*ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ನಡೆಸದಿದ್ದರೆ ಕೆ.ಇ. ಕಾಂತೇಶ್ ನೇತೃತ್ವದಲ್ಲಿ ಕೋರ್ಟ್ ಮೊರೆ;* *ರಾಷ್ಟ್ರಭಕ್ತರ ಬಳಗದ ಮುಖಂಡರೂ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ*

*ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆ ನಡೆಸದಿದ್ದರೆ ಕೆ.ಇ. ಕಾಂತೇಶ್ ನೇತೃತ್ವದಲ್ಲಿ ಕೋರ್ಟ್ ಮೊರೆ;*

*ರಾಷ್ಟ್ರಭಕ್ತರ ಬಳಗದ ಮುಖಂಡರೂ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ*

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಎರಡು ವರ್ಷ ಕಳೆದಿದೆ. ಆದರೂ ಪಾಲಿಕೆಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನೀಯ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಗುಡುಗಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿದೆ ಎಂದರು.

ಜನಪ್ರತಿನಿಧಿಗಳಿಲ್ಲದೆ ಪಾಲಿಕೆಯಲ್ಲಿ ಅಧಿಕಾರಿಗಳ ದುರಾಡಳಿತದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ರಾಜ್ಯ ಚುನಾವಣಾ ಆಯುಕ್ತರಾದ ಜಿ.ಎಸ್.ಸಂಗ್ರೇಶಿಯುವರು ಶಿವಮೊಗ್ಗಕ್ಕೆ 23 ಮೇ 2025 ರಲ್ಲಿ ಭೇಟಿ ನೀಡಿದಾಗ ‘ರಾಷ್ಟ್ರಭಕ್ತರ ಬಳಗದ ನಿಯೋಗ ಆಯುಕ್ತರನ್ನು ಭೇಟಿ ಮಾಡಿ ಪಾಲಿಕೆಗೆ ಚುನಾವಣೆ ನಡೆಸುವಂತೆ ಮನವಿ ಮಾಡಿತ್ತು. ಆಗ ಆಯುಕ್ತರು ತಿಳಿಸಿದಂತೆ ಶಿವಮೊಗ್ಗ ನಗರದ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು ಸರ್ಕಾರದಿಂದ ವಾರ್ಡ್ ಮೀಸಲಾತಿಯ ಪರಿಷ್ಕೃತ ಪಟ್ಟಿಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದರು. ಆದರೆ ಇದುವರೆಗೂ ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ ಎಂದರು.

ರಾಜ್ಯ ಚುನಾವಣಾ ಆಯುಕ್ತರೇ ಹೇಳಿರುವಂತೆ ರಾಜ್ಯ ಸರ್ಕಾರವು ಅವಧಿ ಮುಗಿದ ಪಾಲಿಕೆಗಳ ಪರಿಷ್ಕೃತ ಕ್ಷೇತ್ರ ಹಾಗೂ ವಾರ್ಡ್ ಮೀಸಲಾತಿ ಅಧಿಸೂಚನೆ ಹೊರಡಿಸದೇ ಇದ್ದಾಗ ಸುಪ್ರೀಂ ಕೋರ್ಟ್ ಆದೇಶದಂತೆ (2006 ರ ಕಿಶನ್ ಸಿಂಗ್ ಮತ್ತು ರಾಜಸ್ಥಾನ ಸರ್ಕಾರದ ನಡುವಿನ ಪ್ರಕರಣ) ಹಿಂದಿನ ಮೀಸಲಾತಿಗೆ ಅನುಗುಣವಾಗಿ ಚುನಾವಣೆ ನಡೆಸಲು ಕೋರ್ಟ ದೊರೆ ಹೋಗಬೇಕಾಗುತ್ತದೆ’ ಎಂದು ತಿಳಿಸಿದ್ದರು. ಆದರೆ ಇದುವರೆಗೂ ರಾಜ್ಯ ಸರ್ಕಾರವೂ ಪರಿಷ್ಕೃತ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿಲ್ಲ ಅಲ್ಲದೇ ರಾಜ್ಯ ಚುನಾವಣಾ ಆಯೋಗವೂ ಸಹಾ ಈ ಸಂಬಂಧವಾಗಿ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಪ್ರಜಾಪ್ರಭುತ್ವಕ್ಕೆ ಮಾಡುತ್ತಿರುವ ಅಪಮಾನ ಅಲ್ಲದೆ ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಗನೆ ಆಗಿದೆ.

ಆದ್ದರಿಂದ ರಾಷ್ಟ್ರಭಕ್ತರ ಬಳಗವು ರಾಜ್ಯ ಸರ್ಕಾರಕ್ಕೆ ಶೀಘ್ರವಾಗಿ ಪಾಲಿಕೆಯ ಪರಿಷ್ಕೃತ ಮೀಸಲಾತಿ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತದೆ. ಮತ್ತು ರಾಜ್ಯ ಸರ್ಕಾರವು ಪರಿಷ್ಕೃತ ಮೀಸಲಾತಿಯನ್ನು ಕಾಲ ಮಿತಿಯೊಳಗೆ ಬಿಡುಗಡೆ ಮಾಡದಿದ್ದಲ್ಲಿ ಚುನಾವಣಾ ಆಯೋಗವು ನ್ಯಾಯಾಲಯದ ನಿರ್ದೇಶನದಂತೆ ಮಹಾನಗರ ಪಾಲಿಕೆಗಳ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತದೆ.

ನಮ್ಮ ಬೇಡಿಕೆಗಳು ನಿಗದಿತ ಸಮಯದಲ್ಲಿ ಈಡೇರದೇ ಇದ್ದಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಶ್ರೀ ಕೆ.ಈ.ಕಾಂತೇಶ್ ಅವರ ನೇತೃತ್ವದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಗೆ ತಕ್ಷಣ ಚುನಾವಣೆ ನಡೆಸುವಂತೆ ನ್ಯಾಯಾಲಯದ ಮೊರೆ ಹೋಗಿ ಶಿವಮೊಗ್ಗದ ಜನತೆಗೆ ನ್ಯಾಯ ಕೊಡಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುವುದು ಎಂದರು.