ಜನವರಿ, 17 ಮತ್ತು 18 ರಂದು ಶಿವಮೊಗ್ಗದ ಫ್ರೀಡಂ ಪಾರ್ಕಲ್ಲಿ  ವೀಣಾ ತ್ರಿಶತೋತ್ಸವ-2026* ನಾದ.. ನಿನಾದ.. ಝೇಂಕಾರ.. : ಏಕ ನಾದಂ ಬಹು ವೀಣಾಃ

*ಜನವರಿ, 17 ಮತ್ತು 18 ರಂದು ಶಿವಮೊಗ್ಗದ ಫ್ರೀಡಂ ಪಾರ್ಕಲ್ಲಿ  ವೀಣಾ ತ್ರಿಶತೋತ್ಸವ-2026*

ನಾದ.. ನಿನಾದ.. ಝೇಂಕಾರ.. :

ಏಕ ನಾದಂ ಬಹು ವೀಣಾಃ

ನಗರದ ತಿಲಕ್‌ನಗರದಲ್ಲಿರುವ ಪ್ರತಿಷ್ಟಿತ ಶ್ರೀ ಸರಸ್ವತಿ ಸಂಗೀತ ವಿದ್ಯಾಲಯ, ಸುಶ್ರಾವ್ಯ ಮತ್ತು ಸಾಯಿಶೃತಿ ಸಂಗೀತ ವಿದ್ಯಾಲಯ ಇವರುಗಳ ಸಹಯೋಗದಲ್ಲಿ ನಗರದ ಅಲ್ಲಮಪ್ರಭು (ಫ್ರೀಡಂ ಪಾರ್ಕ್) ನಲ್ಲಿ ಶ್ರೀ ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವದ ಅಂಗವಾಗಿ ಜನವರಿ 17 ರ ಶನಿವಾರ ಮತ್ತು 18 ರ ಭಾನುವಾರ “ವೀಣಾ ತ್ರಿಶತೋತ್ಸವ-2026” ವೀಣಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕರಾದ ವಿದುಷಿ ಶ್ರೀಮತಿ ಬಿ.ಕೆ. ವಿಜಯಲಕ್ಷ್ಮಿ ರಾಘು ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅವರು, ಶಿವಮೊಗ್ಗದಲ್ಲಿಯೇ ಪ್ರಥಮ ಬಾರಿಗೆ “301 ವೀಣಾ ನಾದ.. ನಿನಾದ.. ಝೇಂಕಾರ..” ಎಂಬ ವಿಶೇಷ ವೀಣಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಜ. 17 ರ ಶನಿವಾರ ಸಂಜೆ 6-00 ಗಂಟೆಗೆ “ಸರಿಗಮಪ” ಕಾರ್ಯಕ್ರಮದ ಮಾರ್ಗದರ್ಶಕರಾದ ವಿ|| ಶ್ರೀಮತಿ ಲಕ್ಷ್ಮಿ ನಾಗರಾಜ್ ಮತ್ತು ವಿ|| ಶ್ರೀಮತಿ ಇಂದು ನಾಗರಾಜ್ ರವರಿಂದ “ಗಾಯನೋತ್ಸವ” ನಡೆಯಲಿದ್ದು, ಇವರಿಗೆ ವಯೋಲಿನ್‌ನಲ್ಲಿ ವಿ|| ಹೊಸಳ್ಳಿ ರಘುರಾಂ, ಮೃದಂಗದಲ್ಲಿ ವಿ|| ಕೇಶವದತ್ತ, ಘಟಂ ನಲ್ಲಿ ವಿ| ಮಂಜುನಾಥ್ ವಾದ್ಯ ಸಹಕಾರ ನೀಡಲಿದ್ದಾರೆ ಎಂದು ತಿಳಿಸಿದರು.

ಜ. 18 ರ ಭಾನುವಾರ ಸಂಜೆ 5-00 ಗಂಟೆಗೆ ಶಿವಮೊಗ್ಗ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಒಂದೇ ವೇದಿಕೆಯಲ್ಲಿ ನಡೆಯಲಿರುವ “ವೀಣಾ ತ್ರಿಶತೋತ್ಸವ 301 ವೀಣಾ ನಾದ ಝೇಂಕಾರ” ಕಾರ್ಯಕ್ರಮವನ್ನು ಮೈಸೂರು ರಾಜವಂಶಸ್ಥ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಖ್ಯಾತ ವೀಣಾ ವಾದಕರಾದ ರೇವತಿ ಕಾಮತ್ ಹಾಗೂ ಗೀತಾ ರಮಾನಂದ್ ಆಗಮಿಸಲಿದ್ದಾರೆ.

ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ವಿ|| ಬಿ.ಕೆ. ವಿಜಯಲಕ್ಷ್ಮಿ ರಾಘು, ಎಮ್ಮೆಲ್ಸಿ ಡಿ.ಎಸ್. ಅರುಣ್, ಸಂಸ್ಥೆಯ ಗೌರವಾಧ್ಯಕ್ಷರಾದ ಟಿ.ಎಸ್. ವೆಂಕಟರಾಘು, ಸುಶ್ರಾವ್ಯ ಸಂಗೀತ ವಿದ್ಯಾಲಯದ ಜಯಶ್ರೀ ನಾಗರಾಜ್, ಸಾಯಿಶೃತಿ ಸಂಗೀತ ವಿದ್ಯಾಲಯದ ಪದ್ಮಿನಿ ಶ್ರೀಧರ್ ಉಪಸ್ಥಿತರಿರಲಿದ್ದಾರೆ ಎಂದರು.

ಸಂಸ್ಥೆ ನಡೆದು ಬಂದ ದಾರಿ :

2000 ನೇ ಇಸವಿಯಲ್ಲಿ ವೀಣಾ ವಿದುಷಿ ಶ್ರೀಮತಿ ಬಿ.ಕೆ. ವಿಜಯಲಕ್ಷ್ಮಿ ರಾಘುರವರು ಶ್ರೀ ಸರಸ್ವತಿ ಸಂಗೀತ ವಿದ್ಯಾಲಯ ಎಂಬ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ಮತ್ತು ವೀಣಾ ಕಲಿಕೆಯ ಸಂಗೀತ ಶಾಲೆಯನ್ನು ಸ್ಥಾಪಿಸಿದರು. ಶಾಸ್ತ್ರೀಯ ಸಂಗೀತದ ಶ್ರೀಮಂತ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ಕಳೆದ 25 ವರ್ಸಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣವನ್ನು ನೀಡುತ್ತಿದ್ದಾರೆ. ವಿಶೇಷವಾಗಿ ಕಲೆಯನ್ನು ಉಳಿಸುವುದು, ಉತ್ತೇಜಿಸುವುದು ಮತ್ತು ಮುಂದಿನ ತಲೆಮಾರುಗಳಿಗೆ ತಲುಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಶ್ರೀಮಂತ ಪರಂಪರೆಯನ್ನು ಆಧರಿಸಿಕೊಂಡು, ಎಲ್ಲಾ ವಯಸ್ಸಿನ ವಿದ್ಯಾರ್ಥಿಗಳಿಗೆ ಶಿಸ್ತುಬದ್ಧ, ಸಮಗ್ರವಾದ ತರಬೇತಿಯನ್ನು ಸಂಸ್ಥೆ ನೀಡುತ್ತಿದೆ. ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯ ಇವರು ನಡೆಸುವ ಸಂಗೀತ ಪರೀಕ್ಷೆಯಲ್ಲಿ (ಜ್ಯೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆ) ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ವಿ|| ಬಿ.ಕೆ. ವಿಜಯಲಕ್ಷ್ಮಿ ರಾಘು ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ರಾಜ್ಯದ ವಿವಿಧ ವೇದಿಕೆಗಳಲ್ಲಿ ಹಾಗೂ ರಾಷ್ಟಿçÃಯ ಮಟ್ಟದಲ್ಲಿ ಅನೇಕ ಕಾರ್ಯಕ್ರಮಗಳನ್ನು, ಸ್ಪರ್ಧೆಗಳನ್ನು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿ ಯಶಸ್ಸನ್ನು ಸಾಧಿಸಿದ್ದಾರೆ. ಹಲವಾರು ದ್ವಂದ್ವ ವೀಣಾ ವಾದನ, ವೀಣಾ ತ್ರಯ, ಪಂಚ ವೀಣಾ ವಾದನ, ಸಪ್ತ ವೀಣಾ ವಾದನ, ನವ ವೀಣಾ ವಾದನ, ದಶ ವೀಣಾ ವಾದನ, ಅಷ್ಟೋತ್ತರ ವೀಣಾ ವಾದನ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ವಿದುಷಿ ಶ್ರೀಮತಿ ಬಿ.ಕೆ. ವಿಜಯಲಕ್ಷ್ಮಿ ರಾಘು :

ಇವರು ಭದ್ರಾವತಿ ಆಕಾಶವಾಣಿ – ಬಿ ಹೈಗ್ರೇಡ್ ಕಲಾವಿದರಾಗಿದ್ದು, ಮೈಸೂರಿನ ವಿ|| ಎಸ್. ರಾಜಲಕ್ಷ್ಮಿ, ವಿ|| ಬೆಳಕವಾಡಿ ಆರ್. ಶ್ರೀಧರ್ ಹಾಗೂ ವಿ|| ಸಿ.ಆರ್.ರಾಮಚಂದ್ರರವರ ಬಳಿ ವೀಣಾವಾದನವನ್ನು ಅಭ್ಯಾಸ ಮಾಡಿದ್ದಾರೆ. ಇವರ ತಂದೆ ಶ್ರೀ ಬಿ. ಕೃಷ್ಣಸ್ವಾಮಿ ತಾಯಿ ಶ್ರೀಮತಿ ಬಿ.ಕೆ. ನಾಗರತ್ನ ರವರ ಸಂಪೂರ್ಣ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ವಿ|| ಬಿ.ಕೆ. ವಿಜಯಲಕ್ಷ್ಮಿ ರಾಘುರವರ ಅಭಿಪ್ರಾಯ.

ಪಡೆದ ಪ್ರಶಸ್ತಿಗಳು-ಪುರಸ್ಕಾರಗಳು :

ತ್ಯಾಗರಾಜ ಮಹಿಳಾ ಮಂಡಳಿಯಿಂದ ‘ನಾದಸಿರಿ’, ರಂಭಾಪುರಿ ಸ್ವಾಮೀಜಿಯಿಂದ ‘ನಾದಕಲಾ ಚಂದ್ರಿಕೆ’, ಮಂತ್ರಾಲಯ ಸ್ವಾಮೀಜಿಗಳಿಂದ ‘ಶ್ರೀ ರಾಘವೇಂದ್ರ ಸದ್ಭಾವನಾ ಪ್ರಶಸ್ತಿ’, ‘ನಾದ ಸಿಂಚನ’, ‘ನಾದ ತನ್ಮಯ’, ‘ನಾದೋಪಸಾನ’, ಸರ್ಜಿ ಫೌಂಡೇಶನ್‌ರವರಿಂದ ‘ನೀವು ನಮ್ಮ ಹೆಮ್ಮೆ ಪ್ರಶಸ್ತಿ’, ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವತಿಯಿಂದ ‘ಲಯಶ್ರೀ’, ಹೊನ್ನಾಳಿಯ ನಾದನಿದಿ ಸಂಸ್ಥೆಯಿಂದ ‘ಧಾರಿಣಿ ಪುರಸ್ಕಾರ-2023’, ಅನಂತ ಸಂಗೀತ ಸಭಾ ಸಂಸ್ಥೆಯಿಂದ ‘ಅನಂತ ವೀಣಾ ವಾರಿಧಿ’, ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ಸಂಸ್ಥೆಯಿಂದ ‘ಕನ್ನಡ ಸಿರಿ ಪ್ರಶಸ್ತಿ-2023’, ಬೆಂಗಳೂರಿನ ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ ಸಂಸ್ಥೆಯಿಂದ ‘ಸಂಗೀತ ರತ್ನ, ರಾಜ್ಯೋತ್ಸವ ಪ್ರಶಸ್ತಿ-2025’ ಗಳಿಗೆ ವಿ|| ಶ್ರೀಮತಿ ಬಿ.ಕೆ. ವಿಜಯಲಕ್ಷ್ಮಿ ರಾಘುರವರು ಭಾಜನರಾಗಿದ್ದಾರೆ. ಇವರು ‘ಗೀತಗುಚ್ಚ, ಸ್ತೋತ್ರಮಾಲಾ, ಪರಿವಾದಿನಿ ಹಾಗೂ ಚಿತ್ರಮಾಲಾ’ ಧ್ವನಿ ಸುರುಳಿಗಳನ್ನು ಲೋಕಾರ್ಪಣೆ ಮಾಡಿದ್ದಾರೆ.

ಇದೂವರೆಗೂ ನಡೆಸಿದ ಕಾರ್ಯಕ್ರಮಗಳು :

ಸಹ್ಯಾದ್ರಿ ಉತ್ಸವ, ಲಕ್ಕುಂಡಿ ಉತ್ಸವ, ಕೆಳದಿ ಉತ್ಸವ, ಆರ್ಟ್ ಆಫ್ ಲಿವಿಂಗ್‌ನ ರಜತ ಮಹೋತ್ಸವ, ಸುವರ್ಣ ಕರ್ನಾಟಕ ಮಹೋತ್ಸವ, ಶಿವಮೊಗ್ಗದ ಕನ್ನಡ ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಸಾಂಸ್ಕೃತಿಕ ದಿಬ್ಬಣ, ರಾಜ್ಯಮಟ್ಟದ ಅರಬಿಂದೋ ಸೊಸೈಟಿ ಸಮ್ಮೇಳನ, ಬೆಂಗಳೂರಿನ ಗರುಡ ಹಬ್ಬ, ಕರ್ನಾಟಕ ಕಲಾ ಉತ್ಸವ, ಓಝೋನ್ ಕಂ. ಚನೈ, ಮಡಿಕೇರಿ ದಸರಾ ಉತ್ಸವ, ನವರಾತ್ರಿ ವೀಣಾ ಉತ್ಸವ, ಮಲೆನಾಡು ಉತ್ಸವ, ಕೇರಳದ ಕಲಾ ಉತ್ಸವ, ಬೆಂಗಳೂರಿನ ಚೆಂಚುರಿ ಕ್ಲಬ್, ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಮೈಸೂರು ದಸರಾ ಉತ್ಸವ, ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ, ಶಿವಮೊಗ್ಗದ ರವೀಂದ್ರನಗರದ ಶ್ರೀ ಪ್ರಸನ್ನ ಗಣಪತಿ (ಬಲಮುರಿ) ದೇವಸ್ಥಾನ, ದುರ್ಗಿಗುಡಿ ರಾಮೋತ್ಸವ, 1975 ರಲ್ಲಿ ನಡೆದ ರಣಜಿ ಟ್ರೋಫಿ-ಸಾಂಸ್ಕೃತಿಕ ಕಾರ್ಯಕ್ರಮ, 1974 ರಲ್ಲಿ ನಡೆದ ವಿ.ಐ.ಎಸ್.ಎಲ್. ಸಂಸ್ಥಾಪಕರ ದಿನಾಚರಣೆ, ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ, ಮಂತ್ರಾಲಯ-25 ವೀಣೆಗಳ ಕಾರ್ಯಕ್ರಮ, ಚಿತ್ರದುರ್ಗದ ವಿ.ಹಿ.ಪ. ಸಮರ್ಪಣಾ ಕಾರ್ಯಕ್ರಮ, ಸಿಂಘೋನಿಯ ಆರ್ಟ್ ಆಫ್ ಲಿವಿಂಗ್‌ನಲ್ಲಿ ಕಾರ್ಯಕ್ರಮ, ಶಿವಮೊಗ್ಗ ದಸರಾ ಉತ್ಸವ, ದೆಹಲಿ ಕನ್ನಡ ಸಂಘದಲ್ಲಿ ವೀಣಾ ಕಾರ್ಯಕ್ರಮ, ಅಹಮದಾಬಾದ್, ಸೂರತ್, ಬರೋಡಾದಲ್ಲಿ ವೀಣಾ ಕಾರ್ಯಕ್ರಮ, 2008 ರಲ್ಲಿ ಸಾಗರ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದಲ್ಲಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ಇದೂವರೆಗೂ ನಡೆಸಿದ ಸಭಾ ಕಾರ್ಯಕ್ರಮಗಳು :

ಮೈಸೂರಿನ ಬಿಡಾರಂ ಕೃಷ್ಣಪ್ಪ ರಾಮಮಂದಿರ ಕೃಷ್ಣ ಗಾನ ಸಭಾ, ಶೃತಿ ಮಂಜರಿ ಪ್ರತಿಷ್ಟಾನ, ಲಯವಿದ್ಯಾ ಪ್ರತಿಷ್ಟಾನ, ಬೆಂಗಳೂರಿನ ಸಮನ್ವಯ ಕಲಾಕೇಂದ್ರ, ನಾದೋಪಾಸನಾ ಸಭಾ, ಗಿರಿನಗರ ಸಂಗೀತ ಸಭಾ, ಶಿವಮೊಗ್ಗದ ಗುರುಗುಹ ಸಂಗೀತ ಸಭಾ, ಅಭಿರುಚಿಯ ನಾದ ಸುಧಾ, ನಾದ ತರಂಗಿಣಿ ಸಂಗೀತ ಸಭಾ, ಗಾನ ಸುಧಾ, ಶ್ರೀಮಾತಾ ಸಂಗೀತ ಸಭಾ, ಉಡುಪಿಯ ರಾಗಸುಧಾ ರಾಜಾಂಗಣ, ಮೈಸೂರಿನ ಶಾರದಾ ಪ್ರತಿಷ್ಟಾನ ಟ್ರಸ್ಟ್, ಮಲ್ಲೇಶ್ವರಂ ಸಂಗೀತ ಸಭಾ, ಶಿಕಾರಿಪುರದ ರಂಜನಿ ಕಲಾ ಕೇಂದ್ರ, ಶಿವಮೊಗ್ಗದ ವಿದ್ಯಾ ಗಣಪತಿ ಅಮೃತ ಮಹೋತ್ಸವದಲ್ಲಿ ವಿ|| ಶ್ರೀಮತಿ ಬಿ.ಕೆ. ವಿಜಯಲಕ್ಷ್ಮಿ ರಾಘು ರವರು ಸಭಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ.

ದೃಶ್ಯ ಮಾಧ್ಯಮಗಳಲ್ಲಿ :

ಉದಯ ಟಿವಿಯಲ್ಲಿ ‘ನಾದ ಕಾರ್ಯಕ್ರಮ”, ಚಂದನ ಟಿವಿಯಲ್ಲಿ ‘ರಾಗ ಮಂಟಪ’, ಈ ಟಿವಿ (ಕನ್ನಡ) ಯಲ್ಲಿ ‘ಸಂವೇದನಾ ಕಾರ್ಯಕ್ರಮ” ಗಳನ್ನು ನಡೆಸಿಕೊಟ್ಟಿದ್ದಾರೆ.

ಶಿವಮೊಗ್ಗದ ಅಲ್ಲಮಪ್ರಭು ಮೈದಾನ (ಫ್ರೀಡಂ ಪಾರ್ಕ್) ನಲ್ಲಿ ಎರಡು ದಿನಗಳ ಕಾಲ ನಗರದ ಸಂಗೀತ ಪ್ರಿಯರಿಗೆ 301 ವೀಣಾನಾದದ ಮೂಲಕ ಸಂಗೀತ ರಸದೌತಣ ನೀಡುವ “ವೀಣಾ ತ್ರಿಶತೋತ್ಸವ-2026” ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಸ್ಥೆಯ ಸಂಸ್ಥಾಪಕರಾದ ವಿದುಷಿ ಶ್ರೀಮತಿ ಬಿ.ಕೆ. ವಿಜಯಲಕ್ಷ್ಮಿ ರಾಘು ಕೋರಿದ್ದಾರೆ.

– ಮುರುಳೀಧರ್ ಹೆಚ್.ಸಿ.
ಪತ್ರಕರ್ತರು, ಶಿವಮೊಗ್ಗ.