ಅಭೂತಪೂರ್ವ ಯಶಸ್ಸು ಕಂಡ ಶಿವದೂತ ಗುಳಿ; ಬೆರಗುಗೊಳಿಸಿದ ಗುಳಿಗ ಆರ್ಭಟ

ಅಭೂತಪೂರ್ವ ಯಶಸ್ಸು ಕಂಡ ಶಿವದೂತ ಗುಳಿ;
ಬೆರಗುಗೊಳಿಸಿದ ಗುಳಿಗ ಆರ್ಭಟ
………………
ನಾಟಕವು ಶಿವ ಪಾರ್ವತಿಯವರ ಶೃಂಗಾರ ನೃತ್ಯದೊಂದಿಗೆ ಆರಂಭವಾಗುತ್ತದೆ. ಶಿವ ಪಾರ್ವತಿಯರ ನೃತ್ಯವೇ ಒಂದು ಅದ್ಭುತ. ಶಿವನ ಬೆವರು ಮತ್ತು ಬೂದಿಯಿಂದ ಅನೈಸರ್ಗಿಕವಾಗಿ ಸೃಷ್ಟಿಯಾಗುವ ಶಿವದೂತ ಗುಳಿಗನ ಹುಟ್ಟು ಒಂದು ರೋಮಾಂಚನ. ತೀವ್ರ ಹಸಿವು ಮತ್ತು ಬಾಯರಿಕೆಯ ಗುಳಿಗನ ಆರಂಭಿಕ ಪ್ರವೇಶವನ್ನು ನೋಡುವುದೇ ಒಂದು ಚೆಂದ.
………………….

ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಮೇ ೧೯ರಂದು ಅನಿಕೇತನ ಸೇವಾ ಟ್ರಸ್ಟ್ ಆಯೋಜಿಸಿದ ಮಂಗಳೂರಿನ ಕಲಾಸಂಗಮದ ‘ಶಿವದೂತ ಗುಳಿಗ ‘ಎಂಬ ಪೌರಾಣಿಕ ಹಿನ್ನೆಲೆಯ ನಾಟಕಕ್ಕೆ ಬಹು ಕುತೂಹಲಭರಿತನಾಗಿ ಹೋಗಿದ್ದೆ. ನನ್ನ ಬಾಲ್ಯದಲ್ಲಿ ನಮ್ಮ ಸೊರಬದ ನನ್ನೂರಿನಲ್ಲಿ ರೈತಾಪಿ ಜನರೇ ಕೆಲ ಪೌರಾಣಿಕ ಕಥೆಯುಳ್ಳ ನಾಟಕವನ್ನು ಆಡಿದ್ದು ನೋಡಿದ್ದು. ಅದೊಂದು ರೀತಿಯ ವಿಭಿನ ಕಲಾಪ್ರಕಾರ. ಈ ಪೌರಾಣಿಕ ನಾಟಕಗಳಲ್ಲಿ ವೇದಿಕೆಯ ಹೊರಭಾಗದಲ್ಲಿ ಕಟ್ಟಿದ ಹಗ್ಗದ ಸೇತುವೆ ಮೇಲೆ ಆರಂಭಿಕವಾಗಿ ಬರುವ ಹನುಮನನ್ನು ನೋಡುವುದೇ ಒಂದು ಚೆಂದವಾಗುತ್ತಿತ್ತು. ಮಾತಿಲ್ಲದ ಹನುಮ ಟ್ರಿರ್ ಬ್ಯಾ.. ಎನ್ನುತ್ತಿದ್ದಾಗ ಕುಳಿತ ಜಾಗದಲ್ಲಿ ನಾವೆಲ್ಲಾ ಹುಡುಗರು ಕುಪ್ಪಳಿಸಿ ಕುಣಿಯುತ್ತಿದ್ದೆವು. ಗದೆ ಹಿಡಿದ ಭೀಮ, ಬಿಲ್ಲು ಬಾಣಗಳ ರಾಮ, ಇತ್ಯಾದಿ ಪಾತ್ರಗಳಲ್ಲಿ ನಮಗೆ ಖುಷಿ ಕೊಡತ್ತಿದ್ದವು. ರಂಗಸಜ್ಜಿಕೆಯೂ ಹಾಗೆ. ಶನಿದೇವರ ಮಹಾತ್ಮೆ ಇತ್ಯಾದಿ ನಾಟಕಗಳನ್ನು ನಾನು ನನ್ನೂರಿನಲ್ಲೇ ನೋಡಿದ್ದು ಕನಸೋ ಎನ್ನುವಂತಿದೆ. ಈ ಪೌರಾಣಿಕ ಕಥೆಯುಳ್ಳ ನಾಟಕಗಳು ಇದಕ್ಕೆ ಕಾರಣ. ಇವು ಬಹಳ ಹಿಂದೆಯೇ ಜನಮಾನಸದಿಂದ ಮರೆಯಾಗಿದ್ದು ಯಾಕೆಂದು ಇದುವರೆಗೂ ಪ್ರಶ್ನೆಯಾಗಿಯೇ ಉಳಿದಿದೆ.

ಮಲೆನಾಡಿನ ಭಾಗಗಳಲ್ಲಿ ಈ ಪೌರಾಣಿಕ ನಾಟಕಗಳು ಮರೆಯಾಗಿ ೨ ದಶಕಗಳು ಕಳೆದು ಹೋಗಿವೆ. ನಗರದ ಕುವೆಂಪು ರಂಗಮಂದಿರದಲ್ಲಿ ಶಿವದೂತ ಗುಳಿಗ ವೀಕ್ಷಣೆಗೆ ಎಷ್ಟು ಜನ ಸೇರುವರೆಂಬ ಕುತೂಹಲವಿತ್ತು. ಟಿ ವಿ ಮತ್ತು ಮೊಬೈಲ್ ಯುಗ ಒಂದು ಕಡೆಯಾದರೆ, ಪ್ರದರ್ಶನಕ್ಕೆ ೪೦೦ ರೂ. ಮತ್ತು ೨೦೦ ರೂ. ಟಿಕೇಟ್ ದರ ನಿಗದಿ ಮಾಡಿದ್ದು ಇದಕ್ಕೆ ಇನ್ನೊಂದು ಕಾರಣವಿತ್ತು. ಆದರೆ ಅಲ್ಲಿ ನನಗೆ ಅಚ್ಚರಿ ಕಾದಿತ್ತು. ಇಡೀ ರಂಗಮಂದಿರವೇ ತುಂಬಿ ತುಳುಕುತ್ತಿತ್ತು. ನೆರೆದಿದ್ದ ಜನಕ್ಕೆ ಮೋಸವಾಗದ ರೀತಿಯ ಕಲಾವಿದರ ಅಮೋಘ ಅಭಿನಯ ಸ್ಮೃತಿಪಟಲದಲ್ಲಿ ಉಳಿಯುವಂತಹದ್ದು. ನಾಟಕ ಆರಂಭಕ್ಕೂ ಮೊದಲು ಒಂದು ಸಣ್ಣ ಸನ್ಮಾನ ಕಾರ್ಯಕ್ರಮದಲ್ಲಿ ಯುವ ನಟ ಪ್ರಾಂಜಲ್ ಹೇಳಿದ್ದಂತೆ ಒಬ್ಬ ನಟ ಪರದೆ ಮೇಲೆ ತಾನು ಇರುವುದಕ್ಕಿಂತ ಅತಿ ದೊಡ್ಡದಾಗಿ ಕಾಣಿಸಿಕೊಂಡರೆ, ಟಿ ವಿ ಪರದೆಯಲ್ಲಿ ಅತಿ ಚಿಕ್ಕದಾಗಿ ಕಾಣುತ್ತಾನೆ. ಆದರೆ ತಾನು ಇದ್ದ ಹಾಗೆ ಕಾಣಿಸಿಕೊಳ್ಳುವುದು ರಂಗಭೂಮಿಯಲ್ಲಿ ಎಂದು. ಹೌದು ಎಷ್ಟು ಸತ್ಯ ಇದು. ಇಲ್ಲಿಯ ರಂಗಸಜ್ಜಿಕೆಯ ನಿರ್ಮಾಣ ಎಂತಹವರನ್ನು ಬೆರಗುಗೊಳಿಸುವಂತಿತ್ತು. ಒಂದು ಕಡೆ ಹೆಡ್ ಪೋನ್ ಹಾಕಿ, ಚಡ್ಡಿ ಹಾಕಿದ ಮಗನೊಂದಿಗೆ ಸಂಪ್ರದಾಯಸ್ಥ ಉಡುಗೆ ತೊಟ್ಟ ತಂದೆಯ ಸಂಭಾಷಣೆ ನಡೆಯುತ್ತಿದ್ದರೆ ಕ್ಷಣ ಮಾತ್ರದಲ್ಲೇ ದೇವಲೋಕದ ದೃಶವನ್ನು ಕಟ್ಟಿಕೊಡುವ ಕಲಾಸಂಗಮದ ರಂಗಸಜ್ಜಿಕೆಯ ಕಲಾವಿದರು.

ನಾವು ಕೈಲಾಸವನ್ನು ನೋಡುತ್ತಿದ್ದೇವೇನೋ ಎಂದು ಬಾಸವಾಗುತ್ತದೆ. ನಾಟಕವು ಶಿವ ಪಾರ್ವತಿಯವರ ಶೃಂಗಾರ ನೃತ್ಯದೊಂದಿಗೆ ಆರಂಭವಾಗುತ್ತದೆ. ಶಿವ ಪಾರ್ವತಿಯರ ನೃತ್ಯವೇ ಒಂದು ಅದ್ಭುತ. ಶಿವನ ಬೆವರು ಮತ್ತು ಬೂದಿಯಿಂದ ಅನೈಸರ್ಗಿಕವಾಗಿ ಸೃಷ್ಟಿಯಾಗುವ ಶಿವದೂತ ಗುಳಿಗನ ಹುಟ್ಟು ಒಂದು ರೋಮಾಂಚನ. ತೀವ್ರ ಹಸಿವು ಮತ್ತು ಬಾಯರಿಕೆಯ ಗುಳಿಗನ ಆರಂಭಿಕ ಪ್ರವೇಶವನ್ನು ನೋಡುವುದೇ ಒಂದು ಚೆಂದ. ಗುಳಿಗನ ಅರ್ಭಟವನ್ನು ನೋಡುವುದು ಒಂದು ಕಡೆ ಇರಲಿ, ಸಿನಿಮಾಗಳಂತೆ ಗ್ರಾಫಿಕ್ಸ್ ಬಳಸದೇ ಅಭಿನಯಿಸುವುದು ಇದೆಯಲ್ಲ ಅದು ಹೇಗೇ ಎಂಬುದು ನನಗೆ ಇನ್ನೂ ದೋಚಿಲ್ಲ. ಇಲ್ಲಿಯವರೆಗೆ ನೋಡಿದ ಸಿನಿಮಾಗಳಲ್ಲಿ ನಟರೆಲ್ಲಾ ಅಭಿನಯ ಇದರ ಮುಂದೆ ಶೂನ್ಯವೆನಿಸಿತು. ಇದೇ ಗುಳಿಗ ಮುಂದೆ ನೆಲವುಲ್ಲಾ ಸಂಕೆ ಎಂಬ ನೂರಾರು ಮಾನವರ ಬಲ ಹೊಂದಿದ ರಾಕ್ಷಿಸಿಯ ಉದರದಲ್ಲಿ ಜನಿಸಿ, ಹೆತ್ತ ತಾಯಿಯನ್ನೇ ಭಕ್ಷಿಸುತ್ತಾನೆ. ಈ ರಾಕ್ಷಸಿಯ ಪಾತ್ರವಂತೂ ಇನ್ನೂ ವಿಶೇಷ. ಒಬ್ಬ ರಾಕ್ಷಿಸಿಯಂತೆ ಪ್ರೇಕ್ಷಕರಿಗೆ ಭಾಸವಾಗುವಂತೆ ಅಭಿನಯಿಸುವುದಿದೆಯಲ್ಲಾ ಅದು ಮತ್ತೊಂದು ರೋಮಾಂಚನ. ದೇವಲೋಕದಲ್ಲಿ ರಾಕ್ಷಷಿಯೇ ಬಂದಿದ್ದಾಳೇನೋ, ನಾವು ಕಣ್ಣಾರೆ ಕಾಣುತ್ತಿದ್ದೇವೇನೋ ಎಂಬಂತ ಅವರ ಅಭಿನಯ ಮನದಲ್ಲಿ ಅಚ್ಚಳಿಯದೇ ಉಳಿಯುತ್ತದೆ.
ಗುಳಿಗ ಮತ್ತು ರಾಕ್ಷಷಿಯ ಪಾತ್ರದಾರಿಗಳು ನೋಡಿದಾಗ ಸ್ಯಾಂಡಲ್ ವುಡ್, ಬಾಲಿವುಡ್, ಹಾಲಿವುಡ್ ನಟರೆಲ್ಲಾ ತುಂಬಾ ಕುಬ್ಜರಂತೆ ಕಂಡರು ಎಂದರೆ ಅತಿಶೋಯಕ್ತಿಯಲ್ಲ. ಈ ಪಾತ್ರಗಳನ್ನು ನಿಭಾಯಿಸುವುದು ಬಾಲಿವುಡ್ ನ ಅಮಿರ್ ಖಾನ್ , ತಮಿಳಿನ ಸೂರಿಯಂತೆ ದೇಹದಾರ್ಡ್ಯ ಮಾಡಿದಂತಲ್ಲ. ಅಥವಾ ಬೊಜ್ಜು ಕರಗಿಸುವುದು, ಬೊಜ್ಜು ಬರಿಸಿದಂತೆಯಲ್ಲ. ಕಲಾಸಕ್ತರು ತಪ್ಪದೇ ನೋಡಬೇಕಾದ ಅಭಿನಯ. ಇಷ್ಟೆಲ್ಲಾ ಹೇಳಿದ ಮೇಲೆ ಕಥೆಯಲ್ಲಿ ಬರುವ ಸೃಷ್ಟಿ ಕರ್ತ ಬ್ರಹ್ಮ, ಪಾಲಕ ವಿಷ್ಣು, ಶಿವ ಪಾತ್ರದಾರಿಗಳ ಬಗ್ಗೆ ನಮ್ಮ ದೇ ಭಿನ್ನಾಭಿಪ್ರಾಯಗಳನ್ನಿಟ್ಟು ನಾವು ಹಲವು ಕಾರಣಕ್ಕಾಗಿ ಶಿವದೂತ ಗುಳಿಗವನ್ನು ನೋಡುವ ಜರೂರು ಇದೆ. ಹಾಗೆಯೇ ಕಥೆಯ ನಿರೂಪಣೆ ಬಗ್ಗೆ ಕೂಡ. ಇಲ್ಲಿ ಬರುವ ಎಲ್ಲ ಪಾತ್ರದಾರಿಗಳದ್ದು ಒಂದು ಅಮೋಘ ಅಭಿನಯವೇ. ಬೆಳಕು, ರಂಗವಿನ್ಯಾಸ, ಹಿನ್ನಲೆ ಸಂಗೀತ, ಹಾಡು ಇತ್ಯಾದಿ ಅದ್ಭುತವೇ. ಇಲ್ಲಿಯ ಹಿನ್ನಲೆ ಸಂಗೀತದ ರಾಗಸಂಯೋಜನೆಗೆ ಕುಳಿತಲ್ಲೇ ನೃತ್ಯವಾಡದೇ ಇರುವವರು ಇಲ್ಲವೆನ್ನಬಹುದು.

ಇಂದಿನ ಯುವಪೀಳಿಗೆ ಸಾಮಾಜಿಕ ನಾಟಕ ಹೋಗಲಿ ಸಿನೆಮಾಗಳನ್ನು ನೋಡುವ ಅಭಿರುಚಿಯೇ ಇಲ್ಲದಿರುವಾಗ ನಾಟಕದ ಅದಿಯಿಂದ ಅಂತ್ಯದವರೆಗೆ ಪ್ರೇಕ್ಷಕರು ಎಲ್ಲೂ ಕದಲದೇ ಇರುವಂತೆ ಮಾಡಿದ್ದೇ ಈ ನಾಟಕದ ಹೆಗ್ಗಳಿಕೆ. ಎಂಥಹದೇ ಅಧುನಿಕ ಯುಗದಲ್ಲಾಗಲಿ ಜನರ ನಾಡಿಮಿಡಿತ ಹಿಡಿದು ಅವರ ಅಭಿರುಚಿಗೆ ತಕ್ಕಂತೆ ಏನನ್ನಾದರೂ ಉಣಬಡಿಸಿದರೆ ಯಾರದರೂ ಗೆಲ್ಲಲು ಸಾಧ್ಯವೆಂಬುದನ್ನು ಶಿವದೂತ ಗುಳಿಗ ಒಂದು ಉದಾಹರಣೆ. ಒಂದು ಕಾಲದಲ್ಲಿ ರಾಜ್ಯದಲ್ಲಿ ೪೦೦೦ದಷ್ಟು ಚಿತ್ರಮಂದಿರಗಳಿದ್ದವು ಎಂಬುದನ್ನು ಮರೆಯಬಾರದು. ಈಗ ಅವುಗಳ ಸಂಖ್ಯೆ ೧೫೦೦ ಇಳಿದಿರುವುದು ಶೋಚನೀಯ. ಇದಕ್ಕೆ ನಾವು ಕಾರಣಗಳನ್ನು ಹುಡುಕುತ್ತಾ ಹೋದರೆ ಅಂತರ್ ಜಾಲದ ಬಿರುಗಾಳಿ ಎದುರಿಗೆ ನಿಲ್ಲುತ್ತದೆ. ಆಜನರ ಅಭಿರುಚಿಗೆ ತಕ್ಕಂತೆ ನಾವು ಏನಾನ್ನಾದರೂ ಮಾಡುವುದದರೆ ಎಲ್ಲಿಯೂ ಕೂಡ ನಾವು ಗೆಲ್ಲಬಹುದು. ಬಾಲಿವುಡ್ ನಲ್ಲಿ ಖಳನಾಯಕನಾಗಿ ಮರೆದ ನಸ್ರುದ್ದೀನ್ ಶಾನ ಬೆಳೆದು ಬಂದ ದಾರಿಯನ್ನು ನಾವು ಕೆದಕಬೇಕಾಗಿದೆ.

ರಂಗಭೂಮಿಯ ಕಲಾವಿದನಾಗಿದ್ದರಿಂದಲೇ ಅಮೋಘ ಅಭಿನಯ ನೀಡಿ ಹಿಂದಿ ಚಿತ್ರರಂಗದಲ್ಲಿ ಅಚ್ಚಳಿಯದೇ ಉಳಿದಿದ್ದಾನೆ. ಈಗಿನ ಸಿನಿಮಾ ನಟ ನಟಿಯರು ಪಡೆಯುವ ತರಬೇತಿ ಕಳಪೆ ಮಟ್ಟದ್ದು ಎಂಬುದು ಅವರು ಅಭಿನಯಿಸುವ ಚಿತ್ರಗಳೇ ಸಾಕ್ಷಿ. ಸಹಜ ಅಭಿನಯ, ಪಾತ್ರಕ್ಕೆ ಜೀವ ತುಂಬುವ ತರಬೇತಿ ಅಗತ್ಯ. ಚಿತ್ರರಂಗದಲ್ಲಿ ತೋರಿದ ಹಲವಾರ ಸಾಧನೆಗಳ ಹಿಂದೆ ರಂಗಭೂಮಿ ಇರುವುದು ಎದ್ದು ತೋರುತ್ತದೆ.ಇಂತಹ ದುಸ್ಸಾಹಸಕ್ಕೆ ಕೈಹಾಕಿದ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರಿಗೆ ದೊಡ್ಡ ಸೆಲ್ಯೂಟ್. ಇಂದಿನ ಯುವ ಜನಾಂಗ ತಲುಪಿರುವುದರ ಹಿಂದೆ ನೂರಾರು ಕಾರಣಗಳಿವೆ. ಅಭಿರುಚಿಯ ಸಿನಿಮಾ, ನಾಟಕ, ಸಾಹಿತ್ಯ ರಚನೆಯಲ್ಲಿ ಅವರು ತೊಡಗುವಂತೆ ಮಾಡುವುದು, ಇನ್ನು ಒಂದು ಹೆಜ್ಜೆ ಒಳ್ಳೆಯ ಕಥೆ, ಕಾದಂಬರಿಗಳನ್ನು ಒದುವಂತೆ ಪ್ರೇರೇಪಿಸುವುದರ ಜೊತೆಗೆ ಅಭಿರುಚಿಯ ಸಿನಿಮಾ, ನಾಟಕಗಳನ್ನು ವೀಕ್ಷಿಸುವಂತೆ ಮಾಡುವುದು ಜವಾಬ್ದಾರಿಯುತ ನಾಗರೀಕರ, ಪೋಷಕರ ಹೊಣೆಗಾರಿಕೆಯಾಗಿದೆ.

-ಡಿ.ಕಣಸೋಗಿ, ತತ್ತೂರು