ಕವಿಸಾಲು
01
ಭೂ ಹೀನರಿಗೆ ಭೂ ಭಾಗ್ಯ ಕಾಗೋಡರ ಹೆಗ್ಗಳಿಕೆ- ಶಾಸಕ ಬೇಳೂರು
ಭೂ ಹೀನರಿಗೆ ಭೂ ಭಾಗ್ಯ ಕಾಗೋಡರ ಹೆಗ್ಗಳಿಕೆ- ಶಾಸಕ ಬೇಳೂರು
ಸಾಗರ : ಭೂಹೀನರಿಗೆ ಭೂಮಿಭಾಗ್ಯ ನೀಡಿದ ಹೆಗ್ಗಳಿಕೆ ಕಾಗೋಡು ತಿಮ್ಮಪ್ಪ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ಗಾಂಧಿ ಮಂದಿರದಲ್ಲಿ ಮಂಗಳವಾರ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಜನ್ಮದಿನದ ಅಂಗವಾಗಿ ಕಾಂಗ್ರೇಸ್ ಪಕ್ಷದಿಂದ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಗೋಡು ತಿಮ್ಮಪ್ಪ ಒಂದು ಅದ್ಬುತವಾದ ಶಕ್ತಿ. ಹೋರಾಟದ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶ ಮಾಡಿದ ಕಾಗೋಡು ತಿಮ್ಮಪ್ಪ ಅವರು 92 ವರ್ಷ ಕಳೆದು, 93ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಕಾಗೋಡು ಸಾಹೇಬರು ನೂರು ವರ್ಷ ಬದುಕಬೇಕು. ನಮಗೆಲ್ಲಾ ಮಾರ್ಗದರ್ಶನ ನೀಡಬೇಕು. ಅವರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲಾ ನಡೆಯಲು ನಮಗೆ ಹೆಮ್ಮೆಯಿದೆ ಎಂದು ತಿಳಿಸಿದರು.
ಹಿಂದುಳಿದ, ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಎಲ್ಲರಿಗೂ ಭೂಮಿಭಾಗ್ಯ ನೀಡಿದ್ದು ಕಾಗೋಡು ತಿಮ್ಮಪ್ಪನವರು ಎನ್ನುವುದು ದಾಖಲಾರ್ಹ ಸಂಗತಿ. ರಾಜ್ಯದ ವಿವಿಧ ಖಾತೆ ಸಮರ್ಥವಾಗಿ ನಿಭಾಯಿಸಿ, ವಿಧಾನಸಭಾಧ್ಯಕ್ಷರಾಗಿ ಕಾಗೋಡು ತಿಮ್ಮಪ್ಪ ಅವರು ಮಾಡಿರುವ ಕೆಲಸ ನಮ್ಮಂತಹವರಿಗೆ ಪ್ರೇರಣೆಯಾಗಿದೆ. ಕಾಗೋಡು ಸತ್ಯಾಗ್ರಹದ ಮೂಲಕ ಹೋರಾಟದ ಅಂಗಳಕ್ಕೆ ಧುಮುಕಿದ ಕಾಗೋಡು ತಿಮ್ಮಪ್ಪ ಅವರ ಅಭಿವೃದ್ದಿಪರ ಆಲೋಚನೆ ನನಗೆ ಮಾರ್ಗದರ್ಶನವಾಗಿದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್, ನಗರ ಕಾಂಗ್ರೇಸ್ ಅಧ್ಯಕ್ಷ ಸುರೇಶಬಾಬು, ಮಹಮ್ಮದ್ ಖಾಸಿಂ,ಮಕ್ಬೂಲ್ ಅಹಮದ್ ಹಾಜರಿದ್ದರು