ಹೆಂಡತಿಯನ್ನು ಭೀಕರವಾಗಿ ಕೊಂದಿದ್ದ ಸೈಯದ್ ಪರ್ವೀಜ್ ಗೆ ಜೀವಾವಧಿ ಶಿಕ್ಷೆ*

*ಹೆಂಡತಿಯನ್ನು ಭೀಕರವಾಗಿ ಕೊಂದಿದ್ದ ಸೈಯದ್ ಪರ್ವೀಜ್ ಗೆ ಜೀವಾವಧಿ ಶಿಕ್ಷೆ*

2020ರ ನವೆಂಬರ್ ಒಂದರಂದು ಸಂಜೆ ಶಿವಮೊಗ್ಗ ಟೌನ್ ಮಲ್ಲಿಕಾರ್ಜುನ ನಗರದ ವಾಸಿ ಸಯ್ಯದ್ ಪರ್ವೀಜ್ *ಕೌಟುಂಬಿಕ ವಿಚಾರವಾಗಿ ತನ್ನ ಹೆಂಡತಿ (23 ವರ್ಷ) ಜೊತೆ ಜಗಳ ತೆಗೆದು, ಆಕೆಗೆ ಅವಾಚ್ಯ ಶಬ್ದಗಳಿಂದ ಬೈದು, ಚಾಕು ಮತ್ತು ಸ್ಕ್ರೂ ಡ್ರೈವರ್ ನಿಂದ ಆಕೆಯ ಹೊಟ್ಟೆ ಮತ್ತು ಬೆನ್ನಿಗೆ ಹಲವು ಕಡೆ ಚುಚ್ಚಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.

ಮೃತಳ ತಂದೆ ನೀಡಿದ ದೂರಿನ ಮೇರೆಗೆ ತುಂಗಾನಗರ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0465/2020 ಕಲಂ 302 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.

ಪ್ರಕರಣದ ಆಗಿನ *ತನಿಖಾಧಿಕಾರಿಗಳಾದ ಸಂಜೀವ್‌ ಕುಮಾರ್‌ ಟಿ, ಸಿ.ಪಿ.ಐ. ಶಿವಮೊಗ್ಗ ಗ್ರಾಮಾಂತರ ವೃತ್ತ* ( ಹಾಲಿ ಡಿ.ವೈ.ಎಸ್.ಪಿ ಶಿವಮೊಗ್ಗ – ಬಿ ಉಪ ವಿಭಾಗ) ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತನ ವಿರುದ್ಧ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀಮತಿ ಮಮತಾ, ಬಿ. ಎಸ್* (ಸರ್ಕಾರಿ ಅಭಿಯೋಜಕರವರು) ವಾದ ಮಂಡಿಸಿದ್ದು, 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು, ಆರೋಪಿಯ ವಿರುದ್ಧ ಆರೋಪ ದೃಢ ಪಟ್ಟ ಹಿನ್ನೆಲೆಯಲ್ಲಿ, ನ್ಯಾಯಾಧೀಶರಾದ ಮರುಳ ಸಿದ್ಧಾರಾಧ್ಯ ಹೆಚ್. ಜೆ. ರವರು ಜನವರಿ 31 ರಂದು ಪ್ರಕರಣದ ಆರೋಪಿತ *ಸಯ್ಯದ್ ಪರ್ವೀಜ್,(25 ವರ್ಷ, ವಾಸ ಮಲ್ಲಿಕಾರ್ಜುನ ನಗರ ಶಿವಮೊಗ್ಗ ಟೌನ್) ಈತನಿಗೆ *ಜೀವಾವಧಿ ಶಿಕ್ಷೆ ಮತ್ತು ರೂ 25,000/- ದಂಡ* ವಿಧಿಸಿ ಆದೇಶಿಸಿದ್ದಾರೆ.