ಸಾರಂಗರಾಜ್ ಕಾವ್ಯನಾಮದಿಂದ ಬರೆಯುತ್ತಿರುವ ಸಾಸ್ವೆಹಳ್ಳಿ ರಂಗರಾಜ್ ರವರ 4 ಕವಿತೆಗಳ ಗುಚ್ಛ ನಿಮ್ಮ‌ಓದಿಗಾಗಿ…

ರಂಗ ಪಂಚಮಿ
*****************
ಈ ಫಲ್ಗುಣಿ ಹುಣ್ಣಿಮೆ
ಬದುಕಲ್ಲಿ ಹರುಷದ
ಓಕುಳಿ ಚೆಲ್ಲಲಿ, ಸಖೀ..,

ಸ್ವಚ್ಛ ಬಿಳಿಯ ವರ್ಣದಂತೆ
ಮನಸು ಶುಭ್ರವಾಗಿರಲಿ,
ಪರಿಸರವೂ ಪೂರಕವಿರಲಿ..,

ಭಾಸ್ಕರನ ಹಳದಿ ರಂಗು
ಭಾವಗಳನು ಬೆಚ್ಚಗಿಡಲಿ,
ಧನಾತ್ಮಕತೆ ಹೊರಸೂಸಲಿ.,

ಹಸಿರು ಬಣ್ಣವು ಬಾಳಲ್ಲಿ
ಸದಾ ಸಾಮರಸ್ಯ ತುಂಬಲಿ,
ಮನಸು ಸಮತಲದಲ್ಲಿಡಲಿ..,

ಕಿತ್ತಳೆ ಬಣ್ಣದ ಹಾಗೆ ಬಾಳು
ಸೃಜನಾತ್ಮಕತೆ, ಹಾಸ್ಯಪ್ರಜ್ಞೆ
ರೋಮಾಂಚನ ತುಂಬಿಡಲಿ..,

ಕೆಂಪು ಕ್ರಾಂತಿ ಪ್ರೀತಿ ರಂಗು
ಕಣಕಣದಲ್ಲೂ ಆವರಿಸಲಿ,
ನಿತ್ಯ ನವ ಚೈತನ್ಯ ತುಂಬಲಿ..,

ಐದು ಬಣ್ಣಗಳು ನಿನ್ನನು
ಆವರಿಸಿರಲಿ, ಪ್ರತಿ ದಿನವೂ
ರಂಗ ಪಂಚಮಿ ರಂಜಿಸಲಿ..!

2.

ಭಾವದ ಕತ್ತಲು ಬೆಳಕು
********************
ಸಖೀ, ಭೂಮಿಗೆ
ಅಮಾವಾಸ್ಯೆಯು
ಕಳೆದು ಹುಣ್ಣಿಮೆ
ಬರಲು ಪಾಕ್ಷಿಕ
ಸರದಿ ಬರಬೇಕು..

ಪೌರ್ಣಿಮೆ ಸರಿಸಿ
ಪೂರ್ತಿ ಕತ್ತಲು ಭುವಿ
ಮುಕ್ಕಲು ಬರೋಬ್ಬರಿ
ಎರಡು ವಾರಗಳೂ
ಜರುಗಲೇ ಬೇಕು..,

ನಿನ್ನ ವರ್ತನೆಗೆ ಕಾಲದ
ಮಿತಿಯೇ ಇಲ್ಲ ಬಿಡು..,
ಕರಿ ನೆರಳೂ, ಬೆಳದಿಂಗಳೂ
ಯಾವಾಗ ಬೇಕಾದರೂ
ಆವರಿಸಿ ಬಿಡಬಹುದು !

ನಿನ್ನ ಮನ ದುಗುಡದಲ್ಲಿರೆ
ಆ ಚಣವೇ ಅಮಾವಾಸ್ಯೆ,
ಇನಿಯ ಸನಿಹ ಇದ್ದರೆ, ಪ್ರತಿ
ಗಳಿಗೆಯೂ ನಿನ್ನ ಮೊಗದಲಿ
ಹೊನಲಿನ ಓಕುಳಿಯೇ ..!

3.

ಸ್ನೇಹದ ಸಹ ಪಯಣ
******************
ಅನುದಿನವೂ
ಜೊತೆಗೆ ಸಾಗಿ
ಹೊಸತು ಚಟ
ಶುರುವಾಗಿದೆ..,

ಒಂಟಿ ಪಯಣ
ಬೇಡ ಎನಿಸಿದೆ,
ನೀನಿಲ್ಲದೆ ದಾರಿ
ದೂರ ಅನಿಸುತಿದೆ..,

ದಾರಿಯೂ ಮಾತು
ಕೇಳಲು ಬಯಸಿದೆ,
ಪ್ರಕೃತಿ ಕೂಡ ಜೊತೆ
ನೋಡಲು ಕಾದಿದೆ..,

ಮೈಗೆ ನಿನ್ನ ಸ್ಪರ್ಶ
ಅತ್ಯಗತ್ಯ ಎನಿಸಿದೆ,
ಉಸಿರಿಗೆ ನಿನ್ನುಸಿರ
ಸಾಮೀಪ್ಯ ಬೇಕಿದೆ..,

ಬಾ ಸಖೀ, ಭಾವಗಳ
ಪರಸ್ಪರ ಹಂಚುತಲಿ
ಬೆಚ್ಚಗಿಟ್ಟು, ಬಾಳದಾರಿ
ಒಟ್ಟಿಗೇ ಸಾಗಿಸೋಣ..!

4.


*****************
ಗೆಳತಿ, ಪ್ರೀತಿಯ
ಭಾವನೆಗಳನು
ತುಟಿಯ ಆಚೆಗೆ
ಕಳುಹಲೇ ಬೇಡ,
ಕಳ್ಳಕಾಕರ ಕಾಟ..?

ಆಗಸಕ್ಕೂ ಕಣ್ಣು
ಕಿವಿ ಇದೆ, ಅದಕ್ಕೂ
ಕುತೂಹಲ ನಿನ್ನೆದೆ
ಇನಿಧನಿ ಆಲಿಸಲು,
ಬಣ್ಣ ಬಳಿದು ಹಬ್ಬಲು.‌,

ನೀನು ಉಸುರಿದ
ನಾದ ಯಾರದ್ದೋ
ಕಿವೀಲಿ ಬಸಿರಾಗಿ,
ಬಾನಗಲ ಬಣ್ಣದ
ಪಿಂಡಗಳ ಹಾರಾಟ..!

ರಂಗಿನ ಕನಸುಗಳನು
ಎದೆಯಲ್ಲೇ ಅವಿತಿಡು,
ಆತ್ಮಗಳಲ್ಲೇ ಸಂಚರಿಸಿ
ಖುಷಿ ಪಡಲಿ ? ಎಚ್ಚರ !
ಹೊರಗೆ ಭಕ್ಷಕರ ಹಾವಳಿ ?!

# ಸಾರಂಗರಾಜ್