ಹುತಾತ್ಮ ಯೋಧ ಮಂಜುನಾಥ್ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಭೇಟಿ*
*ಹುತಾತ್ಮ ಯೋಧ ಮಂಜುನಾಥ್ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಭೇಟಿ*
![](https://malenaduexpress.com/wp-content/uploads/2025/02/IMG-20250212-WA0419-1-1024x683.jpg)
ಉತ್ತರಪ್ರದೇಶದ ಆಗ್ರಾದಲ್ಲಿ ಶುಕ್ರವಾರ ತರಬೇತಿ ವೇಳೆ ಮರಣವನ್ನಪ್ಪಿದ ವಾಯುಪಡೆಯ ವಾರೆಂಟ್ ಆಫಿಸರ್ ದಿ. ಜಿ.ಎಸ್ ಮಂಜುನಾಥ್ (36) ಅವರ ನಿವಾಸಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಮಂತ್ರಿ ಮಧು ಬಂಗಾರಪ್ಪ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಸಂಕೂರು ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿ, ವಾಯುಸೇನೆಯಲ್ಲಿ ಸ್ಮರಣೀಯ ಸೇವೆ ಸಲ್ಲಿಸುತ್ತಾ ಸಂಕೂರು ಹಾಗೂ ಸುತ್ತಲಿನ ಗ್ರಾಮಗಳ ಯುವ ಸಮೂಹಕ್ಕೆ ಸ್ಫೂರ್ತಿ ಆಗಿದ್ದ ಮಂಜುನಾಥ್ ಅವರ ಅಕಾಲಿಕ ಮರಣ ಅತ್ಯಂತ ನೋವಿನ ಸಂಗತಿಯಾಗಿದ್ದು, ಭಗವಂತನು ಕುಟುಂಬ ವರ್ಗಕ್ಕೆ ದುಖಃವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ತಿಳಿಸಿದರು.
ವಾಯುಸೇನೆಯ ಈ ಹೆಮ್ಮೆಯ ಅಧಿಕಾರಿ ಸದಾ ನಮ್ಮೆಲ್ಲರ ಚಿರಸ್ಮರಣೆಯಲ್ಲಿರುತ್ತಾರೆ. ಅವರ ಕುಟುಂಬ ಸದಸ್ಯರ ಜೊತೆಗೆ ನಾವಿದ್ದೇವೆ ಎಂದು ಧೈರ್ಯದ ಭರವಸೆ ನೀಡಿದರು.
ಸ್ಥಳೀಯ ಗ್ರಾಮಸ್ಥರು ಮಂಜುನಾಥ್ ಅವರ ಶಾಶ್ವತ ನೆನಪಿಗಾಗಿ ಗ್ರಾಮದಲ್ಲಿ ಪುತ್ಥಳಿ ನಿರ್ಮಾಣ ಹಾಗೂ ವಿದ್ಯಾಬ್ಯಾಸ ಮಾಡಿದ ಶಾಲಾ ಅಭಿವೃದ್ಧಿ ಹಾಗೂ ನೂತನ ಕೊಠಡಿ ನಿರ್ಮಾಣ ಮಾಡುವಂತೆ ಮನವಿ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ಸಚಿವರು ಶೀಘ್ರದಲ್ಲಿಯೇ ಕ್ರಮಕೈಗೊಳ್ಳುವ ಭರವಸೆ ನೀಡಿದರು.