ಕೊನೆಗೂ ದೂರು ನೀಡುವ ಧೈರ್ಯ ಮಾಡಿದ ಗಣಿ ಮತ್ತು ಭೂ ಇಲಾಖೆ ಅಧಿಕಾರಿ ಕೆ.ಕೆ.ಜ್ಯೋತಿ…**ದೂರಿನಲ್ಲಿ ಶಾಸಕ ಸಂಗಮೇಶ್ ಪುತ್ರ ಬಸವೇಶ್ ಹೆಸರೇ ಇಲ್ಲ!*

*ಕೊನೆಗೂ ದೂರು ನೀಡುವ ಧೈರ್ಯ ಮಾಡಿದ ಗಣಿ ಮತ್ತು ಭೂ ಇಲಾಖೆ ಅಧಿಕಾರಿ ಕೆ.ಕೆ.ಜ್ಯೋತಿ…*

*ದೂರಿನಲ್ಲಿ ಶಾಸಕ ಸಂಗಮೇಶ್ ಪುತ್ರ ಬಸವೇಶ್ ಹೆಸರೇ ಇಲ್ಲ!*

ಶಿವಮೊಗ್ಗ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿ ಕೆ.ಕೆ.ಜ್ಯೋತಿಯವರಿಗೆ ಅಕ್ರಮ ಮರಳು ದರೋಡೆ ದಾಳಿಯ ವೇಳೆ ತೀರಾ ಅವಾಚ್ಯವಾಗಿ ಬೈದು, ಕೊಲೆ ಬೆದರಿಕೆ ಹಾಕಿ, ವಾಹನ ಮೈಮೇಲೆ ಹತ್ತಿಸುವ ಜೀವ ಬೆದರಿಕೆ ಹಾಕಿದ್ದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಪುತ್ರ ಬಿ.ಎಸ್.ಬಸವೇಶ್ ವಿರುದ್ಧ ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆಂದೇ ಭಾವಿಸಲಾಗಿತ್ತು. ಆದರೆ, ಆತನ ಹೆಸರೇ ದೂರಿನಲ್ಲಿಲ್ಲ!

ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಹು ದೊಡ್ಡ ಚರ್ಚೆಗೆ ಒಳಗಾಗಿದ್ದ ಜ್ಯೋತಿ ನಿಂದನಾ ಪ್ರಕರಣ ಇದೀಗ ಕಾನೂನಾತ್ಮಕ ರೂಪ ಪಡೆದಿದ್ದು, ಸಂಗಮೇಶ್ ಪುತ್ರ ಬಸವೇಶ್ ಮೇಲೆ ಎಫ್ ಐ ಆರ್ ಇಂದು ದಾಖಲಾಗುತ್ತದೆಂದೇ ಕುತೂಹಲ ಮೂಡಿತ್ತು.

ಭದ್ರಾವತಿಯ ಸೀಗೆಬಾಗಿ ಬಾಬಳ್ಳಿ ಬಳಿಯಲ್ಲಿ ಭದ್ರಾನದಿಯಿಂದ ಅಕ್ರಮವಾಗಿ ಮರಳು ಗಣಿಗಾರಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಗಣಿ ಅಧಿಕಾರಿ ಜ್ಯೋತಿಯವರಿಗೆ ಸಿಕ್ಕಿತ್ತು. ಈ ಸಂದರ್ಭದಲ್ಲಿ ರಾತ್ರಿಯಾಗಿರುವುದನ್ನೂ ಲೆಕ್ಕಿಸದೇ ಗಣಿ ಅಧಿಕಾರಿಗಳಾದ ಕೆ ಕೆ ಜ್ಯೋತಿ, ಪ್ರಿಯಾ ದೊಡ್ಡಗೌಡರ್ ಮತ್ತಿತರೆ ಮೂವರು ಸಿಬ್ಬಂದಿಗಳು ದಾಳಿ ಮಾಡಲು ಸ್ಥಳಕ್ಕೆ ಹೋಗಿದ್ದರು.

ಸ್ಥಳದಲ್ಲಿದ್ದ ಅಕ್ರಮ ಮರಳುಕೋರ ವ್ಯಕ್ತಿಯೊಬ್ಬರಿಗೆ ಫೋನ್ ಮಾಡಿ ಅಧಿಕಾರಿ ಜ್ಯೋತಿಯವರಿಗೆ ಫೋನ್ ನೀಡಲು ಬರುತ್ತಾನೆ. ಫೋನಲ್ಲೇ ತೀರಾ ಕೊಳಕು ಭಾಷೆಯಲ್ಲಿ ಬೈಯಲು ಆರಂಭಿಸಿದ ಆಕಡೆ ವ್ಯಕ್ತಿ ಜೀವ ಬೆದರಿಕೆಯನ್ನೂ ಹಾಕುತ್ತಾನೆ.

ಈ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ಅಧಿಕಾರಿ ಜ್ಯೋತಿಯವರು ಕೂಡ ಘಟನೆ ನಡೆದಿದೆಯೋ ಇಲ್ಲವೋ ಎಂಬುದನ್ನೂ ಹೇಳದೇ ಮೌನವಹಿಸಿದ್ದರು. ಇದೀಗ ಲಿಖಿತ ದೂರು ನೀಡಿದ್ದು, ಭದ್ರಾವತಿ ಓಲ್ಡ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆದರೆ, ದೂರಿನಲ್ಲಿ ಆರೇಳು ಜನರ ವಿವರ ಇದೆ ಬಿಟ್ಟರೆ ಸಂಗಮೇಶ್ ಮಗನ ಹೆಸರಿಲ್ಲ!

ಸರ್ಕಾರಿ ಮಹಿಳಾ ಅಧಿಕಾರಿ ಜ್ಯೋತಿಯವರಿಗೆ ನಿಂದಿಸಿದ ಬಸವೇಶನನ್ನು ಕೂಡಲೇ ಬಂಧಿಸಬೇಕೆಂದು ಬಿಜೆಪಿ, ಜೆಡಿಎಸ್ ಮುಖಂಡರು ಒತ್ತಡ ಹೇರುತ್ತಿದ್ದಾರೆ. ಆದರೆ, ಪೊಲೀಸರು ಬಂಧಿಸುವರಾ?