ಮೃತ ವ್ಯಕ್ತಿಯ ಕಿಡ್ನಿ ಯಶಸ್ವಿಯಾಗಿ ಕಸಿ ಮಾಡಿದ         ಎನ್ ಯು ಆಸ್ಪತ್ರೆ (ಶಿವಮೊಗ್ಗ, ಕಿಡ್ನಿ ಆಸ್ಪತ್ರೆ) ವೈದ್ಯರಿಂದ ನೂತನ ಮೈಲಿಗಲ್ಲು

ಮೃತ ವ್ಯಕ್ತಿಯ ಕಿಡ್ನಿ ಯಶಸ್ವಿಯಾಗಿ ಕಸಿ ಮಾಡಿದ         ಎನ್ ಯು ಆಸ್ಪತ್ರೆ (ಶಿವಮೊಗ್ಗ, ಕಿಡ್ನಿ ಆಸ್ಪತ್ರೆ) ವೈದ್ಯರಿಂದ ನೂತನ ಮೈಲಿಗಲ್ಲು

ಶಿವಮೊಗ್ಗ, 2 ಎಪ್ರಿಲ್ 2026: ಅಪರೂಪದ ಹಾಗೂ ನಿರ್ಣಾಯಕ ಪ್ರಕರಣವೊಂದರಲ್ಲಿ ಮೃತವ್ಯಕ್ತಿಯಿಂದ ಪಡೆದ ಕಿಡ್ನಿಯನ್ನು ಯಶಸ್ವಿಯಾಗಿ ಕಸಿ ಮಾಡುವ ಮೂಲಕ ಶಿವಮೊಗ್ಗದ ಎನ್ ಯು ಆಸ್ಪತ್ರೆಯು ವಿಶೇಷ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಎನ್ ಯು ಆಸ್ಪತ್ರೆಯು ಮಧ್ಯ ಕರ್ನಾಟಕ ಮತ್ತು ಮಲೆನಾಡು ಭಾಗದಲ್ಲಿ ಈ ರೀತಿಯ ಕಾರ್ಯ ಕೈಗೊಂಡ ಮೊಟ್ಟಮೊದಲ ಆಸ್ಪತ್ರೆ ಎನಿಸಿಕೊಂಡಿದೆ. ಇದು ಮಲೆನಾಡಿನ ಜನರಿಗೆ ಬಹುದೊಡ್ಡ ವರದಾನವಾಗಿದ್ದು. ಇಲ್ಲಿಯವರೆಗೂ ಬೆಂಗಳೂರು. ಮಂಗಳೂರಿನಂತಹ ನಗರಗಳಿಗೆ ಚಿಕಿತ್ಸೆಗೆ ತೆರಳಬೇಕಾದ ಅನಿವಾರ್ಯತೆಯಿತ್ತು. ಆದರೆ ಈಗ ಎನ್ ಯು ಆಸ್ಪತ್ರೆಯಲ್ಲಿಯೇ ಅದೇ ಗುಣಮಟ್ಟದ ಚಿಕಿತ್ಸೆ ಲಭ್ಯವಿರುವುದು ಈ ಭಾಗದವರಿಗೆ ನಿರಾಳ ತರಲಿದೆ.

ಅಪರೂಪದ ಈ ಪ್ರಕರಣದಲ್ಲಿ ಕಿಡ್ನಿ ದಾನಿಯು 65 ವರ್ಷದ ಪುರುಷನಾಗಿದ್ದು, ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಗಂಭಿರ ಗಾಯಗಳಿಂದಾಗಿ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಕಾರಣಕ್ಕೆ ಮಾರ್ಚ್ 01, 2026ರಂದು ಅಂಗಾಂಗ ದಾನ ಮಾಡಲು ವ್ಯಕ್ತಿಯ ಕುಟುಂಬವು ಒಪ್ಪಿಕೊಂಡಿತು. ಅದರಂತೆ ಒಂದು ಕಿಡ್ನಿಯನ್ನ ಶಿವಮೊಗ್ಗದ ಎನ್ ಯು ಆಸ್ಪತ್ರೆಯಲ್ಲಿ ಕಸಿ ಮಾಡುವುದಕ್ಕೆ ನೀಡಲಾಯಿತು.

ಹಿರಿಯ ಮೂತ್ರಕೋಶ ತಜ್ಞ ಹಾಗೂ ಕಿಡ್ನಿ ಕಸಿ ಶಸ್ತ್ರಚಿಕಿತ್ಸಕರಾದ ಡಾ. ಪ್ರದೀಪ ಎಂ ಜಿ ಅವರ ಮುಂದಾಳತ್ವ ಹಾಗೂ ಹಿರಿಯ ಮೂತ್ರಪಿಂಡ ತಜ್ಞ ಮತ್ತು ಕಿಡ್ನಿ ಕಸಿ ತಜ್ಞರಾದ ಡಾ ಪ್ರವೀಣ ಮಾಳವದೆ ಅವರ ಮಹತ್ವದ ಸೂಚನೆಗಳು, ಹಿರಿಯ ಅರಿವಳಿಕೆ ತಜ್ಞ ಮತ್ತು ಸಹ ವೈದ್ಯಕೀಯ ನಿರ್ದೇಶಕ ಡಾ ಕಾರ್ತಿಕ್ ಎಸ್ ಎಲ್ ಮತ್ತು ಅರಿವಳಿಕೆ ತಜ್ಞ ಡಾ ಆಕಾಶ್ ಜಿ ಎಸ್ ಅವರನ್ನು ಒಳಗೊಂಡ ತಂಡವು ಈ ಸಾಧನೆ ಮಾಡಿದೆ.

ಈ ಕುರಿತಂತೆ ಡಾ ಪ್ರದೀಪ ಎಂ ಜಿ ಮಾತನಾಡಿ, “ಶಸ್ತ್ರಚಿಕಿತ್ಸೆ ಸಂಜೆ 7:30ಕ್ಕೆ ಪ್ರಾರಂಭವಾಗಿ ರಾತ್ರಿ ಸುಮಾರು 2:30ಕ್ಕೆ ಯಶಸ್ವಿಯಾಗಿ ಪೂರ್ಣಗೊಂಡಿತು. ಕ್ಯಾಡವರಿಕ್ ಕಿಡ್ನಿ ಕಸಿಯಲ್ಲಿ ದಾನಿದಾರರ ಕಿಡ್ನಿಯ ಸ್ಥಿತಿಯನ್ನು ಮುಂಚಿತವಾಗಿ ಅಂದಾಜು ಮಾಡುವುದು ಕಷ್ಟವಾಗುತ್ತದೆ. ಆದರೂ ನಮ್ಮ ತಂಡದ ಸಹಕಾರದಿಂದ ಸಮಯಕ್ಕೆ ಸರಿಯಾಗಿ ಶಸ್ತ್ರಚಿಕಿತ್ಸೆ ಪೂರ್ಣಗೊಳಿಸಲು ಸಾಧ್ಯವಾಯಿತು”ಎಂದು ತಿಳಿಸಿದರು.

ಕಿಡ್ನಿ ಕಸಿಗೆ ಒಳಗಾದವರು 71 ವರ್ಷದ ಮಹಿಳೆಯಾಗಿದ್ದು, ಇಮಿಕ್ ಹೃದಯ ರೋಗದ ಹಿನ್ನೆಲೆ ಹಾಗೂ ಡ್ಯುಯಲ್ ಆಂಟಿಪ್ರೇಟೈಟ್ ಔಷಧಿಗಳನ್ನು ಬಳಸುತ್ತಿದ್ದ ಕಾರಣ ವೈದ್ಯಕೀಯವಾಗಿ ಇದೊಂದು ಸವಾಲಿನ ಕಾರ್ಯವಾಗಿತ್ತು. ಈ ಎಲ್ಲಾ ಅಪಾಯಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ, ಕಸಿ ಕೈಗೊಳ್ಳಲಾಗಿದ್ದು ಅದು ಈಗ ಯಶಸ್ವಿಯಾಗಿದೆ.

ಶಸ್ತ್ರಚಿಕಿತ್ಸೆಯ ನಂತರ ಆರಂಭದಲ್ಲಿ ‘ಡಿಲೇಡ್ ಗ್ರಾಫ್ಟ್ ಫಂಕ್ಷನ್’ ಕಾಣಿಸಿಕೊಂಡಿದ್ದು. ಇದು ಮೃತ ವ್ಯಕ್ತಿಯ ಕಿಡ್ನಿ ಕಸಿ ಪ್ರಕರಣದಲ್ಲಿ ಸಾಮಾನ್ಯವಾಗಿದೆ. ಆದರೆ ಮುಂದಿನ ಎರಡು ವಾರಗಳಲ್ಲಿ ರೋಗಿಯ ಆರೋಗ್ಯದಲ್ಲಿ ಸ್ಥಿರ ಸುಧಾರಣೆ ಕಂಡು ಬಂದಿದೆ.

ವೈದ್ಯರ ಈ ಅಪರೂಪದ ಸಾಧನೆಯ ಮೂಲಕ ಮಲೆನಾಡು ಪ್ರದೇಶದಲ್ಲಿ ಮತ್ತಷ್ಟು ಸುಧಾರಿತ ಮೂತ್ರಪಿಂಡ ಶಸ್ತ್ರಚಿಕಿತ್ಸೆ ಕೈಗೊಳ್ಳಲು ಇದು ಪ್ರಮುಖ ಹೆಜ್ಜೆಯಾಗಿದೆ. ಎನ್ ಯು ಆಸ್ಪತ್ರೆಯು ಶಿವಮೊಗ್ಗದಲ್ಲಿ ಮೃತವ್ಯಕ್ತಿಯ ಕಿಡ್ನಿ ಕಸಿ ನೋಂದಣಿಗೆ ಮಾನ್ಯತೆ ಪಡೆದ ಏಕೈಕ ಆಸ್ಪತ್ರೆಯಾಗಿದ್ದು, ಸ್ಥಳೀಯ ರೋಗಿಗಳಿಗೆ ಕಿಡ್ನಿ ಕಸಿಯ ಮೂಲಕ ಜೀವ ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ.

ಘಟಕ ಮುಖ್ಯಸ್ಥರಾದ ಶ್ರೀಯುತ ರೋಬಿನ್ ಇಮಾನ್ಯುವೆಲ್ ಜತ್ತನ್ನ, ಈ ಮಹತ್ಕಾರ್ಯಕ್ಕೆ ಕೈ ಜೋಡಿಸಿದ ಶಿವಮೊಗ್ಗ, ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೇ ಮೂರು ಜಿಲ್ಲೆಯ ಪೊಲೀಸ್ ಇಲಾಖೆಯ ಕಂಟ್ರೋಲ್ ರೂಮ್ ಅಧಿಕಾರಿಗಳು, ಶೂನ್ಯ ಸಂಚಾರ ವಲಯ ಸೃಷ್ಟಿಸಿ ಸಹಕರಿಸಿದ್ದಕ್ಕೆ, ಕೃತಜ್ಞತೆ ಸಲ್ಲಿಸಿದರು. ಹಾಗೆಯೇ ಸುರಕ್ಷಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಕಸಿ ಮಾಡಬೇಕಾದ ಕಿಡ್ನಿಯನ್ನ ತಲುಪಿಸಿದ ಅಂಬ್ಯುಲೆನ್ಸ್ ಚಾಲಕ ಯತೀಶ್ ಆಚಾರ್ಯ ಶ್ರೀ ಗಣೇಶ್ ಅಂಬ್ಯುಲೆನ್ಸ್ ಮಂಗಳೂರು) ಹಾಗೂ ಅವರ ವಾಹನಕ್ಕೆ ಬೆಂಗಾವಲು ನೀಡಿ ಅತ್ಯಂತ ಕಡಿಮೆ ಸಮಯದಲ್ಲಿ ಆಸ್ಪತ್ರೆ ತಲುಪಲು ನೆರವಾದ ಇತರೆ ಅಂಬ್ಯುಲೆನ್ಸ್ ಚಾಲಕರ ಕಾರ್ಯವನ್ನ ಪ್ರಶಂಸಿಸಿದರು.

ಅದರಂತೆ ಮೃತ ವ್ಯಕ್ತಿಯ ಕಿಡ್ನಿ ಕಸಿ ಕೈಗೊಳ್ಳುವಲ್ಲಿ ಆಸ್ಪತ್ರೆಯನ್ನು ಗುರುತಿಸಿ ಸಹಕರಿಸಿದ ಜೀವಸಾರ್ಥಕತೆ (SOTTO) ತಂಡಕ್ಕೂ ವ್ಯವಸ್ಥಾಪಕ ಮಂಡಳಿಯು ಧನ್ಯವಾದಗಳನ್ನು ತಿಳಿಸಿತು.

ಈ ಕುರಿತಂತೆ ಹಿರಿಯ ಮೂತ್ರಪಿಂಡ ತಜ್ಞ ಮತ್ತು ಕಿಡ್ನಿ ಕಸಿ ತಜ್ಞರಾದ ಡಾ ಪ್ರವೀಣ ಮಾಳವದೆ, ಹಿರಿಯ ಮೂತ್ರಕೋಶ ತಜ್ಞ ಹಾಗೂ ಕಿಡ್ನಿ ಕಸಿ ಶಸ್ತ್ರಚಿಕಿತ್ಸಕರಾದ ಡಾ. ಪ್ರದೀಪ ಎಂ ಜಿ. ಹಿರಿಯ ಅರಿವಳಿಕೆ ತಜ್ಞ ಮತ್ತು ಸಹ ವೈದ್ಯಕೀಯ ನಿರ್ದೇಶಕ ಡಾ ಕಾರ್ತಿಕ್ ಎಸ್ ಎಲ್ ಮತ್ತು ಅರಿವಳಿಕೆ ತಜ್ಞ ಡಾ ಆಕಾಶ್ ಜೆ ಎಸ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, “ಈ ಮೃತದಾನಿ ಕಸಿ ಎನ್ ಯು ಆಸ್ಪತ್ರೆಗೆ ಮೈಲಿಗಲ್ಲು ಮಾತ್ರವಲ್ಲ. ಮೃತ ವ್ಯಕ್ತಿಗಳ ಅಂಗಾಂಗ ದಾನದ ಮಹತ್ವ ಹಾಗೂ ‘ಮರಣಾನಂತರಜೀವದಾನ’ ಕುರಿತು ಅರಿವು ಮೂಡಿಸುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಶಿವಮೊಗ್ಗದಂತಹ ಕರ್ನಾಟಕದ ಇತರ ನಗರಗಳಲ್ಲೂ ಅಂಗಾಂಗ ದಾನದ ಮಹತ್ವದ ಕುರಿತು ಇನ್ನಷ್ಟು ಜಾಗೃತಿ ಮೂಡಿಸುವ ಅಗತ್ಯವಿದೆ. SOTTO ಸಹಕಾರದೊಂದಿಗೆ ಎನ್ ಯು ಆಸ್ಪತ್ರೆಯಿಂದ ಈ ಬಗ್ಗೆ, ಜಾಗೃತಿ ಮೂಡಿಸಲು ಮುಂದಾಗಿದ್ದೇವೆ”ಎಂದು ಹೇಳಿದರು.

ಈ ಯಶಸ್ಸು ಶಿವಮೊಗ್ಗದಲ್ಲಿ ಬೆಳೆಯುತ್ತಿರುವ ಸೌಲಭ್ಯಗಳು, ಸಂಘಟಿತ ತಂಡದ ಕೆಲಸ ಮತ್ತು ಮುಂದುವರಿದ ಆರೋಗ್ಯ ಮೂಲಸೌಕರ್ಯಗಳ ಮಹತ್ವವನ್ನು ಒತ್ತಿ ಹೇಳುತ್ತದೆ.