ಕುವೆಂಪು ವಿವಿ: ವಿಷನ್ ದಾಖಲೆ ಬಿಡುಗಡೆ* *ಉನ್ನತ ಶಿಕ್ಷಣಕ್ಕೆ ಸರ್ಕಾರ ಆದ್ಯತೆ ನೀಡಬೇಕಿದೆ: ಪ್ರೊ. ಎಚ್. ಎ. ರಂಗನಾಥ್*
*ಕುವೆಂಪು ವಿವಿ: ವಿಷನ್ ದಾಖಲೆ ಬಿಡುಗಡೆ*
*ಉನ್ನತ ಶಿಕ್ಷಣಕ್ಕೆ ಸರ್ಕಾರ ಆದ್ಯತೆ ನೀಡಬೇಕಿದೆ: ಪ್ರೊ. ಎಚ್. ಎ. ರಂಗನಾಥ್*

ಶಂಕರಘಟ್ಟ
ಇತ್ತೀಚಿನ ವರ್ಷಗಳಲ್ಲಿ ಯುಜಿಸಿ ಮತ್ತು ಇತರ ಸಂಸ್ಥೆಗಳು ವಿಶ್ವವಿದ್ಯಾಲಯಗಳಿಗೆ ಸಮರ್ಪಕವಾಗಿ ಅನುದಾನಗಳನ್ನು ಒದಗಿಸದೆ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಿವಿಗಳಲ್ಲಿ ಸಂಶೋಧನೆ, ನೇಮಕಾತಿ ಮತ್ತಿತರ ಚಟುವಟಿಕೆಗಳು ಹಿನ್ನೆಡೆ ಕಾಣುತ್ತಿದ್ದು, ಸರ್ಕಾರಗಳು ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ ಎಂದು ನ್ಯಾಕ್ ನ ಮಾಜಿ ಅಧ್ಯಕ್ಷ ಪ್ರೊ. ಎಚ್. ಎ. ರಂಗನಾಥ್ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ವಿಷನ್ ದಾಖಲೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸಾರ್ವಜನಿಕ ವಲಯದಲ್ಲಿ ಉನ್ನತ ಶಿಕ್ಷಣದ ಪ್ರಸ್ತುತತೆಯ ಬಗ್ಗೆ ಗಂಭೀರವಾದ ಪ್ರಶ್ನೆಗಳು ಕೇಳಿ ಬರುತ್ತಿವೆ. ಉನ್ನತ ಶಿಕ್ಷಣ ಸಂಸ್ಥೆಗಳು ಪದವೀಧರರನ್ನು ಹೊರತರುತ್ತಿದ್ದರೂ, ಇವರಲ್ಲಿ ಬಹುತೇಕ ಮಂದಿ ಸಮಕಾಲೀನ ವೃತ್ತಿಪರ ಮಾರುಕಟ್ಟೆಯಲ್ಲಿ ಉದ್ಯೋಗಪಡೆದುಕೊಳ್ಳುವಲ್ಲಿ
ಸೋಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳು ಸಾಂಪ್ರದಾಯಿಕ ಆಲೋಚನೆಗಳನ್ನು ಬದಿಗಿರಿಸಿ, ಭವಿಷ್ಯದ ಔದ್ಯೋಗಿಕಮಾರುಕಟ್ಟೆಗೆ ವಿದ್ಯಾರ್ಥಿಗಳನ್ನು ಅಣಿಗೊಳಿಸಬೇಕಾದ ಅಗತ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡಬೇಕಿದೆ ಎಂದರು.
ಕಾರ್ಪೋರೆಟ್ ಸಂಸ್ಥೆಗಳು ವೃತ್ತಿಪರ ತರಬೇತಿಯನ್ನು ನೀಡಲು ಸಿದ್ಧರಿರವುದಿಲ್ಲ. ಉನ್ನತ ಶಿಕ್ಷಣ ಸಂಸ್ಥೆಗಳು, ಅದರಲ್ಲಿಯೂ ಸಾರ್ವಜನಿಕ ವಿಶ್ವವಿದ್ಯಾಲಯಗಳು ಮಾರುಕಟ್ಟೆಗೆ ಪೂರಕವಾದ ಕೌಶಲ್ಯಗಳನ್ನು ಹೊಂದಿರುವ ವೃತ್ತಿಪರರನ್ನು ತಯಾರು ಮಾಡುವ ಜವಾವ್ದಾರಿಯನ್ನು ನಿರ್ವಹಿಸಬೇಕಿದೆ.
ಸಮಾಜದ ವಿವಿಧ ಸ್ಥರಗಳೊಂದಿಗೆ ಅನುಸಂಧಾನ ನಡೆಸುವುದರ ಜೊತೆಗೆ ಸುಸ್ಥಿರವಾದ ನೀತಿ ನಿರೂಪಣೆಗಳನ್ನು ಸಮಾಜದ ಎಲ್ಲ ವರ್ಗಗಳಿಗೆ ತಲುಪಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸಬೇಕಿದೆ ಎಂದು ಸಲಹೆ ನೀಡಿದರು.
ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಮಾತನಾಡಿ, ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುವ ಅಧ್ಯಾಪಕರು ದಂತಗೋಪುರಗಳಲ್ಲಿ ಕೂರದೆ, ಬಹುಶಿಸ್ತೀಯ ಅಧ್ಯಯನಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಡುವ ಅಗತ್ಯತೆ ಇದೆ ಎಂದರು.
ಕುಲಸಚಿವ ಎ. ಎಲ್. ಮಂಜುನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ. ಎಸ್. ಎಂ. ಗೋಪಿನಾಥ್, ಹಣಕಾಸು ಅಧಿಕಾರಿ ಪ್ರೊ. ಎಚ್. ಎನ್. ರಮೇಶ್, ವಿಜ್ಞಾನ ನಿಕಾಯದ ಡೀನ್ ಪ್ರೊ. ಎಸ್. ವಿ. ಕೃಷ್ಣಮೂರ್ತಿ, ಪಿಎಂಇ ನಿರ್ದೇಶಕ ಪ್ರೊ. ಆರ್ತೋಬ ನಾಯಕ, ಎಲ್ಲಾ ನಿಕಾಯದ ಡೀನರುಗಳು, ವಿವಿಧ ವಿಭಾಗಗಳ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.