*ಜ. 2 ರಿಂದ ಶಾಲಾ ಮಕ್ಕಳ ಆಧಾರ್ ತಿದ್ದುಪಡಿ ಆಂದೋಲನ*

*ಜ. 2 ರಿಂದ ಶಾಲಾ ಮಕ್ಕಳ ಆಧಾರ್ ತಿದ್ದುಪಡಿ ಆಂದೋಲನ*

ಶಿವಮೊಗ್ಗ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಿಎಸ್‌ಸಿ ಸರ್ವೀಸರ್ ಇಂಡಿಯಾ ಲಿಮಿಟೆಡ್, ಶಾಲಾ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಶಿವಮೊಗ್ಗ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ವತಿಯಿಂದ ಜ. 2 ರಿಂದ 30 ರವರೆಗೆ ಶಿವಮೊಗ್ಗ ತಾಲ್ಲೂಕಿನ ಶಾಲಾ ವಿದ್ಯಾರ್ಥಿಗಳ ಆಧಾರ್ ತಿದ್ದುಪಡಿ ಬೃಹತ್ ಆಂದೋಲನ ಹಮ್ಮಿಕೊಳ್ಳಲಾಗಿದೆ.

ಜನವರಿ 02 ರಂದು ಬೆಳಗ್ಗೆ 11 ಗಂಟೆಗೆ ಸರ್ಕಾರಿ ಪ್ರೌಢಶಾಲೆ ಕಾಚಿನಕಟ್ಟೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್ ಎನ್ ಇವರು ಆಧಾರ್ ತಿದ್ದುಪಡಿ ಬೃಹತ್ ಆಂದೋಲನಕ್ಕೆ ಚಾಲನೆ ನೀಡುವರು.

ಶಿವಮೊಗ್ಗ ತಾಲ್ಲೂಕಿನಲ್ಲಿ ಸರಿಸುಮಾರು 90 ಸಾವಿರಕ್ಕೂ ಅಧಿಕ ವಿದ್ಯಾಥಿಗಳು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಮಾಹಿತಿಯು ಶಾಲೆಗಳಲ್ಲಿ ಹಾಗೂ ಆಧಾರ್ ಕಾರ್ಡ್ನಲ್ಲಿ ಏಕರೂಪದಲ್ಲಿರುವುದು ಕಡ್ಡಾಯವಾಗಿರುತ್ತದೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಈ ಕ್ರಮವು ಅನುಕೂಲಕಾರಿಯೂ ಆಗಿರುತ್ತದೆ. ಇಲಾಖೆಯ ಅಪಾರ್ ನೋಂದಣಿ ಸ್ಯಾಟ್ಸ್ ಸೇರಿದಂತೆ ಇತರೆ ಕಾರ್ಯಗಳಲ್ಲಿಯೂ ಆಧಾರ್ ಕಾರ್ಡ್ ಹಾಗೂ ಶಾಲಾ ಮಾಹಿತಿ ಏಕರೂಪದಲ್ಲಿರಬೇಕು. ತಾಲ್ಲೂಕಿನ ಸುಮಾರು 16 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಮಾಹಿತಿಯನ್ನು ತಿದ್ದುಪಡಿ ಮಾಡುವ ಅಗತ್ಯವಿದೆ.

ಆಂದೋಲನವನ್ನು ವೇಳಾಪಟ್ಟಿಯನ್ವಯ ತಾಲ್ಲೂಕಿನ 32 ಕ್ಲಸ್ಟರ್‌ವಾರು ಹಮ್ಮಿಕೊಳ್ಳಲಾಗಿದ್ದು, ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವ ದೃಷ್ಟಿಯಿಂದ ಸಂಖ್ಯಾನುಸಾರ ಸಮೀಪದ ಶಾಲೆಗಳಲ್ಲಿ ತಿದ್ದುಪಡಿ ಮಾಡುವ ಕಾರ್ಯ ಯೋಜನೆ ರೂಪಿಸಲಾಗಿದೆ. ಆ ಮೂಲಕ ತಾಲ್ಲೂಕಿನ ಎಲ್ಲಾ ವಿದ್ಯಾರ್ಥಿಗಳ ಆಧಾರ್ ತಿದ್ದುಪಡಿ ಮಾಡುವ ಗುರಿ ಹೊಂದಲಾಗಿದೆ.ಇದರಿಂದಾಗಿ ಶಾಲಾ ವಿದ್ಯಾರ್ಥಿಗಳ ಆಧಾರ್‌ನ ಮಾಹಿತಿ ಶಾಲಾ ಮಾಹಿತಿಗಳು ಏಕರೂಪವಾಗಿಸುವ ಮೂಲಕ ಶಾಶ್ವತ ಪರಿಹಾರ ಕೈಗೊಳ್ಳುವ ಉದ್ದೇಶ ಹೊಂದಲಾಗಿದೆ. ಈ ಪ್ರಕ್ರಿಯೆಯಲ್ಲಿ ಶಾಲಾವಾರು ಅನ್ವಯಿಸಲ್ಪಡುವ ವಿದ್ಯಾರ್ಥಿಗಳ ಪೋಷಕರಿಂದ ಲಿಖಿತ ಅನುಮತಿ ಪಡೆಯುವ ಮೂಲಕ ವಿದ್ಯಾರ್ಥಿಗಳ ಆಧಾರ್ ತಿದ್ದುಪಡಿ ಮಾಡಲಾಗುವುದು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಕ್ಷೇತ್ರ ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿರುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.