ಭಾಗ-1**KSRTC ಶಿವಮೊಗ್ಗ ವಿಭಾಗದಲ್ಲಿ ಗೋಲ್ ಮಾಲ್!**ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಕುಮಾರ್ ವರ್ಗಾವಣೆ ದಂಧೆಗಿಳಿದರಾ?**ನಿಂತ ಕೆಂಪು ಬಸ್ಸುಗಳ ದುರಂತ ಕಥೆ ಕೇಳುವವರು ಯಾರು?**ಸತ್ತ ಚಾಲಕನ ಹೆಸರಲ್ಲೂ ಎರಡು ತಿಂಗಳ ಸಂಬಳ ಮುಕ್ಕಿದ್ದು ಯಾರು?*

*ಭಾಗ-1*

*KSRTC ಶಿವಮೊಗ್ಗ ವಿಭಾಗದಲ್ಲಿ ಗೋಲ್ ಮಾಲ್!*

*ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಕುಮಾರ್ ವರ್ಗಾವಣೆ ದಂಧೆಗಿಳಿದರಾ?*

*ನಿಂತ ಕೆಂಪು ಬಸ್ಸುಗಳ ದುರಂತ ಕಥೆ ಕೇಳುವವರು ಯಾರು?*

*ಸತ್ತ ಚಾಲಕನ ಹೆಸರಲ್ಲೂ ಎರಡು ತಿಂಗಳ ಸಂಬಳ ಮುಕ್ಕಿದ್ದು ಯಾರು?*

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಶಿವಮೊಗ್ಗ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಕುಮಾರ್ ಶಿವಮೊಗ್ಗಕ್ಕೆ ಮತ್ತೆ ಬಂದಿದ್ದೇ ತಡ ಇಡೀ ಕೆಂಪು ಬಸ್ಸಿನ ವ್ಯವಸ್ಥೆ ಹದಗೆಟ್ಟು ಹೋಗಿದೆ! ಓಡಾಡುವ ಬಸ್ಸುಗಳು ಓಡಾಡುತ್ತಿಲ್ಲ…ಕೆಲಸ ಮಾಡಬೇಕಾದ ಸಿಬ್ಬಂದಿ ವರ್ಗಾವಣೆ ಹುಚ್ಚಿನಲ್ಲಿ ಕಾಲ ತಳ್ಳುವಂತಾಗಿದೆ!

ಕಳೆದ ಜನವರಿ 10 ರಂದು ನೋಟಿಸ್ ಬೋರ್ಡಿನ ಮೇಲೆ *ಚಾಲನಾ ಸಿಬ್ಬಂದಿಗಳ ಗಮನಕ್ಕೆ* ಎಂಬ ಫಲಕವೊಂದು ಕೆಎಸ್ ಆರ್ ಟಿಸಿ ಶಿವಮೊಗ್ಗ ವಿಭಾಗದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದೆ. ಅರ್ಧ ಲಕ್ಷದಷ್ಟು ಕಾಂಚಾಣ ಹಿಡಿದು ಹೋದರಷ್ಟೇ ವರ್ಗಾವಣೆ ಭಾಗ್ಯ ಲಭಿಸುತ್ತಿದೆ ಎಂಬುದು ಗಂಭೀರ ಆರೋಪ.
ಯಾವ ಡಿಪೋಗೆ ಬೇಕಾದರೂ ಸೈ ವರ್ಗಾವಣೆ ಭಾಗ್ಯ ಈ ಮೂಲಕ ಸಿಗುತ್ತೆ ಎಂಬ ಗುಸು ಗುಸು ಫರ್ಮಾನನ್ನು ಕೂಡ ಹೊರಡಿಸಲಾಗಿದೆ. ವಿಭಾಗೀಯ ನಿಯಂತ್ರಣಾಧಿಕಾರಿಯ ಕೆಲ ಚೇಲಾಗಳು ಚೀಲಾ ಹಿಡಿದು ವರ್ಗಾವಣೆ ದಂಧೆ ಹಿಂದೆ ಮುಗಿಬಿದ್ದಿರೋ ಮಾಹಿತಿಗಳು ಬರುತ್ತಿವೆ.

ಶಿವಮೊಗ್ಗ ವಿಭಾಗದ ಡಿಪೋಗಳಲ್ಲೆಲ್ಲ ಕನಿಷ್ಠ 25-30 ಬಸ್ಸುಗಳು ಕೆಲಸಗಾರರಿಲ್ಲದೇ, ಸುಸ್ಥಿತಿಗೆ ಒಳಪಡದೇ ನಿಂತು ಕೊಳೆಯುತ್ತಿವೆ. ಕೆ ಎಸ್ ಆರ್ ಟಿ ಸಿ ಸಂಸ್ಥೆ ಹಾಳಾದ್ರೂ ಪರವಾಗಿಲ್ಲ, ತಾವು ಮಾತ್ರ ದುಂಡಗಾಗಬೇಕೆಂದು ಅಧಿಕಾರಿಗಳು ಬಯಸಿದಂತಿದೆ!

ಶಿವಮೊಗ್ಗವೂ ಸೇರಿದಂತೆ ಸಾಗರ, ಹೊನ್ನಾಳಿ, ಭದ್ರಾವತಿ ಡಿಪೋಗಳಲ್ಲಿ ಸ್ಮಶಾನ ಮೌನ ಆವರಿಸಿದ್ದರ ಹಿಂದೆ ಯಾವ ಅಧಿಕಾರಿಯ ಕೈವಾಡವಿದೆ ಎಂಬುದನ್ನು ಸಂಸ್ಥೆಯ ಹಿರಿಯ ಅಧಿಕಾರಿಗಳು ತನಿಖೆಗೆ ಒಳಪಡಿಸಿದರೆ ಸತ್ಯ ಏನೆಂಬುದು ಗೊತ್ತಾಗಬಹುದು.ಇದಕ್ಕೆಲ್ಲ ಮುಖ್ಯ ಕಾರಣ, ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಕುಮಾರ್, ಡಿಪೋಗಳಿಗೆ ಬೇಕಾದ ಅಗತ್ಯ ಸಿಬ್ಬಂದಿಯನ್ನು ಇಟ್ಟುಕೊಳ್ಳದೇ ಚಾಲಕ, ನಿರ್ವಾಹಕ, ಮೆಕ್ಯಾನಿಕ್ ಗಳನ್ನು ಎಗ್ಗಿಲ್ಲದೇ ವರ್ಗಾಯಿಸುತ್ತಿರುವುದೇ ಆಗಿದೆ.

ಕೆಂಪು ಬಸ್ ಗಳ ಸ್ಥಿತಿ ಹೇಗಿದೆ ಎಂದರೆ, ಶಿವಮೊಗ್ಗ ಡಿಪೋದ ಕೆ ಎ- 1296 ನಂಬರಿನ ಬಸ್ ಎರಡ್ಮೂರು ಸಾರಿ ಡಿಪೋ ಒಳಗೇ ಬ್ರೇಕ್ ಫೇಲಾಗಿ ಅಪಘಾತಕ್ಕೊಳಗಾಗಿದೆ. ಸೆಕ್ಯೂರಿಟಿ ರೂಮಿಗೊಮ್ಮೆ ಈ ಬಸ್ ನುಗ್ಗಿದ್ದರೆ, ಮತ್ತೊಮ್ಮೆ ಶೌಚಾಲಯದ ಮೇಲೆ ತನ್ನ ಮೈ ಕೊಡವಿಕೊಂಡಿತ್ತು. ಇಂಥ ಉದಾಹರಣೆಗಳು ಹತ್ತು ಹಲವು ಇಲ್ಲಿವೆ.

ಸಾಮಾನ್ಯ ಕೆಂಪು ಬಸ್ ಗಳ ಜೊತೆ ವೋಲ್ವೋ ಬಸ್ಸುಗಳೂ ನಿಂತಿರುವುದೇ ದುರಂತ. ಲೈನ್ ಗೆ ಹೋಗಬೇಕಾದ ಬಹಳಷ್ಟು ಬಸ್ಸುಗಳು ಹೋಗುತ್ತಿಲ್ಲ. ಶಿವಮೊಗ್ಗ ನಗರ ಸಂಚಾರ ನಿಂತು ಬಹಳ ಕಾಲವೇ ಆಗಿದೆ.

ದಾವಣಗೆರೆ, ಚಿಕ್ಕಮಗಳೂರು, ಬಿಎಂಟಿಸಿ ಬೆಂಗಳೂರು ಸುತ್ತಿಕೊಂಡು ಬಂದ ಶಿವಮೊಗ್ಗ ವಿಭಾಗೀಯ ನಿಯಂತ್ರಣಾಧಿಕಾರಿ ನವೀನ್ ಕುಮಾರ್ ಬೆಂಗಳೂರಿನ ಕೇಂದ್ರ ಕಚೇರಿಗೆ ಡೆಪ್ಯೂಟಿ ಸಿಟಿಎಂ ಆಗಿ ಬಡ್ತಿ ಪಡೆದರೂ ನವೀನ್ ಆ ಬಡ್ತಿಗೆ ಒಗ್ಗಲಿಲ್ಲ. ಆರೇಳು ತಿಂಗಳ ಹಿಂದೆ ಬಡ್ತಿ ಭಾಗ್ಯ ಸಿಕ್ಕರೂ ನಿರಾಕರಿಸಿದ್ದರ ಹಿಂದೆ ಏನು ತಾನೇ ಕಾರಣ ಇರಲು ಸಾಧ್ಯ?

ಅಲ್ಲಿಂದ ಹೊಳಲ್ಕೆರೆಗೆ ವರ್ಗ ವಾಗಿದ್ದು, ಮತ್ತಲ್ಲಿಂದ ಪುತ್ತೂರಿಗೆ ಹೋಗಿ ಒಂದೇ ಒಂದು ದಿನ ಕೆಲಸ ಮಾಡಿ ಶಿವಮೊಗ್ಗ ವಿಭಾಗೀಯ ಕಚೇರಿಗೆ ಬಂದು ಕುಳಿತ ನವೀನ್ ಕುಮಾರ್ ಇಲ್ಲಿ ತಮ್ಮದೇ ಹುಲ್ಲುಗಾವಲು ಬೆಳೆದುಕೊಂಡಿದ್ದಾರೆ.

*ಗಂಭೀರ ದೂರುಗಳು*

ಹೊನ್ನಾಳಿ ಘಟಕದಲ್ಲಿ ಚಾಲಕನಾಗಿದ್ದ ರಿಯಾಝ್ ಅಹಮದ್ 2024ರ ಆಗಸ್ಟ್ ನಲ್ಲಿ ಮರಣ ಹೊಂದಿದರೂ ಆತನ ಹೆಸರಲ್ಲಿ ಸೆಪ್ಟೆಂಬರ್, ಅಕ್ಟೋಬರ್ ,2024 ರ ಸಂಬಳ ನೀಡಲಾಗಿದೆ. ಸತ್ತ ನಂತರವೂ ಸಂಬಳ ನೀಡಿದ ಶಿವಮೊಗ್ಗ ವಿಭಾಗದ ಡಿಸಿ ನವೀನ್ ಕುಮಾರ್ ವಿರುದ್ಧ ಇಲಾಖೆಯ ಹಿರಿಯ ಅಧಿಕಾರಿಗಳು ಯಾಕೆ ಕ್ರಮ ಕೈಗೊಂಡಿಲ್ಲ?

2024ರ ಡಿಸೆಂಬರ್ 15 ರಂದು ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಹೊನ್ನಾಳಿ ಘಟಕದಲ್ಲಿ ಎರಡು ಕೆಂಪು ಬಸ್ಸುಗಳನ್ನು ಬುಕ್ ಮಾಡಲಾಗಿತ್ತು. ನಂತರ ಅದನ್ನು ರದ್ದುಪಡಿಸಿ ಡಿಪಾಝಿಟ್ ಹಣ ವಾಪಸ್ ಪಡೆದಿದ್ದರು. ಆದರೆ, ಈ ಬಗ್ಗೆ ಯಾವುದೇ ಸಿಬ್ಬಂದಿಗೂ ಮಾಹಿತಿ ನೀಡಿರಲಿಲ್ಲ. ಎರಡೂ ಬಸ್ಸುಗಳು ಹೊನ್ನಾಳಿ ಘಟಕದಿಂದ ಶಿಕಾರಿಪುರಕ್ಕೆ ಅವತ್ತಿನ ದಿನ ಹೋಗಿ ಮತ್ತೆ ವಾಪಸ್ ಬಂದಿದ್ದವು. ಇದರಿಂದ ಹೋಗಿ ಬಂದ 80 ಕಿ.ಮೀ ಗೆ ಖರ್ಚಾದ ಡೀಸೆಲ್ ಗೆ ಯಾರು ಹೊಣೆ? ಆ ಎರಡು ಬಸ್ ಗಳು ಅವತ್ತು ರೂಟಿಗೆ ಹೋಗದೇ ಆದ ನಷ್ಟಕ್ಕೆ ಯಾರು ಹೊಣೆ? ಇದು ನವೀನ್ ಕುಮಾರ್ ರ ದಿವ್ಯ ನಿರ್ಲ್ಯಕ್ಕಕ್ಕೆ ಬಹಳ ದೊಡ್ಡ ಉದಾಹರಣೆ.

2024 ರ ಸೆಪ್ಟೆಂಬರ್ 23 ರಂದು ತಮ್ಮ ಸ್ವಂತ ಕೇಸಿಗೆ ಅಟೆಂಡ್ ಮಾಡಲು ಸಂಸ್ಥೆಯ ಕಾರನ್ನೇ ದುರುಪಯೋಗ ಮಾಡಿಕೊಂಡಿರುವ ನವೀನ್ ವಿರುದ್ಧ ಇಲಾಖೆ ಏನು ಕ್ರಮ ಕೈಗೊಳ್ಳಲಿದೆ?

ಕಳೆದ ಡಿಸೆಂಬರ್ 23 ರಂದು ಗ್ಯಾರಂಟಿ ಯೋಜನೆಗಳ ಸಭೆ ಇರುವುದಾಗಿ ವಿಭಾಗೀಯ ಕಚೇರಿಯ ಎಲ್ಲಾ ಸಿಬ್ಬಂದಿಗಳಿಗೂ ತಿಳಿಸಿ ನವೀನ್ ಕುಮಾರ್ ಹೋಗದೇ ಸಂಸ್ಥೆಯ ಕಾರನ್ನು ದುರುಪಯೋಗಪಡಿಸಿಕೊಂಡು ಬೀರೂರು- ಕಡೂರಿಗೆ ಹೋದ ಆರೋಪಕ್ಕೆ ಏನುತ್ತರವಿದೆ ಇಲಾಖೆಯ ಬಳಿ?

ಶಿವಮೊಗ್ಗ ವಿಭಾಗದ ಲೆಕ್ಕಾಧಿಕಾರಿ ಹಾಗೂ ಕಾರ್ಮಿಕ ಮಹಿಳಾ ಕಲ್ಯಾಣಾಧಿಕಾರಿ ಸಂಸ್ಥೆಯ ಒಂದೇ ಕಾರಿನಲ್ಲಿ ಒಟ್ಟಿಗೆ ಹೋಗಿ, ಮೀನು ಮೇಯ್ದು ಒಟ್ಟಿಗೇ ವಾಪಸ್ ಬರುತ್ತಾರಲ್ಲ…ಸಂಸ್ಥೆಯ ನಿಯಮಾವಳಿಗಳಿಗೆ ಇದು ಹೊಂದಿಕೆಯಾಗುತ್ತದೆಯೇ?..

(ಮುಂದುವರೆಯುವುದು…)