ಮುಡಾ ಕೇಸ್:  ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್ ದಾಖಲು, ಮುಂದೇನು? ಯಾವ ಯಾವ ಸೆಕ್ಷನ್ ಗಳಡಿಯಲ್ಲಿ ತನಿಖೆ?

ಮುಡಾ ಕೇಸ್: 

ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್ ದಾಖಲು,

ಮುಂದೇನು? ಯಾವ ಯಾವ ಸೆಕ್ಷನ್ ಗಳಡಿಯಲ್ಲಿ ತನಿಖೆ?

ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಎಫ್​ಐಆರ್​ ದಾಖಲಿಸಿದೆ. ಖುದ್ದು ಮೈಸೂರು ಲೋಕಾಯುಕ್ತ ಎಸ್​​ಪಿ ಎಸ್‌ಪಿ ಉದೇಶ್ ಅವರೇ ಕುಳಿತು ಟೈಪ್ ಮಾಡಿ ಎಫ್​​ಐಆರ್​​ ದಾಖಲಿಸಿದ್ದಾರೆ. ಹಾಗಾದ್ರೆ, ಸಿಎಂ ವಿರುದ್ಧ ಯಾವೆಲ್ಲಾ ಸೆಕ್ಷನ್​ಗಳನ್ನು ಹಾಕಲಾಗಿದೆ? ಮುಂದಿನ ಕ್ರಮವೇನು ಎನ್

ಮೈಸೂರು, (ಸೆಪ್ಟೆಂಬರ್ 27): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿರುದ್ಧ ತನಿಖೆಗೆ ಜನಪ್ರತಿನಿಧಿಗಳ ನ್ಯಾಯಾಲಯ ಮೈಸೂರು ಲೋಕಾಯುಕ್ತಕ್ಕೆ (Lokayukta) ಆದೇಶಿಸಿದೆ. ಕೋರ್ಟ್​ ಆದೇಶದ ಮೇರೆಗೆ ಮೈಸೂರು ಲೋಕಾಯುಕ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್​ ಆದೇಶದಂತೆ ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಸೂಚನೆ ಮೇರೆಗೆ ಮೈಸೂರು ಲೋಕಾಯುಕ್ತ SP ಉದೇಶ್ ನೇತೃತ್ವದಲ್ಲಿ ಎಫ್ಐಆರ್ ದಾಖಲಾಗಿದೆ. ಸಿಆರ್‌ಪಿಸಿ  ಅಡಿಯಲ್ಲಿ ಎಫ್​ಐಆರ್​ ದಾಖಲಿಸಿ ಎಂದು ಕೋರ್ಟ್​ ಆದೇಶ ನೀಡಿತ್ತು. ಅದೇ ಕಾಯ್ದೆಯಡಿ  ಇದೀಗ ಸಿದ್ದರಾಮಯ್ಯ ವಿರುದ್ಧ ಸಿಆರ್​ಪಿಸಿ 156(3)ರ ಹಲವು ಸೆಕ್ಷನ್​​ ಅಡಿಯಲ್ಲಿ ಎಫ್​ಐಆರ್ ದಾಖಲಾಗಿದೆ.

ಯಾವೆಲ್ಲಾ ಸೆಕ್ಷನ್ ದಾಖಲು?

ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರೆ ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್​ 120 ಬಿ, 166, 403, 420, 426, 465, 468, 340, 351 ಅಡಿ ಎಫ್​ಐಆರ್ ದಾಖಲಾಗಿದೆ. ಹಾಗೇ ಕರ್ನಾಟಕ ಭೂಮಿ ಕಬಳಿಕೆ ನಿಷೇಧ ಕಾಯ್ದೆ 2011ರ ಅನ್ವಯ ಪ್ರಕರಣ ದಾಖಲಾಗಿದೆ.
ಭ್ರಷ್ಟಾಚಾರ ತಡೆ ಕಾಯ್ದೆ 1988 , ಬೇನಾಮಿ ಆಸ್ತಿ ವಹಿವಾಟು ಕಾಯ್ದೆ 1988, ಸೆಕ್ಷನ್​ 120 ಬಿ ಕ್ರಿಮಿನಲ್ ಪಿತೂರಿ, ಸೆ, 166 ಸಾರ್ವಜನಿಕ ಸೇವಕ‌ ಕಾನೂನು ಉಲ್ಲಂಘನೆ ಮಾಡುವುದು, ಸೆ 403 ಆಸ್ತಿಯ ದುರ್ಬಳಕೆ, ಸೆ 406 ನಂಬಿಕೆಯ ಉಲ್ಲಂಘನೆ, ಸೆ 420 ವಂಚನೆ, ಸೆ 426 ದುಷ್ಕೃತ್ಯವೆಸಗುವುದು, ಸೆ 465 ಪೋರ್ಜರಿ, ಸೆ 468 ವಂಚನೆ ಉದ್ದೇಶಕ್ಕಾಗಿ ದಾಖಲೆಗಳ ಪೋರ್ಜರಿ, ಸೆ 340 ಅಕ್ರಮ ಬಂಧನ, ಸೆ 351 ಇತರರಿಗೆ ಹಾನಿಯನ್ನುಂಟು ಮಾಡುವುದು.

ಇದನ್ನೂ ಓದಿ: ಮುಡಾ ಹಗರಣ: ಸಿದ್ದರಾಮಯ್ಯ ವಿರುದ್ಧ ಆದೇಶದ ವೇಳೆ ಗಾಂಧೀಜಿಯ ರಾಮರಾಜ್ಯ ಪಾಠ ಹೇಳಿದ ಕೋರ್ಟ್​!
ದೂರುದಾರ, ಆರ್​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ದೂರಿನ ಮೇರೆಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್​ ದಾಖಲಿಸುವಂತೆ ನ್ಯಾಯಾಲಯ ಸೂಚಿಸಿತ್ತು. ನ್ಯಾಯಾಲಯ ಸೂಚಿಸಿರುವ ಐಪಿಸಿ ಸೆಕ್ಷನ್ ಭ್ರಷ್ಟಾಚಾರ ತಡೆ ಕಾಯ್ದೆ, ಬೇನಾಮಿ ಆಸ್ತಿ ವಹಿವಾಟು ಕಾಯ್ದೆ, ಭೂ ಕಬಳಿಕೆ ನಿರ್ಬಂಧ ಕಾಯ್ದೆಯಡಿ ಲೋಕಾಯುಕ್ತ ಎಫ್​ಐಆರ್ ದಾಖಲಿಸಿದೆ. ಸಿಎಂ ಸಿದ್ದರಾಮಯ್ಯ A 1 ಆರೋಪಿಯಾಗಿದ್ದರೆ, ಪತ್ನಿ ಪಾರ್ವತಿ A 2 ಆರೋಪಿಯಾಗಿದ್ದಾರೆ. ಇನ್ನು ಬಾಮೈದಾ ಮಲ್ಲಿಕಾರ್ಜುನ A 3, ಭೂಮಾಲೀಕ ದೇವರಾಜು ಎ4 ಹಾಗೂ ಎ5 ಇತರರು ಎಂದು ಎಫ್​ಐಆರ್​ನಲ್ಲಿ ದಾಖಲಿಸಲಾಗಿದೆ. ಇನ್ನು ಸಿಎಂ ಸಿದ್ದರಾಮಯ್ಯ ವಿರುದ್ಧದ ಎಫ್ಐಆರ್ ನಂಬರ್ 11/2024 ಆಗಿದೆ.
ಜನಪ್ರತಿನಿಧಿಗಳ ನ್ಯಾಯಾಲಯದ ಆದೇಶದ ಪ್ರತಿ ಗುರುವಾರ ಲೋಕಾಯುಕ್ತ ಎಸ್​ಪಿ ಉದೇಶ್ ಅವರ ಪೆಡೆದ್ದರು. ಬಳಿಕ ಲೋಕಾಯುಕ್ತ ಪ್ರಧಾನ ಕಚೇರಿಗೆ ಭೇಟಿ ನೀಡಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. ಕೊನೆಗೆ ಲೋಕಾಯುಕ್ತ ಎಡಿಜಿಪಿ ಮನೀಶ್ ಖರ್ಬೀಕರ್ ಮಾರ್ಗದರ್ಶನದಲ್ಲಿ ಮೈಸೂರು ಲೋಕಾಯುಕ್ತ ಎಸ್​ಪಿ ಉದೇಶ್​ ಅವರು ಖುದ್ದು ತಾವೇ ಮುಂದೆ ನಿಂತು ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್ ದಾಖಲಿಸಿದ್ದಾರೆ.

ಮುಂದಿನ ಕಾನೂನು ಪ್ರಕ್ರಿಯೆ ಏನು?

ಈಗಷ್ಟೇ ಸಿದ್ದರಾಮಯ್ಯ ವಿರುದ್ಧ ಮೈಸೂರು ಲೋಕಾಯುಕ್ತ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಈ ಎಫ್​ಐಆರ್​ ಆಧಾರದ ಮೇಲೆ ಲೋಕಾಯುಕ್ತ ಪೊಲೀಸರು ತನಿಖೆಗೆ ಕೈಗೊಳ್ಳಲಿದ್ದಾರೆ. ಅಗತ್ಯವಿದ್ದಾಗ ಸಿಎಂ ಸಿದ್ದರಾಮಯ್ಯನವರನ್ನು ವಿಚಾರಣೆಗೆ ಬರುವಂತೆ ನೋಟಿಸ್ ನೀಡಬಹುದು. ಅಲ್ಲದೇ ಲೋಕಾಯುಕ್ತ ಬಂಧಿಸುವ ಅಧಿಕಾರವನ್ನೂ ಸಹ ಹೊಂದಿದೆ. ಹೀಗಾಗಿ ಬಂಧನ ಮಾಡಿದರೂ ಮಾಡಬಹುದು. ಇನ್ನು ಸಿಎಂ ಸಿದ್ದರಾಮಯ್ಯ ಕಾನೂನು ಪರಿಣಿತರ ಸಲಹೆ ಮೇರೆಗೆ ಜಾಮೀನಿಗೆ ಅರ್ಜಿ ಸಲ್ಲಿಸಬಹುದು.