ಉಚಿತ ಫ್ಲೋರೋಸಿಸ್ ತಪಾಸಣೆ ಶಿಬಿರ
ಉಚಿತ ಫ್ಲೋರೋಸಿಸ್ ತಪಾಸಣೆ ಶಿಬಿರ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗ, ಆಯುಷ್ಮಾನ್ ಆರೋಗ್ಯ ಕೇಂದ್ರ ಹೊಸಗೊದ್ದನಕೊಪ್ಪ, ಹಾಗೂ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ಇವರ ಸಹಭಾಗಿತ್ವದಲ್ಲಿ *ರಾಷ್ಟ್ರೀಯ ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮದಡಿ ಉಚಿತ ಫ್ಲೋರೋಸಿಸ್ ತಪಾಸಣೆ ಶಿಬಿರವನ್ನು* ಹೊಸಗೊದ್ದನಕೊಪ್ಪ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಈ ಶಿಬಿರಕ್ಕೆ ಶಿಕಾರಿಪುರದ ಸರ್ಕಾರಿ ಆಸ್ಪತ್ರೆಯ ಡಾ||ಉಷಾ ದಂತ ವೈದ್ಯೆ, ಡಾ||ಮಂಜುನಾಥ್ ಫ್ಲೋರೋಸಿಸ್ ಕನ್ಸಲ್ಟೆಂಟ್,
ಮಂಜುನಾಥ್ ಟಿ ಸಮುದಾಯ ಆರೋಗ್ಯ ಅಧಿಕಾರಿ ಹಾಗೂ ತಂಡದವರು,ಶಾಲೆಯ ಮುಖ್ಯೋಪಾಧ್ಯಾಯರಾದ ಜಯಮ್ಮ ಹಾಗೂ ಇಂತಿಯಾಜ್ ಅಹಮದ್ ಗ್ರಾಮದ ಪಿಡಿಓ ಉಪಸ್ಥಿತರಿದ್ದರು.
*ಫ್ಲೋರೋಸಿಸ್ ಎಂದರೇನು?*
ದಂತ ಫ್ಲೋರೋಸಿಸ್ ಒಂದು ಸಾಮಾನ್ಯ ಅಸ್ವಸ್ಥತೆಯಾಗಿದ್ದು, ದಂತಕವಚ ರಚನೆಯ ಸಮಯದಲ್ಲಿ ಅತಿಯಾದ ಫ್ಲೋರೈಡ್ ಸೇವನೆಯಿಂದ ಉಂಟಾಗುವ ದಂತ ಕಾಯಿಲೆಯಾಗಿದೆ.ಹಲ್ಲುಗಳು ರೂಪುಗೊಳ್ಳುತ್ತಿರುವಾಗ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದ ಫ್ಲೋರೈಡ್ ಸೇವನೆಯಿಂದ ಡೆಂಟಲ್ ಫ್ಲೋರೋಸಿಸ್ ಉಂಟಾಗುತ್ತದೆ. ಸಾಮಾನ್ಯವಾಗಿ ಈ ಕಾಯಿಲೆಯು ಚಿಕ್ಕ ಮಕ್ಕಳು ಹಾಗೂ ಗರ್ಭಿಣಿಯರಲ್ಲಿ ಕಂಡುಬರುತ್ತದೆ, ಎಂದು ಡಾಕ್ಟರ್ ಉಷಾ ತಿಳಿಹೇಳಿದರು.
*ಪ್ರಮುಖ ಕಾರಣಗಳು*
೧. ಫ್ಲೋರೈಡೀಕರಿಸಿದ ಮೌತ್‌ರಿನ್ಸ್ (ಚಿಕ್ಕ ಮಕ್ಕಳು ನುಂಗಬಹುದು).
೨. ಫ್ಲೋರೈಡ್ ಟೂತ್‌ಪೇಸ್ಟ್‌ನ ಅತಿಯಾದ ಸೇವನೆ.
೩. ಫ್ಲೋರೈಡ್ ಅಂಶಕ್ಕಾಗಿ ಪರೀಕ್ಷಿಸದ ಬಾಟಲ್ ನೀರು.
೪. ಆಹಾರದ ಫ್ಲೋರೈಡ್ ಪೂರಕಗಳ ಅನುಚಿತ ಬಳಕೆ.
೫. ಬೋರ್ವೆಲ್ ನೀರು ಸೇವನೆ.
ಹೀಗೆ ಹಲವಾರು ಮೂಲಗಳಿಂದ ಫ್ಲೋರೈಡ್ ಅಂಶವು ದೇಹದಲ್ಲಿ ಸೇರಿಕೊಂಡು ದಂತ ಹಾಗೂ ಮೂಳೆ ಫ್ಲೋರೋಸಿಸ್ ಬರುವ ಸಾಧ್ಯತೆಗಳಿರುತ್ತವೆ.
*ತಡೆಗಟ್ಟುವ ಕ್ರಮಗಳು*
೧. ವಿಟಮಿನ್ ಸಿ ಹೊಂದಿರುವ ಹಣ್ಣುಗಳು ಹಾಗೂ ತರಕಾರಿಗಳನ್ನು ಸೇವನೆ ಮಾಡುವುದು.
೨. ಮಿತವಾಗಿ ಟೂತ್ಪೇಸ್ಟ್ ಅನ್ನು ಬಳಸುವುದು.
೩. ನೀರನ್ನು ಶುದ್ಧೀಕರಣ ಮಾಡಿ ಕುಡಿಯುವುದು.
ಈ ಶಿಬಿರದಲ್ಲಿ ಶಾಲಾ ಮಕ್ಕಳು ಹಾಗೂ ಗರ್ಭಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು,ತಪಾಸಣೆ ಮಾಡಿಸಿಕೊಂಡು ಯಶಸ್ವಿಗೊಳಿಸಿದರು. ಈ ಸುಸಂದರ್ಭದಲ್ಲಿ ಸಿಹೆಚ್ಒ ಆದ ರೂಪ ಹಾಗೂ ಪ್ರದೀಪ್, ಲ್ಯಾಬ್ ಟೆಕ್ನಿಷಿಯನ್ ಸಿಂಧು ರವರು ಉಪಸ್ಥಿತರಿದ್ದರು.