ವಿದ್ಯಾರ್ಥಿಗಳಿಗೆ ಅನ್ನದ ವಿಷ!!!* *ಬಿಸಿಎಂ ಜಿಲ್ಲಾಧಿಕಾರಿ ಶೋಭಾ- ತಾಲ್ಲೂಕು ಅಧಿಕಾರಿ ಪವಿತ್ರಾನಂದ ರಾಜು- ಹುಳ ಹಿಡಿಯುತ್ತಿರುವ ಅಕ್ಕಿ, ಗೋದಿಯ ಅಕ್ರಮ ದಾಸ್ತಾನು ಮತ್ತು ನರ ನರ ನರಕದಲ್ಲಿ ಹಿಂದುಳಿದ ವರ್ಗಗಳ ಮಕ್ಕಳು!* *ಏನಿದು ಬ್ರಹ್ಮಾಂಡ ಭ್ರಷ್ಟಾಚಾರದ ಕಥೆ?*
*ವಿದ್ಯಾರ್ಥಿಗಳಿಗೆ ಅನ್ನದ ವಿಷ!!!*
*ಬಿಸಿಎಂ ಜಿಲ್ಲಾಧಿಕಾರಿ ಶೋಭಾ- ತಾಲ್ಲೂಕು ಅಧಿಕಾರಿ ಪವಿತ್ರಾನಂದ ರಾಜು- ಹುಳ ಹಿಡಿಯುತ್ತಿರುವ ಅಕ್ಕಿ, ಗೋದಿಯ ಅಕ್ರಮ ದಾಸ್ತಾನು ಮತ್ತು ನರ ನರ ನರಕದಲ್ಲಿ ಹಿಂದುಳಿದ ವರ್ಗಗಳ ಮಕ್ಕಳು!*
ಶಿವಮೊಗ್ಗ ತಾಲ್ಲೂಕಿನ 26 ಬಿಸಿಎಂ ಹಾಸ್ಟೆಲ್ ಗಳ ಮಕ್ಕಳು ನರ ನರ ನರಕ ನೋಡುತ್ತಿದ್ದಾರಾ? ತಿನ್ನುವ ಅನ್ನ, ಗೋದಿಯಲ್ಲಿ ಹುಳು ಹುಡುಕುತ್ತಿದ್ದಾರಾ?
ಇಂಥ ಪ್ರಶ್ನೆಗಳನ್ನು ಮಾನವೀಯ ದೃಷ್ಟಿಯಲ್ಲಿ ಕೇಳಲೇಬೇಕಾದ ಅನಿವಾರ್ಯತೆ ಬಂದು ಬಿಟ್ಟಿದೆ!
ಶಿವಮೊಗ್ಗ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಂಬ ಹುದ್ದೆ ಅಲಂಕರಿಸಿರುವ ಶೋಭಾ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಶಿವಮೊಗ್ಗ ತಾಲ್ಲೂಕಿನ 26 ಬಿಸಿಎಂ ಹಾಸ್ಟೆಲ್ ಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಪಾಲಿಗೆ ಶೋಭಾಯಮಾನವಾಗಿ ಬೆಳಗ ಬೇಕಾಗಿತ್ತು. ಆದರೆ, ಶೋಭಾ ಈ ವಿದ್ಯಾರ್ಥಿಗಳ ಪಾಲಿಗೆ ಫುಡ್ ಪಾಯ್ಸನ್ ಆಗುತ್ತಿದ್ದಾರಾ? ತಾಲ್ಲೂಕು ಅಧಿಕಾರಿ ಪವಿತ್ರಾನಂದ ರಾಜು ಈ ವಿಷದ ಆಹಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರಾ?
ಸ್ವಲ್ಪ ಎಚ್ಚರ ತಪ್ಪಿದರೂ ನೂರಾರು ವಿದ್ಯಾರ್ಥಿ- ವಿದ್ಯಾರ್ಥಿನಿಯರು ಈ ಹುಳಬಿದ್ದ ಆಹಾರ ಸೇವಿಸಿ ಜೀವಕ್ಕೆ ಅಪಾಯ ಮಾಡಿಕೊಳ್ಳುವಂಥ ವಾತಾವರಣ ನಿರ್ಮಿಸಲಾಗಿದೆಯೇ?
ಶಿವಮೊಗ್ಗ ಉಪವಿಭಾಗ ಮಟ್ಟದ ಅಟ್ರಾಸಿಟಿ ಕಮಿಟಿ ಸದಸ್ಯರಾಗಿರುವ ಹನುಮಂತಪ್ಪ ಯಡವಾಲರವರು ಇತ್ತೀಚೆಗೆ ನಡೆದ ಸಭೆಯಲ್ಲಿ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಬಳಿ ಇರುವ ಶಿವಮೊಗ್ಗ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಕಟ್ಟಡದಲ್ಲಿ(ದೇವರಾಜ್ ಅರಸು ಭವನ) ಕೊಳೆಯುತ್ತಾ ಹುಳ ಹಿಡಿಯುತ್ತಾ ಬಿದ್ದಿರುವ ಅಪಾರ ಮಟ್ಟದ ಅಕ್ಕಿ ಮತ್ತು ಗೋದಿ ದಾಸ್ತಾನಿನ ಅವ್ಯವಸ್ಥೆ ಮತ್ತು ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ್ದರೂ ಜಿಲ್ಲಾ ಅಧಿಕಾರಿ ಹುದ್ದೆಯಲ್ಲಿ ವಿರಾಜಮಾನರಾಗಿರುವ ಶೋಭಾರವರು ಕ್ಯಾರೆ ಎಂದೂ ತಲೆ ಕೆಡಿಸಿಕೊಳ್ಳದೇ ದಿವ್ಯ ನಿರ್ಲಕ್ಷ್ಯ ವಹಿಸಿದ್ದು ದುರಂತವೇ ಸೈ. ಈಗಲೂ ಆ ಆಹಾರದ ಅಕ್ರಮ ದಾಸ್ತಾನು ಕಸಕ್ಕಿಂತ ಕಡೆಯಾಗಿ ಹುಳ ಹಿಡಿಯುತ್ತಲೇ ಇದೆ!
ಆಹಾರ ಸುರಕ್ಷತಾ ಕಾಯ್ದೆಯ ಪ್ರಕಾರ ಇಂಥ ಅಕ್ಕಿ, ಗೋದಿಯನ್ನು ಸಂರಕ್ಷಿಸಿಡುವುದು ಈ ಅಧಿಕಾರಿಗಳ ಆದ್ಯ ಕರ್ತವ್ಯ. ಆದರೆ, ಕಸವನ್ನಾದರೂ ಬೇಯಿಸಿ ತಿನ್ನಬಹುದು- ಇಲ್ಲಿರೋ ಅಕ್ಕಿ, ಗೋದಿಯನ್ನಲ್ಲ ಅನ್ನೋ ರೀತಿಯಲ್ಲಿ ಯಾವುದೇ ಸುರಕ್ಷತೆ ಇಲ್ಲದೇ ಸಂಗ್ರಹಿಸಿಡಲಾಗಿದೆ.
ಈ ಅಕ್ಕಿ, ಗೋದಿಯನ್ನು ತಾಲ್ಲೂಕು ಬಿಸಿಎಂ ಕಚೇರಿಯಲ್ಲಿ ಸಂಗ್ರಹಿಸಿಟ್ಟಿರುವುದಾದರೂ ಯಾಕೆ? ಹಾಸ್ಟೆಲ್ ಗಳಲ್ಲಿ ಜಾಗವಿಲ್ಲ ಎಂಬ ಉತ್ತರ ನೀಡುತ್ತಾರಾದರೂ ಅದು ಸಮಂಜಸವಲ್ಲ. ಯಾವುದೇ ಹಾಸ್ಟೆಲ್ ವಾರ್ಡನ್ ಗಳು ಜಾಗವಿಲ್ಲ ಎಂದೂ ಅಲ್ಲೇ ಆಹಾರ ಸಾಮಾಗ್ರಿ ಇಟ್ಟುಕೊಳ್ಳಿ ಎಂದೂ ಪತ್ರ ಬರೆದು ಕೊಟ್ಟ ಒಂದೇ ಒಂದು ಉದಾಹರಣೆ ಕೂಡ ಇಲ್ಲ! ಆದರೂ, ಈ ಮಟ್ಟದಲ್ಲಿ, ಲೋಡುಗಟ್ಟಲೆ ಅಕ್ರಮವಾಗಿ ಅಕ್ಕಿ, ಗೋದಿ ಸಂಗ್ರಹ ಮಾಡಿಟ್ಟಿರುವುದು ಯಾಕೆ? ಅದೂ ನೆಲಕ್ಕೊಂದು ಟಾರ್ಪಲ್ ಹಾಸದೇ, ಹುಳ ಹಿಡಿದರೂ ಸಂರಕ್ಷಿಸಲು ಹೋಗದೇ ಆಹಾರ ಸಂರಕ್ಷಣಾ ಕಾಯ್ದೆಯನ್ನೇ ಗಾಳಿಗೆ ತೂರಿರುವುದರ ಬಗ್ಗೆ ಜಿಲ್ಲಾ ಅಧಿಕಾರಿ ಶೋಭಾ ಉತ್ತರಿಸುವರೇ? ಈ ರೀತಿಯಲ್ಲಿ ದಾಸ್ತಾನು ಸಂಗ್ರಹಕ್ಕೆ ಜಿಲ್ಲಾಧಿಕಾರಿಗಳಿಂದ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಂದ ಅನುಮತಿ ಪಡೆದಿದ್ದಾರೆಯೇ? ಈ ವಿಚಾರ ಅವರ ಗಮನದಲ್ಲಾದರೂ ಇದೆಯೇ?
ಅಕ್ಕಿ, ಗೋದಿ ಸೇರಿದಂತೆ ಪಡಿತರ ಶಿವಮೊಗ್ಗ ಜಿಲ್ಲೆಯ ಎಲ್ಲಾ ಬಿಸಿಎಂ ಹಾಸ್ಟೆಲ್ ಗಳಿಗೆ ಪ್ರತಿ ತಿಂಗಳ 1ರಿಂದ 5ನೇ ತಾರೀಖಿನೊಳಗೆ ಸರಬರಾಜು ಮಾಡಬೇಕು. ಆದರೆ, ಗುತ್ತಿಗೆದಾರ ನ್ಯಾಷನಲ್ ಕೋ ಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್ ನ ನಿರಂಜನ್ ಮಾಡುತ್ತಿರುವುದೇನು? ಈ ಗುತ್ತಿಗೆದಾರನ ಜೊತೆ ಶಿವಮೊಗ್ಗ ಜಿಲ್ಲಾ ಬಿಸಿಎಂ ಅಧಿಕಾರಿ ಶೋಭಾ, ತಾಲ್ಲೂಕು ಅಧಿಕಾರಿ ಪವಿತ್ರಾನಂದ ರಾಜುರವರ ಸೌಮ್ಯ, ಸರಳ ಸಂಬಂಧ ಎಂಥದ್ದು? ಮನಸಿಗೆ ಬಂದಂತೆ ಪಡಿತರ ಸರಬರಾಜು ಮಾಡುತ್ತಿದ್ದರೂ ಈ ಅಧಿಕಾರಿಗಳೇಕೆ ಪ್ರಶ್ನಿಸದೇ ಮೌನವಹಿಸುತ್ತಿದ್ದಾರೆ? ಇದರಲ್ಲಿ ಮಹಾ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹನುಮಂತಪ್ಪ ಯಡವಾಲ ನೇರ ಆರೋಪ ಮಾಡಿದ್ದಾರೆ.
ಈ ಅಕ್ರಮ ಪಡಿತರದ ಅಕ್ರಮ ಮಾರಾಟ ನಡೆಯುತ್ತಿದೆಯೇ?- ಈ ಪ್ರಶ್ನೆಯೂ ಈಗ ಉದ್ಭವಿಸತೊಡಗಿದೆ!
ದೇವರಾಜ್ ಅರಸು ಭವನದಲ್ಲಿ ಅಕ್ರಮವಾಗಿ ಸಂಗ್ರಹವಾಗಿರುವ ಅಕ್ಕಿ, ಗೋದಿಯ ದಾಸ್ತಾನು ನಿರಂತರವಾಗಿರುತ್ತೆ. ಈಗಲೂ ಮುಂದುವರೆದಿದೆ ಎಂಬುದು ದುರಂತ.
ಶೋಭಾಜೀ ಜಿಲ್ಲಾ ಅಧಿಕಾರಿಯಾಗಿ ಬಿಸಿಎಂ ಇಲಾಖೆಯಲ್ಲಿ ಶೋಭಾಯಮಾನರಾಗಿ ಲಿಮಿಟ್ ಮುಗಿದರೂ ಈಗಲೂ ತಳವೂರಿ ಇಂಥ ಅಕ್ರಮ ದಾಸ್ತಾನಿನ ವರದಿಗಳ ಶೋಭೆ ಹೆಚ್ಚಿಸುತ್ತಿದ್ದಾರೆಂಬುದೇ ಮತ್ತೊಂದು ದುರಂತ.
ಶಿವಮೊಗ್ಗ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎನ್.ಹೇಮಂತ್ ಶಿವಮೊಗ್ಗದಂತಹ ಭ್ರಷ್ಟತೆ ಉರಿಯುವ ಜಾಗದಲ್ಲಿ ಹಿಮದಂತೆ ಕುಳಿತುಬಿಟ್ಟರೆ ಕಥೆ ಏನು? ಬಿಸಿಎಂ ಜಿಲ್ಲಾ ಅಧಿಕಾರಿ ಶೋಭಾಜೀಯವರ, ತಾಲ್ಲೂಕು ಅಧಿಕಾರಿ ಪವಿತ್ರಾನಂದಜೀಯವರ ಎತ್ತಂಗಡಿಯನ್ನು ಮಾಡದಿದ್ದರೆ ಶಿವಮೊಗ್ಗ ಜಿಲ್ಲೆ ಮತ್ತು ತಾಲ್ಲೂಕಿನ ಬಿಸಿಎಂ ಹಾಸ್ಟೆಲ್ ಗಳ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಮಹಾ ಮೋಸ ಮಾಡಿ ಅನ್ನದ ಬದಲು ಹುಳ ಉಣಿಸಿದಂತೆ!
ಮನೆ ಬಿಟ್ಟರೆ ಆಫೀಸು- ಆಫೀಸು ಬಿಟ್ಟರೆ ಮನೆ ಎಂಬಂತಿರುವ ಜಿಪಂ ಸಿ ಇ ಓ ಹೇಮಂತ್ ಈಗಲಾದರೂ ಒಂದಿಷ್ಟು ಕೆಲಸ ಮಾಡಿ ತಮ್ಮ ಹುದ್ದೆಗೆ ಮರ್ಯಾದೆ ತಂದು ಕೊಡಲಿ…
ಮೂಲತಃ ವಾರ್ಡನ್ ಆಗಿರೋ ಶೋಭಾರವರು ಆನಂತರ ಬಡ್ತಿ ಹೊಂದಿ ಪ್ರಭಾರದ ಕೋಲು ಹಿಡಿದು ಜಿಲ್ಲಾ ಅಧಿಕಾರಿಯಾಗಿ ಬಿಸಿಎಂ ಇಲಾಖೆಗೆ ಹುಳ ಹಿಡಿಸುತ್ತಿದ್ದಾರೆ. ಇಂಥ ಅಧಿಕಾರಿಯನ್ನು ಕೂಡಲೇ ಎತ್ತಂಗಡಿ ಮಾಡದಿದ್ದರೆ ವಿದ್ಯಾರ್ಥಿಗಳು, ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುವುದರಲ್ಲಿ ಅನುಮಾನಗಳೇ ಇಲ್ಲ… ಈ ಸತ್ಯ ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆಯವರಿಗೆ, ಸಿಇಓ ಆಗಿರುವ ಹೇಮಂತ್ ರವರಿಗೆ ಕೂಡಲೇ ಅರ್ಥವಾಗಬೇಕಿದೆ…