ಕರ್ನಾಟಕದಲ್ಲಿ ಆಸ್ತಿ ಖರೀದಿಗೆ  ಹೊಸ ರೂಲ್ಸ್!* *ಸೈಟ್/ ಮನೆ ಕೊಳ್ಳುವವರ ಮೇಲೆ IT ಕಣ್ಣು!*

*ಕರ್ನಾಟಕದಲ್ಲಿ ಆಸ್ತಿ ಖರೀದಿಗೆ  ಹೊಸ ರೂಲ್ಸ್!*

*ಸೈಟ್/ ಮನೆ ಕೊಳ್ಳುವವರ ಮೇಲೆ IT ಕಣ್ಣು!*

ಕರ್ನಾಟಕದಲ್ಲಿ ಸ್ಥಿರಾಸ್ತಿ ಖರೀದಿದಾರರು ಮತ್ತು ಮಾರಾಟಗಾರರಿಗೆ ಹೊಸ ನಿಯಮವೊಂದು ಸದ್ದಿಲ್ಲದೇ ಜಾರಿಯಾಗಿದೆ. ಈ ಹೊಸ ನಿಯಮ ಪಾಲಿಸದೇ ಇದ್ದರೇ, ನಿಮ್ಮ ಆಸ್ತಿಯೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಣಿಯಾಗಲ್ಲ. ಈ ಹೊಸ ನಿಯಮ ಜಾರಿಗೆ ತಂದಿದ್ದು ಏಕೆ, ಅದರ ಉದ್ದೇಶಗಳೇನು ಅನ್ನೋ ಮಾಹಿತಿ ಇಲ್ಲಿದೆ.

ರಾಜ್ಯದಲ್ಲಿ ಇನ್ನೂ ಮುಂದೆ 30 ಲಕ್ಷ ರೂಪಾಯಿ ಹಾಗೂ ಅದಕ್ಕಿಂತ ಹೆಚ್ಚಿನ ಮೌಲ್ಯದ ಸ್ಥಿರಾಸ್ತಿ ಖರೀದಿದಾರರು ಹಾಗೂ ಮಾರಾಟಗಾರರು ತಮ್ಮ ಪಾನ್ ಸಂಖ್ಯೆ ಸೇರಿದಂತೆ ತಮ್ಮ ಸಂಪೂರ್ಣ ವಿವರಗಳನ್ನ ಪ್ರತೇಕ ಹಾಳೆಯಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಾಣಿ ವೇಳೆಯೇ ಸಲ್ಲಿಸಬೇಕು. ಇದನ್ನು ನೋಂದಾಣಿ ಮತ್ತು ಮುದ್ರಾಂಕ ಇಲಾಖೆಯು ಆದಾಯ ತೆರಿಗೆ ಇಲಾಖೆಗೆ ರವಾನೆ ಮಾಡುತ್ತೆ .ಈ ಮೂಲಕ ಕಪ್ಪು ಹಣ ಬಳಸಿ ಸ್ಥಿರಾಸ್ತಿ ಖರೀದಿಸುವವರ ಮೇಲೆ ಹಾಗೂ ಬೇನಾಮಿ ಆಸ್ತಿ ಖರೀದಿಸುವವರ ಮೇಲೆ ನಿಗಾ ಇರಿಸಲು ಆದಾಯ ತೆರಿಗೆ ಇಲಾಖೆಯು ಮಾಸ್ಟರ್ ಪ್ಲ್ಯಾನ್ ಮಾಡಿದೆ.

ರಾಜ್ಯದ ನೋಂದಾಣಿ ಮತ್ತು ಮುದ್ರಾಂಕ ಇಲಾಖೆಯು ಆದಾಯ ತೆರಿಗೆ ಇಲಾಖೆಗೆ ನೆರವಾಗಲು ಖರೀದಿದಾರರು ಮತ್ತು ಮಾರಾಟಗಾರರ ಸಂಪೂರ್ಣ ವಿವರ ಸಲ್ಲಿಸೋದನ್ನು ಕಡ್ಡಾಯ ಮಾಡಿದೆ. ಆಸ್ತಿ ಖರೀದಿದಾರರು ಮತ್ತು ಮಾರಾಟಗಾರರ ವಿವರ ಸಲ್ಲಿಸದಿದ್ದರೇ, ಅಂಥ ಆಸ್ತಿಯೇ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಣಿಯೇ ಆಗಲ್ಲ.

ಖರೀದಿದಾರ ಮತ್ತು ಮಾರಾಟಗಾರನಿಂದ ಪಡೆದ ಆಸ್ತಿ ವಿವರ, ಪಾನ್ ಸಂಖ್ಯೆ, ಫಾರಂ 16 ಸ್ವೀಕೃತಿ, ಆಧಾರ್ ಸಂಖ್ಯೆ, ತಂದೆ ಹೆಸರು, ವಿಳಾಸ ಸೇರಿದಂತೆ ಸ್ವವಿವರದ ಪ್ರಮಾಣಪತ್ರವನ್ನು ಆಸ್ತಿ ದಸ್ತಾವೇಜು ಜೊತೆಯೇ ಸ್ಕ್ಯಾನ್ ಮಾಡಬೇಕು. ಈ ಸ್ಕ್ಯಾನ್ ಮಾಡಿದ ಹಾಳೆಯನ್ನು ಫೈಲ್ ರೂಪದಲ್ಲಿಯೇ ಆಸ್ತಿ ದಸ್ತಾವೇಜು ಹಾಳೆಗಳ ಜೊತೆಯೇ ಕಾವೇರಿ-2 ತಂತ್ರಾಂಶಕ್ಕೆ ಅಪ್ ಲೋಡ್ ಮಾಡಬೇಕು. ಈ ಮೂಲಕ ಯಾವುದೇ ಕ್ಷಣದಲ್ಲಿ ಬೇಕಾದರೂ, ಈ ಸ್ವ ವಿವರದ ಹಾಳೆಯು ಆದಾಯ ತೆರಿಗೆ ಇಲಾಖೆಗೆಸಿಗುವಂತಿರಬೇಕು ಎಂದು ಪ್ಲ್ಯಾನ್ ಮಾಡಲಾಗಿದೆ. ಖರೀದಿದಾರರು ಮತ್ತು ಮಾರಾಟಗಾರರ ವಿವರ ನೀಡದಿದ್ದರೇ, ಅಂಥ ಆಸ್ತಿ ರಿಜಿಸ್ಟ್ರೇಷನ್ ರದ್ದು ಮಾಡಲಾಗುತ್ತೆ ಎಂದು ಕೂಡ ಎಚ್ಚರಿಸಲಾಗಿದೆ.

ನೋಂದಾಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತ ಕೆ.ಎ.ದಯಾನಂದ ಅವರು ಮೇ 16 ರಂದು ಎಲ್ಲ ಜಿಲ್ಲೆಗಳ ನೋಂದಾಣಾಧಿಕಾರಿಗಳು ಮತ್ತು ಉಪ ನೋಂದಾಣಾಧಿಕಾರಿಗಳಿಗೆ ಈ ಬಗ್ಗೆ ಸುತ್ತೋಲೆ ಹೊರಡಿಸಿ ಸೂಚನೆ ನೀಡಿದ್ದಾರೆ. ಐ.ಟಿ. ಇಲಾಖೆಗೆ ಯಾವ್ಯಾವ ವಿವರ ನೀಡಬೇಕೆಂದರೇ, ಆಸ್ತಿ ವರದಿಯ ಸಂಖ್ಯೆ, ಆಸ್ತಿ ವರದಿಯ ಕ್ರಮ ಸಂಖ್ಯೆ ನಮೂದಿಸಬೇಕು . ಆಸ್ತಿ ವಹಿವಾಟು ವಿವರಗಳಲ್ಲಿ ವಹಿವಾಟು ನಡೆದ ದಿನಾಂಕ, ಆಸ್ತಿ ವಹಿವಾಟು ರೀತಿಯನ್ನು ಉಲ್ಲೇಖಿಸಬೇಕು. ಅಂದರೇ, ಆಸ್ತಿ ಮಾರಾಟವೋ, ದಾನ ನೀಡಿಕೆಯೋ, ಮರಣಪತ್ರವೋ, ಉಡುಗೊರೆಯೋ ಎಂದುಉಲ್ಲೇಖಿಸಬೇಕು. ವಹಿವಾಟಿನ ಮೊತ್ತ, ಆಸ್ತಿ ಮಾದರಿ, ಆಸ್ತಿಯು ನಗರ ವ್ಯಾಪ್ತಿಯಲ್ಲಿದೆಯೇ ಎಂದು ವಿವರ ನೀಡಬೇಕು.

ಈ ಎಲ್ಲ ವಿವರಗಳನ್ನು ಸಬ್ ರಿಜಿಸ್ಟ್ರಾರ್ ಗಳು ವರ್ಷದ ಅಂತ್ಯದಲ್ಲಿ 61ಎ ನಮೂನೆಯಲ್ಲಿ ಆದಾಯ ತೆರಿಗೆ ಇಲಾಖೆಗೆ ಸಲ್ಲಿಸುತ್ತಾರೆ. ಖರೀದಿದಾರರು ಮತ್ತು ಮಾರಾಟಗಾರರಿಂದ ವಿವರ ಪಡೆದು ಸ್ಕ್ಯಾನ್ ಮಾಡಲು ಯಾವುದೇ ಶುಲ್ಕ ಸಂಗ್ರಹಿಸಬಾರದು ಎಂದು ಸುತ್ತೋಲೆಯಲ್ಲಿ ಸಬ್ ರಿಜಿಸ್ಟ್ರಾರ್ ಗಳಿಗೆ ತಿಳಿಸಲಾಗಿದೆ. ಆದರೇ, ನೋಂದಾಣಿ ಮತ್ತು ಮುದ್ರಾಂಕ ಇಲಾಖೆಯು ಈ ವಿವರ ಸಲ್ಲಿಕೆಯ ನಿಯಮವನ್ನು ಹೊಸದಾಗಿ ಏನೂ ಜಾರಿಗೆ ತರುತ್ತಿಲ್ಲ.

ಈ ಹಿಂದೆಯೂ ಈ ನಿಯಮ ಜಾರಿಯಲ್ಲಿತ್ತು . ಆದರೇ, ಸಬ್ ರಿಜಿಸ್ಟ್ರಾರ್ ಗಳು ಇದನ್ನು ಸರಿಯಾಗಿ ಪಾಲನೆ ಮಾಡುತ್ತಿರಲಿಲ್ಲ. ಕೆಲವೊಮ್ಮೆ ಖರೀದಿದಾರರು, ಆಸ್ತಿ ಮಾರಾಟಗಾರರು ನೀಡಿದ್ದ ವಿವರಗಳು ಸುಳ್ಳು ಆಗಿರುತ್ತಿದ್ದವು. ಹೀಗಾಗಿ ಈಗ ಸರಿಯಾಗಿ ಎಲ್ಲ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ನೋಂದಾಣಿ ಮತ್ತು ಮುದ್ರಾಂಕ ಇಲಾಖೆಯ ಮಹಾಪರಿವೀಕ್ಷಕ ಹಾಗೂ ಮುದ್ರಾಂಕ ಆಯುಕ್ತರು ಈ ಹೊಸ ಆದೇಶವನ್ನು ಹೊರಡಿಸಿದ್ದಾರೆ. ಇದನ್ನು ಈಗ ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಇದರಿಂದ ಆದಾಯ ತೆರಿಗೆ ಇಲಾಖೆಗೆ ಕಪ್ಪು ಹಣ ಬಿಳಿ ಹಣವಾಗಿ ಪರಿವರ್ತನೆ ಮಾಡಿಕೊಳ್ಳುವ ಕೇಸ್ ಗಳನ್ನು ಪತ್ತೆ ಹಚ್ಚೋದು ಸುಲಭವಾಗುತ್ತೆ. ಜೊತೆಗೆ ಬೇನಾಮಿ ಆಸ್ತಿ ಖರೀದಿದಾರರನ್ನು ಗುರುತಿಸಲು ಕೂಡ ಸುಲಭವಾಗುತ್ತೆ.