ಶೋಭಾ ಮಳವಳ್ಳಿ ಟಿಪ್ಪಣಿ; 13 ಮಹಿಳೆಯರ ಬರ್ಬರ ಹತ್ಯೆ- 7 ಹಸುಗೂಸುಗಳ ಭೀಕರ ಕೊಲೆ! ಏನಿದು? ನಡೆದಿದ್ದೆಲ್ಲಿ?
ಶೋಭಾ ಮಳವಳ್ಳಿ ಟಿಪ್ಪಣಿ;
13 ಮಹಿಳೆಯರ ಬರ್ಬರ ಹತ್ಯೆ- 7 ಹಸುಗೂಸುಗಳ ಭೀಕರ ಕೊಲೆ!
ಏನಿದು? ನಡೆದಿದ್ದೆಲ್ಲಿ?
ವೃದ್ಧೆ ತಾಯಿ, ಮಧ್ಯ ವಯಸ್ಕ ಮಗ, ಮನೆಗೊಬ್ಬ ಅಡುಗೆ ಕೆಲಸಗಾರ. ಸುಮಾರು 20 ವರ್ಷ ಆ ಮನೆಯಲ್ಲಿ ವಾಸವಿದ್ದ ಆತ 13 ಮಹಿಳೆಯರನ್ನು ಬರ್ಬರವಾಗಿ ಹತ್ಯೆಗೈಯುತ್ತಾನೆ. ಅದರಲ್ಲಿ 9 ಮಹಿಳೆಯರನ್ನು ಅಡುಗೆ ಕೆಲಸಗಾರ ಅತ್ಯಾ**ಚಾರವೆಸಗಿ ಕೊಲ್ಲುತ್ತಾನೆ. ಅವನಿಗೊಬ್ಬಳು ಚಿಕ್ಕವಯಸ್ಸಿನ ಹೆಂಡ್ತಿ. ಆಕೆಗೆ ಜನಿಸಿದ 8 ಮಕ್ಕಳ ಪೈಕಿ 7 ಹಸುಗೂಸುಗಳನ್ನು ಹುಟ್ಟುತ್ತಲೇ ಜೀವತೆಗೆಯುತ್ತಾನೆ..
ಕಥೆ ಕೇಳುತ್ತಿದ್ದಂತೆ ಮೈ ಜುಮ್ ಅನ್ನಿಸಿದ್ರೆ, ಇನ್ನು ಸಿನಿಮಾ ನೋಡಿದ್ರೆ, ನಿಮ್ಮ ಹೃದಯ ಭಯದಿಂದ ನಡುಗುವುದು ಪಕ್ಕಾ.
2020ರಲ್ಲಿ ರಿಲೀಸ್ ಆದ ಹಿಂದಿಯ
ಹಾರರ್, ಥ್ರಿಲರ್ ಸಿನಿಮಾ ‘ವೆಲ್ಕಮ್ ಹೋಂ’ ಚಿತ್ರದ ಕಥೆ ಇದು. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ನೈಜ ಘಟನೆ ಆಧರಿಸಿ ನಿರ್ದೇಶಕ ಪುಷ್ಕರ್ ಮಹಾಬಲ ಆಕ್ಷನ್ ಕಟ್ ಹೇಳಿದ ಚಿತ್ರವಿದು.
ಇಬ್ಬರು ಶಿಕ್ಷಕಿಯರು ಮನೆ, ಮನೆ ಗಣತಿ ನಡೆಸಲು ಆ ಮನೆ ಬಾಗಿಲು ತಟ್ಟುವುದರೊಂದಿಗೆ ಚಿತ್ರ ತೆರೆದುಕೊಳ್ಳುತ್ತದೆ. ಊರ ಹೊರಗಿನ ಒಂಟಿ ಮನೆಯದು. ಅಲ್ಲಿ ಎಲ್ಲವೂ ಗುಪ್ತ್ ಗುಪ್ತ್. ಸಿಟಿಯಿಂದ ಜನಗಣತಿಗೆಂದು ಬರುವ ಅಂಜು ಮತ್ತು ನೇಹಾ ಎಂಬ ಇಬ್ಬರು ಶಿಕ್ಷಕಿಯರು, ಮನೆ ಹೊಕ್ಕುತ್ತಿದ್ದಂತೆ, ವೃದ್ಧೆಯ ನಡವಳಿಕೆ ವಿಚಿತ್ರ ಅನ್ನಿಸತೊಡಗುತ್ತದೆ. ಅವರ ಮಾತು, ಕತೆ, ಗರ್ಭಿಣಿ ಯುವತಿ, ಮನೆಗೆಲಸದವನ ಸ್ಯಾಡಿಸ್ಟ್ ನಗು.. ಶಿಕ್ಷಕಿಯರ ಅನುಮಾನ ಹೆಚ್ಚಿಸುತ್ತಾ ಹೋಗುತ್ತದೆ. ಇಬ್ಬರ ಪೈಕಿ ಅಂಜುಗೆ ಮನೆಯವರ ಬಗ್ಗೆ ಸಂಶಯ ಮೂಡತೊಡಗುತ್ತದೆ. ಮತ್ತೊಬ್ಬ ಶಿಕ್ಷಕಿ ನೇಹಾ ಜತೆ ತನ್ನ ಅನುಮಾನ ಹಂಚಿಕೊಂಡರೂ ಸಮಾಧಾನವಾಗದೇ, ಮಾರನೇ ದಿನ ಮತ್ತೆ ಆ ಮನೆಗೆ ಬರುತ್ತಾಳೆ. ಅಲ್ಲಿಂದ ಆ ಕುಟುಂಬ ಸದಸ್ಯರ ವಿಕೃತ ಮನಸ್ಥಿತಿ, ರಕ್ಕಸಿ ಕೃತ್ಯಗಳು ಒಂದೊಂದಾಗಿ ತೆರೆದುಕೊಳ್ಳುತ್ತದೆ. ಇದಾವುದರ ಬಗ್ಗೆಯೂ ಎಳ್ಳಷ್ಟೂ ಮಾಹಿತಿ ಇಲ್ಲದ ನೇಹಾ ಮತ್ತು ಅಂಜು, ಸ್ಯಾಡಿಸ್ಟ್ಗಳ ಬಲೆಯೊಳಗೆ ಸಿಕ್ಕಿಬಿದ್ದಿರುತ್ತಾರೆ. ಮನೆಯ ಹಿರಿಯ ಘನಶ್ಯಾಮ್, ಕೆಲಸಗಾರ ಭೋಲಾ ವರ್ತನೆ ನೋಡಿ ಬೆಚ್ಚಿಬೀಳುತ್ತಾರೆ. ಇಲ್ಲಿದ್ದರೆ ಅಪಾಯ ಎಂದು ಅರಿತು ತಪ್ಪಿಸಿಕೊಳ್ಳುವ ಯತ್ನದಲ್ಲಿ ಘನಶ್ಯಾಮ್ ಕೈಗೆ ಸಿಕ್ಕಿಬಿದ್ದು ಪಾಳುಬಿದ್ದ ಮನೆ ಸೇರುತ್ತಾರೆ. ಆ ಮನೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅಂಜು ಘನಶ್ಯಾಮ್ನಿಂದ ತೀವ್ರ ಹಲ್ಲೆಗೊಳಗಾಗುತ್ತಾಳೆ, ನೇಹಾ, ಭೋಲಾನ ಮೈದಾಹಕ್ಕೆ ಸಿಕ್ಕಿ ನಲುಗಿ ಹೋಗ್ತಾಳೆ. ವಿಕೃತರ ಕೈಯಿಂದ ಅಂಜು- ನೇಹಾ ಬಚಾವ್ ಆದ್ರಾ ? ಘನ್ಶ್ಯಾಮ್, ಭೋಲಾ ಏನಾದ ? ಗರ್ಭಿಣಿ ಪ್ರೇರಣಾ ಕಥೆ ಏನು? ಎಲ್ಲದ್ದಕ್ಕೂ ಥ್ರಿಲ್ಲಿಂಗ್ ಉತ್ತರ ಕೊಡುತ್ತೆ ‘ವೆಲ್ಕಮ್ ಹೋಮ್’ ಚಿತ್ರ.
ನಾಲ್ಕೈದು ಪಾತ್ರಧಾರಿಗಳು, ಒಂಟಿ ಮನೆ, ಹೊರಗೆ ಸೀಕ್ರೆಟ್ ಮನೆ, ಕ್ಷಣ ಕ್ಷಣಕ್ಕೂ ನಿಮ್ಮನ್ನು ಬೆಚ್ಚಿಬೀಳಿಸುವ ಘಟನೆಗಳು, ಘನಶ್ಯಾಮ್ನ ತಣ್ಣಗಿನ ಕ್ರೌರ್ಯ ಎದೆನಡುಗಿಸುತ್ತದೆ. ಹೆಣ್ಮಕ್ಕಳ ಮೇಲಿನ ದೌರ್ಜನ್ಯವಂತೂ ರಕ್ತ ಕುದಿಸುತ್ತದೆ. ಹಸಿಹಸಿ ಕ್ರೌರ್ಯದ ದೃಶ್ಯಗಳು ಕ್ಷಣ ನಡುಗಿಸಿಬಿಡುತ್ತದೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದ ನೈಜ ಘಟನೆ ಆಧರಿಸಿ ನಿರ್ದೇಶಕ ಪುಷ್ಕರ್ ಮಹಾಬಲ, ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಚಿತ್ರ ನಿರ್ದೇಶಿಸಿದ್ದಾರೆ.
20 ವರ್ಷದಲ್ಲಿ 13 ಮಹಿಳೆಯರನ್ನು ಕೊಂದು, ಅದರಲ್ಲಿ 9 ಮಹಿಳೆಯರನ್ನು ರೇ—ಪ್ ಮಾಡಿ, 7 ನವಜಾತ ಶಿಶುಗಳ ಜೀವ ತೆಗೆದ ವಿಕೃತರು, ಜನಸಾಮಾನ್ಯರ ನಡುವೆ ಬದುಕಿದ್ದು ಹೇಗೆಂಬುದು ಅಚ್ಚರಿ ಮೂಡಿಸುತ್ತದೆ. ಏನೇ ಆದರೂ, ಈ ಥ್ರಿಲ್ಲರ್, ಹಾರರ್ ಚಿತ್ರ ನೋಡೋದಕ್ಕೆ ಗುಂಡಿಗೆ ಗಟ್ಟಿ ಇರಬೇಕು.. ಸದ್ಯಕ್ಕೆ ಯಾವ ಒಟಿಟಿಯಲ್ಲೂ ಈ ಚಿತ್ರ ಇಲ್ಲ.
ಯೂಟ್ಯೂಬ್ನಲ್ಲಿದೆ ನೋಡಿ..
#ಶೋಭಾಮಳವಳ್ಳಿ
#welcomehome
#horrormovieinhindi