ಕುವೆಂಪು ರಂಗಮಂದಿರದಲ್ಲಿ ಜ.17-18ರಂದು ಎರಡು ದಿನ “ಗಾನ ಗಂಧರ್ವನ ನೂರೊಂದು ನೆನಪು”
ಕುವೆಂಪು ರಂಗಮಂದಿರದಲ್ಲಿ ಜ.17-18ರಂದು ಎರಡು ದಿನ “ಗಾನ ಗಂಧರ್ವನ ನೂರೊಂದು ನೆನಪು” 
****************************************
ಶಿವಮೊಗ್ಗ : ನಗರದ ಹೆಸರಾಂತ “ರಾಗರಂಜನಿ” ಸಾಂಸ್ಕೃತಿಕ ಸಂಸ್ಥೆಯ ದಶಮಾನೋತ್ಸವದ ಅಂಗವಾಗಿ ಜನವರಿ 17 ರ ಶನಿವಾರ ಮತ್ತು 18 ರ ಭಾನುವಾರ ಕುವೆಂಪು ರಂಗಮಂದಿರದಲ್ಲಿ “ಎಸ್ ಪಿ ಬಿ ಗೆ ಸ್ವರ ನಮನ” ಕಾರ್ಯಕ್ರಮ ನಡೆಯಲಿದೆ.
ಈ ಕುರಿತು ಮಾಹಿತಿ ನೀಡಿದ “ರಾಗರಂಜನಿ” ಸಂಸ್ಥೆಯ ಮುಖ್ಯಸ್ಥ, ಪ್ರಖ್ಯಾತ ಸುಗಮ ಸಂಗೀತ ಗಾಯಕ ಪ್ರಹ್ಲಾದ್ ದೀಕ್ಷಿತ್ ರವರು, ಜ. 17 ರ ಶನಿವಾರ ಸಂಜೆ 5-30 ಕ್ಕೆ ನಡೆಯಲಿರುವ “ಗಾನ ಗಂಧರ್ವನ ನೂರೊಂದು ನೆನಪು” ಗೀತೆಗಳ ವಿಶೇಷ ಗಾಯನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಗರಂಜನಿ ಸಂಸ್ಥೆ ಅಧ್ಯಕ್ಷ ವಿದ್ವಾನ್ ಮಾನವೇಂದ್ರ ದೀಕ್ಷಿತ್ ವಹಿಸಲಿದ್ದಾರೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಶಾಸಕ ಚನ್ನಬಸಪ್ಪ, ಎಸ್. ಆರ್. ನಾಗರಾಜ್, ಷಡಕ್ಷರಿ, ಈ. ವಿಶ್ವಾಸ್, ಉಮೇಶ್ ಹೆಚ್. ಆಗಮಿಸಲಿದ್ದಾರೆ ಎಂದರು.
ಜ. 18 ರ ಭಾನುವಾರ ಸಂಜೆ 5-30 ಕ್ಕೆ ನಡೆಯಲಿರುವ ವಿಶೇಷ ಗಾಯನ ಕಾರ್ಯಕ್ರಮವನ್ನು ಸಂಗೀತ ನಿರ್ದೇಶಕ ವಿ ಮನೋಹರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಕಾಂತೇಶ್ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ವಿದ್ವಾನ್ ಮಾನವೇಂದ್ರ ದೀಕ್ಷಿತ್ ವಹಿಸಲಿದ್ದಾರೆ ಎಂದು ತಿಳಿಸಿದರು.
ನಂತರ ನಡೆಯಲಿರುವ ಗಾಯನ ಕಾರ್ಯಕ್ರಮದಲ್ಲಿ ಕನ್ನಡದ ಪ್ರಖ್ಯಾತ ಗಾನ ಗಂಧರ್ವ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಡಿರುವ ಆಯ್ದ ಚಲನಚಿತ್ರಗಳ ಗೀತೆಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಲಿದ್ದಾರೆ ಎಂದು ಅವರು ಹೇಳಿದರು.
ಈ “ಗಾನ ಗಂಧರ್ವನ ನೂರೊಂದು ನೆನಪು..” ಗೀತೆಗಳ ಗಾಯನ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿದ್ವಾನ್ ಶ್ರೀ ಪ್ರಹ್ಲಾದ್ ದೀಕ್ಷಿತ್ ಕೋರಿದ್ದಾರೆ.
ರಾಗರಂಜನಿ ಸಾಂಸ್ಕೃತಿಕ ಸಂಸ್ಥೆ ಬೆಳೆದು ಬಂದ ಹಾದಿ :
2016 ನೇ ಇಸವಿಯಲ್ಲಿ ಪ್ರಾರಂಭಗೊಂಡ “ರಾಗರಂಜನಿ ಸಂಸ್ಥೆ” ಸಂಗೀತಾಸಕ್ತರಿಗೆ ಭಕ್ತಿ ಪ್ರಧಾನ ಗೀತೆಗಳು, ಜಾನಪದ ಗೀತೆ, ದೇಶಭಕ್ತಿ ಗೀತೆ, ಭಾವಗೀತೆ ಹಾಗೂ ಚಲನಚಿತ್ರ ಗೀತೆಗಳನ್ನು ಹೇಳಿಕೊಡುವುದು ಸಂಸ್ಥೆಯ ಧ್ಯೇಯೋದ್ದೇಶವಾಗಿದೆ.
ಹಿನ್ನೆಲೆ : “ರಾಗರಂಜನಿ ಸಂಸ್ಥೆ”ಯ ಮುಖ್ಯಸ್ಥರಾದ ಪ್ರಹ್ಲಾದ್ ದೀಕ್ಷಿತ್‌ರವರು ಸಂಗೀತವನ್ನು ಶಿವಮೊಗ್ಗದ ವಿದ್ವಾನ್ ಎಸ್.ಆರ್. ನಾಗರಾಜ್ ಅವರಿಂದ ಮಾರ್ಗದರ್ಶನ ಪಡೆದು, ಬೆಂಗಳೂರಿನಲ್ಲಿ ಗುರುಕುಲ ಪದ್ದತಿಯಲ್ಲಿ ಕಲಿತಿರುತ್ತಾರೆ. ನಗರದ ಹೆಚ್.ಆರ್. ಮಾನವೇಂದ್ರ ದೀಕ್ಷಿತ್ ಮತ್ತು ಉಷಾ ದೀಕ್ಷಿತ್‌ರವರ ಪುತ್ರರಾದ ಇವರು ತಮ್ಮ ಪ್ರಾಥಮಿಕ ಸಂಗೀತಾಭ್ಯಾಸವನ್ನು ತಮ್ಮ ದೊಡ್ಡಪ್ಪ ದಾಶರಥಿ ದೀಕ್ಷಿತ್ ಮತ್ತು ಅಜ್ಜಿ ಶಾರದಾ ರಾಮಾದೀಕ್ಷಿತ್ ರವರಲ್ಲಿ ಮಾಡಿದರು. ವಿಶೇಷವೆಂದರೆ, ಪ್ರಹ್ಲಾದ್ ದೀಕ್ಷಿತ್‌ರವರು ಸುಮಾರು ಐದು ವರ್ಷದವರಿದ್ದಾಗಲೇ ಸಂಗೀತ ಕಲಿಯುವ ಆಸಕ್ತಿ ಹೊಂದಿದ್ದರು. ಪ್ರಹ್ಲಾದ್ ದೀಕ್ಷಿತ್ ರವರು, ರಾಜ್ಯದೆಲ್ಲೆಡೆ ಈವರೆಗೆ ಸುಮಾರು 800 ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ವಂಶಪಾರಂಪರ್ಯವಾದ ಸಂಗೀತ ಮನೆತನದ ಹಿನ್ನೆಲೆಯ ಪ್ರಹ್ಲಾದ್ ದೀಕ್ಷಿತ್‌ರವರ ಬಳಿ ಈಗ ಸುಮಾರು 180 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸಂಗೀತಾಭ್ಯಾಸ ಮಾಡುತ್ತಿದ್ದಾರೆ. ಪ್ರಹ್ಲಾದ್ ದೀಕ್ಷಿತ್‌ರವರು ಸುಮಾರು 500 ಕ್ಕೂ ಹೆಚ್ಚು ಭಾವಗೀತೆ, ರಂಗಗೀತೆ ಹಾಗೂ ದಾಸರ ಪದಗಳಿಗೆ ರಾಗ ಸಂಯೋಜನೆ, 25 ಕ್ಕೂ ಹೆಚ್ಚು ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇವರ ನಿರ್ದೇಶನದಲ್ಲಿ 5 ಕ್ಕೂ ಹೆಚ್ಚು ಭಾವಗೀತೆ ಧ್ವನಿತಟ್ಟೆಗಳ ಆಲ್ಬಮ್‌ಗಳು ಬಿಡುಗಡೆಗೊಂಡಿವೆ. ಅಲ್ಲದೇ ಇವರು ಕನ್ನಡ ಚಲನಚಿತ್ರಗಳಲ್ಲಿಯೂ ಹಾಡುಗಳನ್ನು ಹಾಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ವಿಶಿಷ್ಠ ಸಾಧನೆಗೈದ ಪ್ರಹ್ಲಾದ್ ದೀಕ್ಷಿತ್‌ರವರು ನಾದಬ್ರಹ್ಮ ಹಂಸಲೇಖರವರಿಂದ ಮೆಚ್ಚುಗೆಯನ್ನೂ ಸಹ ಪಡೆದಿದ್ದಾರೆ.
ತೀರ್ಪುಗಾರರಾಗಿ : ಪ್ರಹ್ಲಾದ್ ದೀಕ್ಷಿತ್‌ರವರು ಸುಮಾರು 100 ಕ್ಕೂ ಹೆಚ್ಚು ಸುಗಮ ಸಂಗೀತ ಕಾರ್ಯಕ್ರಮಗಳಿಗೆ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಗರದ ಸ್ಥಳೀಯ ಹಲವು ದೃಶ್ಯ ಮಾಧ್ಯಮಗಳು ಸಂಗೀತದ ಬಗ್ಗೆ ಪ್ರಹ್ಲಾದ್ ದೀಕ್ಷಿತ್‌ರವರನ್ನು ಸಂದರ್ಶನ ಮಾಡಿವೆ.
ಎಲ್ಲಾ ವಯೋಮಾನದವರಿಗೂ ಸಂಗೀತ : ಎಂಟು ವರ್ಷದಿಂದ ಎಂಭತ್ತು ವರ್ಷದವರೆಗಿನ ವಯೋಮಾನದವರಿಗೆ ಸಂಗೀತವನ್ನು ಹೇಳಿ ಕೊಡುತ್ತಿದ್ದಾರೆ. ಒಟ್ಟು ಹನ್ನೆರಡು ಬ್ಯಾಚ್ ನಲ್ಲಿ ವಾರಕ್ಕೆ ಎರಡು ದಿನದಂತೆ ಸಂಗೀತವನ್ನು ಹೇಳಿ ಕೊಡುತ್ತಿದ್ದಾರೆ. ಇದರಲ್ಲಿ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಸಂಗೀತ ಬ್ಯಾಚ್ ನಡೆಸಲಾಗುತ್ತಿದೆ.
ಸಂಗೀತ ಶಿಕ್ಷಕರಾಗಿ : ಪ್ರಹ್ಲಾದ್ ದೀಕ್ಷಿತ್‌ರವರು ಶಿವಮೊಗ್ಗದ ಖಾಸಗಿ ಶಾಲೆಯಲ್ಲಿ ಕಳೆದ ಹದಿನೆಂಟು ವರ್ಷಗಳಿಂದ ಸಂಗೀತ ಶಿಕ್ಷಕರಾಗಿಯೂ ಸಹ ಸೇವೆ ಸಲ್ಲಿಸುತ್ತಿದ್ದಾರೆ.
ಈವರೆಗೆ ನಡೆಸಿದ ಸಂಗೀತ ಕಾರ್ಯಕ್ರಮಗಳು :
ನಗರದ ಕುವೆಂಪು ರಂಗಮಂದಿರದಲ್ಲಿ ರಾಗರಂಜನಿ- 2017 (ಚಲನಚಿತ್ರದ ಭಕ್ತಿಗೀತೆಗಳ ಕಾರ್ಯಕ್ರಮ), ಹಂಸಗಾನ- 2018 (ಹಂಸಲೇಖ ಹಿಟ್ಸ್), ಇಳಯಗೀತೆ- 2019, (ಇಳಯರಾಜ ಹಿಟ್ಸ್), ಸಂಗೀತ್ ಕೀ ಬರ್ಸಾತ್ – 2020, ವಿಷ್ಣು ವೈಭವ – 2021, (ವಿಷ್ಣುವರ್ಧನ್ ಹಿಟ್ಸ್), ರಾಜ್ ಗಾನ ಸಂಭ್ರಮ -2022, (ಡಾ. ರಾಜಕುಮಾರ್ ಹಿಟ್ಸ್), ರವಿ ರಾಗ – 2023, (ರವಿಚಂದ್ರನ್ ಹಿಟ್ಸ್), ಶಿವರಾಜ್ ಸಂ-ಗೀತ -2024, (ಡಾ. ಶಿವರಾಜ್ ಕುಮಾರ್ ಹಿಟ್ಸ್), ಸಿ. ಅಶ್ವಥ್ ಗಾನಸಿರಿ – 2025, (ಸಿ. ಅಶ್ವಥ್ ಹಿಟ್ಸ್). “ತರಂಗ” ಕಿವುಡು ಮಕ್ಕಳ ಸಹಾಯಾರ್ಥ “ಸಂತೋಷಕ್ಕೆ ಹಾಡು ಸಂತೋಷಕ್ಕೆ”, ಹೆಚ್.ಎಸ್.ವಿ. ಗಾನ ಗೌರವ, ದಶಮಾನೋತ್ಸವದ ಅಂಗವಾಗಿ ಕರೋಕೆ ಕಮಾಲ್, ಸುಸ್ವರ, ಸೇರಿದಂತೆ ವರ್ಷವಿಡೀ ಸಂಗೀತ ಕಾರ್ಯಕ್ರಮ..
ಸಂಸ್ಥೆಯಿಂದ ನಡೆದ ವಿಶೇಷ ಕಾರ್ಯಕ್ರಮಗಳು :
* ವಿಶೇಷ ಚೇತನರಿಗಾಗಿ ಆಯೋಜಿಸಿದ ಗಾಯನ ಸ್ಪರ್ಧೆ..
* ಚಲನಚಿತ್ರವೊಂದಕ್ಕೆ ಟ್ರಸ್ಟ್ ನ ವಿದ್ಯಾರ್ಥಿಗಳಿಂದ ಹಿನ್ನೆಲೆ ಗಾಯನ..
* “ಅಧಿಕಸ್ಯ ಅಧಿಕ ಫಲಂ” ಪ್ರಹ್ಲಾದ್ ದೀಕ್ಷಿತ್ ನೇತೃತ್ವದಲ್ಲಿ ವಿದ್ಯಾರ್ಥಿಗಳೊಂದಿಗೆ ಶತಕಂಠದಲ್ಲಿ ಭಜನಾ ಕಾರ್ಯಕ್ರಮ..
* ಕನ್ನಡ ರಾಜ್ಯೋತ್ಸವ, ದಸರಾ, ಶಿವರಾತ್ರಿ, ಗಣೇಶೋತ್ಸವ ಸೇರಿದಂತೆ ಇತರೆ ದಿನಗಳಂದು ಶಿವಮೊಗ್ಗವಲ್ಲದೇ, ಹೊಸಪೇಟೆ, ಬೆಂಗಳೂರು, ತೀರ್ಥಹಳ್ಳಿ, ಮೃಗವಧೆ, ಸಾಲಿಗ್ರಾಮ ಇತರೆ ಊರುಗಳಲ್ಲಿ ಟ್ರಸ್ಟ್ ನ ವಿದ್ಯಾರ್ಥಿಗಳು ಪ್ರಹ್ಲಾದ್ ದೀಕ್ಷಿತ್ ರವರೊಂದಿಗೆ ಕಾರ್ಯಕ್ರಮ ನೀಡಿದ್ದಾರೆ.
* ಪ್ರತಿ ವರ್ಷದ ಜೂನ್ 21 ರಂದು ನಡೆಯುವ “ವಿಶ್ವ ಸಂಗೀತ ದಿನ”ನನ್ನು ವಿನೂತನ ರೀತಿಯಲ್ಲಿ ಆಚರಿಸಲಾಗುತ್ತಿದೆ.
* ಮಕ್ಕಳಿಗೆ, ದೊಡ್ಡವರಿಗೆ ಉಪಯೋಗವಾಗುವಂತಹ ಅನೇಕ ಶಿಬಿರಗಳನ್ನು ಹಾಗೂ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
* ಶಿವಮೊಗ್ಗದ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ನಾಡಗೀತೆಯನ್ನು ಪ್ರಹ್ಲಾದ್ ದೀಕ್ಷಿತ್ ಮತ್ತವರ ತಂಡ ಪ್ರಸ್ತುತಪಡಿಸಿದೆ.
ಸಾಮಾಜಿಕ ಕಾರ್ಯಕ್ರಮಗಳು :
* 2022 : ಶರಣ್ಯ ಆರೋಗ್ಯ ಕೇಂದ್ರದ ಕ್ಯಾನ್ಸರ್ ಪೀಡಿತರ ಸಹಾಯಾರ್ಥ “ಮಧುರ ಸಂಗೀತ್” ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿ, ಅದರಿಂದ ಬಂದ ಹಣವನ್ನು ಕೇಂದ್ರಕ್ಕೆ ನೀಡಲಾಗಿದೆ.
* 2024 : ಗುಡ್ ಲಕ್ ಆರೈಕೆ ಕೇಂದ್ರಕ್ಕೆ “ಗಾತಾ ರಹೇ ಮೇರಾ ದಿಲ್” ಹಿಂದಿ ಚಿತ್ರ ಗೀತೆಗಳ ಕಾರ್ಯಕ್ರಮದ ಮೂಲಕ (ಟಿಕೆಟ್ ಶೋ) ಆರ್ಥಿಕ ನೆರವು ನೀಡಿದೆ.
ವಿಶೇಷ ಕಾರ್ಯಕ್ರಮಗಳು :
* ಸಾಮಾಜಿಕ ಕಳಕಳಿಯಿಂದ ಹಾಗೂ ಲೋಕಕಲ್ಯಾಣಕ್ಕಾಗಿ “ಲಕ್ಷ ಬಿಲ್ವಾರ್ಚನೆ”,
* ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಲೋಕಕಲ್ಯಾಣಕ್ಕಾಗಿ “12 ಕೋಟಿ ಶಿವ ಪಂಚಾಕ್ಷರಿ ಜಪ ಸಂಕಲ್ಪ” ವನ್ನು ಮಾಡಿ ರುದ್ರ ಹೋಮ, ಪೂರ್ಣಾಹುತಿಯೊಂದಿಗೆ ಶಿವಾರ್ಪಣೆಗೊಳಿಸಲಾಗಿದೆ.
* ದಸರಾ ಸಂದರ್ಭದಲ್ಲಿ ಚಂಡಿಕಾ ದುರ್ಗಾ ಹೋಮ ನೆರವೇರಿಸಲಾಗುತ್ತಿದೆ.
* ಆರ್.ಆರ್. ಬ್ಯಾಂಡ್ ಹೆಸರಿನಡಿಯಲ್ಲಿ ಎಲ್ಲಾ ಶುಭ ಸಮಾರಂಭಗಳಿಗೆ ಗಾಯನ ಕಾರ್ಯಕ್ರಮವನ್ನು ನೀಡಲಾಗುತ್ತಿದೆ.
* ಫೇಸ್ ಬುಕ್, ಯೂಟ್ಯೂಬ್, ಇನ್ಸ್ಟ್ರಾಗ್ರಾಂ, ವಾಟ್ಸಪ್ ಚಾನೆಲ್ ಗಳ ಮೂಲಕ ಉತ್ತಮ ಅಭಿಮಾನಿಗಳ ಬಳಗವನ್ನು ಟ್ರಸ್ಟ್ ಹೊಂದಿದೆ.
* ಕುವೆಂಪು ವಿಶ್ವವಿದ್ಯಾಲಯದ 34 ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ನಾಡಗೀತೆ ಹಾಗೂ ರಾಷ್ಟ್ರಗೀತೆಯನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ್ದಾರೆ.
* ತತ್ವ ಶಂಕರ ಯೂಟ್ಯೂಬ್ ಚಾನೆಲ್ ನಲ್ಲಿ 25 ಕ್ಕೂ ಹೆಚ್ಚು ಆದಿ ಶಂಕರಾಚಾರ್ಯರ ಕೃತಿಗಳಿಗೆ ರಾಗ ಸಂಯೋಜನೆ ಮಾಡಿ ಪ್ರಹ್ಲಾದ್ ದೀಕ್ಷಿತ್ ಹಾಡಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಗಳನ್ನು ಯಾರ ಸಹಾಯವೂ ಇಲ್ಲದೆ, ಕೇವಲ ತಮ್ಮ ಟ್ರಸ್ಟ್ ಹಾಗೂ ತಮ್ಮ ವಿದ್ಯಾರ್ಥಿಗಳ ಸಹಾಯದಿಂದ ಯಶಸ್ವಿಯಾಗಿ ನಡೆಸಿದ ಕೀರ್ತಿ ಪ್ರಹ್ಲಾದ್ ದೀಕ್ಷಿತ್‌ರಿಗೆ ಸಲ್ಲುತ್ತದೆ.
ರಾಗರಂಜನಿ ಸಾಂಸ್ಕೃತಿಕ ಸಂಸ್ಥೆಯ ಸಾಮಾಜಿಕ ಮುಖ್ಯ ಧ್ಯೇಯೋದ್ದೇಶಗಳು :
2016 ನೇ ಇಸವಿಯಲ್ಲಿ ಪ್ರಾರಂಭಗೊಂಡ ಈ ಸಾಂಸ್ಕೃತಿಕ ಸಂಸ್ಥೆ,
* ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪಠ್ಯ ಸಾಮಗ್ರಿಗಳ ರೂಪದಲ್ಲಿ ಅವರ ವಿದ್ಯಾಭ್ಯಾಸಕ್ಕೆ ನೆರವಾಗುವಿಕೆ,
* ಸಂಗೀತ ಸ್ಪರ್ಧೆಗಳ ಮೂಲಕ ಹೊಸ ಪ್ರತಿಭೆಗಳ ಶೋಧ ಹಾಗೂ ವೇದಿಕೆಗಳಲ್ಲಿ ಅವಕಾಶ ಕಲ್ಪಿಸುವಿಕೆ,
* ಅಂಗವಿಕಲ/ಅಸಮರ್ಥ ಸಂಗೀತಾಸಕ್ತ ಮಕ್ಕಳಿಗೆ ಉಚಿತ ಹಾಗೂ ವಿಶೇಷ ಸಂಗೀತ ವಿಧ್ಯಾಭ್ಯಾಸ ಕಲಿಸುವಿಕೆ,
* ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಉಚಿತ ಸೆಮಿನಾರ್ ಕಾರ್ಯಕ್ರಮ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನಿಸುವಿಕೆ,
* ಇತ್ತೀಚಿನ ಮಕ್ಕಳಲ್ಲಿ ಕಳೆದು ಹೋಗುತ್ತಿರುವ ನಮ್ಮ ಭಾರತೀಯ ಪರಂಪರೆ, ಸಂಸ್ಕಾರ ಹಾಗೂ ವೇದ-ಉಪನಿಷತ್ತುಗಳ ಕುರಿತ ಅರಿವು/ಮಹತ್ವವನ್ನು ತಿಳಿಸುವ ಉಚಿತ ಶಿಬಿರಗಳನ್ನು ಹಮ್ಮಿಕೊಳ್ಳುವ ಕಾರ್ಯಕ್ರಮ,
* ಖಿನ್ನತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಿಶೇಷವಾಗಿ ಸಂಗೀತೋಪಚಾರದಿಂದ ಅವರ ಮನಸ್ಸಿಗೆ ಸಮಾಧಾನ ತರುವ ಉಚಿತ ಕಾರ್ಯಾಗಾರಗಳನ್ನು ರೂಪಿಸುವುದು,
* ನಿಯತಕಾಲಿಕವಾಗಿ ರಕ್ತದಾನ ಶಿಬಿರಗಳನ್ನು ಏರ್ಪಡಿಸುವುದು,
* ಮಕ್ಕಳಿಗೆ ಉಚಿತ ಕಣ್ಣಿನ ತಪಾಸಣೆ ನಡೆಸುವುದು,
* ಬಡಜನರಿಗೆ ವರ್ಷಕ್ಕೊಮ್ಮೆ ದಿನಸಿ ಪದಾರ್ಥಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳುವಿಕೆ..
ಈ ಧ್ಯೇಯೋದ್ದೇಶಗಳು ರಾಗರಂಜನಿ ಸಾಂಸ್ಕೃತಿಕ ಸಂಸ್ಥೆಯದ್ದಾಗಿದೆ.
ಜ. 17-18 ರ ಶನಿವಾರ ಮತ್ತು ಭಾನುವಾರದಂದು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ “ಗಾನ ಗಂಧರ್ವನ ನೂರೊಂದು ನೆನಪು” ಗೀತೆಗಳ ಗಾಯನ ಕಾರ್ಯಕ್ರಮಕ್ಕೆ ಸಂಗೀತ ಪ್ರೇಮಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಎರಡು ದಿನಗಳ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಕೋರಲಾಗಿದೆ.
– ಮುರುಳೀಧರ್ ಹೆಚ್.ಸಿ.
ಪತ್ರಕರ್ತರು, ಶಿವಮೊಗ್ಗ.


