗೆ

ಜೋಗ ಜಲಪಾತ ವೀಕ್ಷಣೆ ನಿರ್ಬಂಧ ತೆರವು: ಹೊಸ ವರ್ಷಕ್ಕೆ ಪ್ರವಾಸಿಗರಿಗೆ ಶಿವಮೊಗ್ಗ ಜಿಲ್ಲಾಡಳಿತದ ಕೊಡುಗೆ

ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಂಡಿರುವ ಕಾರಣ ಜನವರಿ 1 ರಿಂದ ಮಾರ್ಚ್ 15 ರವರೆಗೆ ಜೋಗ ಜಲಪಾತಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಆದರೆ, ಇದೀಗ ಹೊಸ ವರ್ಷಾಚರಣೆ ಪ್ರಯುಕ್ತ ಜಿಲ್ಲಾಡಳಿತವು ಪ್ರವಾಸಿಗರಿಗೆ ಸಿಹಿ ಸುದ್ದಿ ನೀಡಿದೆ. ಜೋಗ ನಿರ್ವಹಣಾ ಪ್ರಾಧಿಕಾರದ ಮುಖ್ಯ ದ್ವಾರವನ್ನು ಹೊರತುಪಡಿಸಿ ಉಳಿದೆಲ್ಲ ಪರ್ಯಾಯ ಸ್ಥಳಗಳಿಂದ ಪ್ರವಾಸಿಗರಿಗೆ ಜೋಗ ಜಲಪಾತ ವೀಕ್ಷಿಸಲು ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ.
ಯಾವ ಪ್ರದೇಶಗಳಿಂದೆಲ್ಲ ಜೋಗ ನೋಡಬಹುದು?

ಪ್ರವಾಸಿಗರು ವ್ಯೂ ಪಾಯಿಂಟ್, ಯಾತ್ರಿ ನಿವಾಸ, ರಾಣಿ ಫಾಲ್ಸ್, ಮುಂಬೈ ಬಂಗಲೆ ಮೊದಲಾದೆಡೆಯಿಂದ ಜಲಪಾತವನ್ನು ವೀಕ್ಷಿಸಬಹುದು ಎಂದು ಜಿಲ್ಲಾಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರತಿ ವರ್ಷ ಡಿಸೆಂಬರ್ ಕೊನೆಯ ವಾರದಲ್ಲಿ ಜೋಗಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿತ್ತು. ಆದರೆ, ಈ ವರ್ಷ ಪ್ರವೇಶ ನಿಷೇಧಿಸುವ ಮುನ್ನವೇ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಜೋಗ ವೀಕ್ಷಣೆಯ ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದ್ದು, ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಜಂಟಿ ಕಾರ್ಯದರ್ಶಿ ಧರ್ಮಪ್ಪ ತಿಳಿಸಿದ್ದಾರೆ.

ಜೋಗಕ್ಕೆ ಹೋಗುವುದು ಹೇಗೆ?

ಭಾರತದ ಎರಡನೇ ಅತಿ ಎತ್ತರದ ಜಲಪಾತ ಎಂದೇ ಖ್ಯಾತಿವೆತ್ತ ಜೋಗ ಜಲಪಾತ ಕರ್ನಾಟಕ ರಾಜಧಾನಿ ಬೆಂಗಳೂರಿನಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಶಿವಮೊಗ್ಗ ಜಿಲ್ಲೆಯಲ್ಲಿದೆ. 253 ಮೀಟರ್ ಆಳಕ್ಕೆ ಧುಮ್ಮಿಕ್ಕುವ ಈ ಜಲಪಾತನವನ್ನು ನೋಡಲು ಕರ್ನಾಟಕದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ.
ಜೋಗ ಜಲಪಾತದಿಂದ 20 ಕಿ.ಮೀ ದೂರದಲ್ಲಿರುವ ತಾಳಗುಪ್ಪದಲ್ಲಿ ರೈಲು ನಿಲ್ದಾಣ ಇದೆ. ಬೆಂಗಳೂರಿನಿಂದ ಪ್ರತಿದಿನ ರೈಲುಗಳ ಸಂಚಾರ ಇದೆ. ಸಾಗರ (40 ಕಿ.ಮೀ) ಮತ್ತು ಶಿವಮೊಗ್ಗ (105 ಕಿ.ಮೀ) ಹತ್ತಿರದ ಪಟ್ಟಣಗಳು. ಜೋಗ ಜಲಪಾತ ಉತ್ತಮ ​​ರಸ್ತೆ ಮತ್ತು ಸಾರ್ವಜನಿಕ ಸಾರಿಗೆ ಸಂಪರ್ಕ ಕೂಡ ಹೊಂದಿವೆ. ಜೋಗ ಜಲಪಾತ ವೀಕ್ಷಣೆ ಜಾಕ್ಕೆ ತೆರಳಲು ಶಿವಮೊಗ್ಗ ಅಥವಾ ಸಾಗರ ಪಟ್ಟಣಗಳಿಂದ ಟ್ಯಾಕ್ಸಿಗಳನ್ನು ಪಡೆಯಬಹುದು. ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕೂಡ ಇದ್ದು, ಬೇರೆ ರಾಜ್ಯಗಳ ಪ್ರವಾಸಿಗರು ಈನ ಸೌಕರ್ಯವನ್ನೂ ಬಳಸಿಕೊಳ್ಳಬಹುದಾಗಿದೆ.