ಸಚಿವ ರಾಜಣ್ಣರ ವಿರುದ್ಧ ಕಾಂಗ್ರೆಸ್ ಶಿಸ್ತು ಸಮಿತಿ ಕ್ರಮ ಕೈಗೊಳ್ಳಲಿ: ಚೈತ್ರ ಮೋಹನ್*

*ಸಚಿವ ರಾಜಣ್ಣರ ವಿರುದ್ಧ ಕಾಂಗ್ರೆಸ್ ಶಿಸ್ತು ಸಮಿತಿ ಕ್ರಮ ಕೈಗೊಳ್ಳಲಿ: ಚೈತ್ರ ಮೋಹನ್*

ಶಿವಮೊಗ್ಗ: ಸಹಕಾರ ಸಚಿವ ಕೆ.ಎನ್. ರಾಜಣ್ಣನವರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪ್ರಸ್ತಾಪ ಹಾಗೂ ಈ ಬಗ್ಗೆ ಮನಬಂದಂತೆ ನೀಡುತ್ತಿರುವ ಹೇಳಿಕೆಗಳಿಂದಾಗಿ ಕಾಂಗ್ರೆಸ್‌ಗೆ ಹಾನಿಯಾಗುತ್ತಿದ್ದು, ಮುಂಬರುವ ಜಿಪಂ, ತಾಪಂ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿರುವ ನಮ್ಮಂತಹ ಕಾರ್ಯಕರ್ತರಿಗೆ ಆಘಾತವಾಗುತ್ತಿದೆ. ಆದ್ದರಿಂದ ಪಕ್ಷದ ಶಿಸ್ತು ಸಮಿತಿಯು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಾಲೂಕಿನ ಹಸೂಡಿ ಗ್ರಾಪಂ ಅಧ್ಯಕ್ಷೆ ಚೈತ್ರ ಆರ್. ಮೋಹನ್ ಒತ್ತಾಯಿಸಿದ್ದಾರೆ.

ಭಾರತದಲ್ಲಿಯೇ ಕಾಂಗ್ರೆಸ್ ಅತ್ಯಂತ ಬಲಿಷ್ಠವಾಗಿರುವ ರಾಜ್ಯಗಳಲ್ಲಿ ಕರ್ನಾಟಕ ಪ್ರಮುಖವಾಗಿದೆ. ಇದಕ್ಕೆ ಕೆಪಿಸಿಸಿ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪಕ್ಷ ನಿಷ್ಠೆ, ಸಂಘಟನಾ ಚಾತುರ್ಯತೆ, ನಾಯಕತ್ವ, ಬದ್ಧತೆ, ಪರಿಶ್ರಮವೇ ಕಾರಣ. ಆದರೆ, ಸಚಿವ ರಾಜಣ್ಣ ಅವರು ನೀಡುತ್ತಿರುವ ಹೇಳಿಕೆಗಳಿಂದ ಗೊಂದಲ ಸೃಷ್ಟಿಯಾಗುತ್ತಿದ್ದು, ಕೂಡಲೇ ಇದನ್ನು ತಡೆಗಟ್ಟಬೇಕು.

ಪ್ರಬಲ ಹಾಗೂ ಪ್ರಭಾವಿ ನಾಯಕರಾಗಿರುವ ಡಿ.ಕೆ.ಶಿವಕುಮಾರ್ ಅವರು ಪಕ್ಷ ಸಂಘಟನೆಯೊಂದಿಗೆ ಸರ್ಕಾರದ ಅಭಿವೃದ್ಧಿ ಕಾರ್ಯಗಳಲ್ಲೂ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮಧು ಬಂಗಾರಪ್ಪನವರ ಶಿಫಾರಸ್ಸಿನ ಮೇರೆಗೆ ಹಸೂಡಿ ಗ್ರಾಪಂಗೆ ಎರಡೂವರೆ ಕೋಟಿ ರೂ.ನಷ್ಟು ಮೊತ್ತ ಲಭ್ಯವಾಗಲು ಡಿ.ಕೆ. ಶಿವಕುಮಾರ್ ಅವರೇ ಕಾರಣ.

ಕೆಪಿಸಿಸಿ ಅಧ್ಯಕ್ಷರ ನಾಯಕತ್ವ, ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಹಾಗೂ ಗ್ಯಾರಂಟಿ ಯೋಜನೆಗಳಿಂದಾಗಿ ಕಾಂಗ್ರೆಸ್ ಹಳ್ಳಿ, ಹಳ್ಳಿಗಳಲ್ಲೂ ಬಲಿಷ್ಟಗೊಂಡಿದೆ. ಕೆಪಿಸಿಸಿ ಅಧ್ಯಕ್ಷರು ರಾಜ್ಯದ ಉದ್ದಗಲಕ್ಕೂ ಜಾತಿ, ಮತ, ಧರ್ಮ ಭೇದವಿಲ್ಲದೆ ಪಕ್ಷ ಸಂಘಟಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ತಳಮಟ್ಟದಿಂದ ಪಕ್ಷದ ಸಂಘಟನೆ ಮತ್ತಷ್ಟು ಬಲವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಗ್ಯಾರಂಟಿ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದಕ್ಕೆ ಡಿ.ಕೆ. ಶಿವಕುಮಾರ್ ಅವರ ಅಪಾರ ಪರಿಶ್ರಮವೇ ಕಾರಣ

ಮುಂಬರುವ ಜಿಪಂ, ತಾಪಂ ಮತ್ತು ಸ್ಥಳೀಯ ಸಂಘ,ಸಂಸ್ಥೆಗಳ ಚುನಾವಣೆಯ ಫಲಿತಾಂಶದ ಮೇಲೆ ಇದು ಗಂಭೀರ ಪರಿಣಾಮ ಬೀರುವುದು ನಿಶ್ವಿತ. ಆದರೆ, ಪಕ್ಷದಲ್ಲಿಯೇ ಅವರ ವಿರುದ್ಧ ಷಡ್ಯಂತ್ರ ನಡೆಯುತ್ತಿರುವುದು ದುರಂತ. ಕೆಪಿಸಿಸಿ ಅಧ್ಯಕ್ಷರ ಬಗ್ಗೆಯೇ ಲಘುವಾಗಿ ಮಾತನಾಡುವ ಸಚಿವ ರಾಜಣ್ಣ ಸಾಮಾನ್ಯ ಕಾರ್ಯಕರ್ತರಿಗೆ ಯಾವ ರೀತಿ ಗೌರವ ನೀಡಬಲ್ಲರು ಎಂಬುದನ್ನು ಅರ್ಥೈಸಿಕೊಳ್ಳಬಹುದು.
ನಾಡಿನ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪರವಿದ್ದಾರೆ. ಇದಕ್ಕೆ ಡಿ.ಕೆ. ಶಿವಕುಮಾರ್ ಅವರ ನಾಯಕತ್ವ ಪ್ರಮುಖ ಕಾರಣ. ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ನಮ್ಮಂತಹ ಕಾರ್ಯಕರ್ತರು ಶಿವಕುಮಾರ್ ಅವರ ನಾಮಬಲದಿಂದಲೇ ಆಯ್ಕೆಯಾಗುವುದು ನಿಶ್ಚಿತ ಎಂಬಂತಹ ವಾತಾವರಣವಿದೆ.

ಆದ್ದರಿಂದ, ಸಚಿವ ರಾಜಣ್ಣ ಸೇರಿದಂತೆ ಇತರೆ ನಾಯಕರು ಪಕ್ಷಕ್ಕೆ ಹಾನಿಯಾಗದಂತೆ, ಕಾರ್ಯಕರ್ತರ ಮನಸ್ಸಿಗೆ ಆಘಾತವಾಗದಂತೆ ವರ್ತಿಸಲಿ. ಇಂತಹವರಿಗೆ ಎಐಸಿಸಿ ಸೂಕ್ತ ಸೂಚನೆಗಳನ್ನು ನೀಡಬೇಕೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಮೂಲಕ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಲ್ಲಿ ವಿನಂತಿಸಲಾಗುವುದು ಎಂದು ಗ್ರಾಪಂ ಅಧ್ಯಕ್ಷೆ ಚೈತ್ರ ಆರ್. ಮೋಹನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.