ಶೋಭಾ ಮಳವಳ್ಳಿ ರಾಜಕೀಯ ವಿಶ್ಲೇಷಣೆ; 2026ರ ತಮಿಳು‌ನಾಡು ಚುನಾವಣೆ;  ದಳಪತಿ ವಿಜಯ್ ಜೊತೆ ಕೈಜೋಡಿಸಿದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್

ಶೋಭಾ ಮಳವಳ್ಳಿ ರಾಜಕೀಯ ವಿಶ್ಲೇಷಣೆ;

2026ರ ತಮಿಳು‌ನಾಡು ಚುನಾವಣೆ; 

ದಳಪತಿ ವಿಜಯ್ ಜೊತೆ ಕೈಜೋಡಿಸಿದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್

2026ರ ತಮಿಳುನಾಡು ಎಲೆಕ್ಷನ್‌ ಗೆ ಈಗ ಬಂತು ನೋಡಿ ರಂಗು.
ರಾಜಕೀಯಕ್ಕೆ ಭರ್ಜರಿ ಎಂಟ್ರಿ ಕೊಟ್ಟ ತಮಿಳು ನಟ, ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ದಳಪತಿ ವಿಜಯ್​ ಜತೆ ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್ ಕೈ ಜೋಡಿಸಿರುವುದೇ ಸದ್ಯದ ಬ್ರೇಕಿಂಗ್ ನ್ಯೂಸ್​. ಇದರೊಂದಿಗೆ ತಮಿಳುನಾಡು ರಾಜಕೀಯ ಮಗ್ಗಲು ಬದಲಿಸುವುದು ಖಚಿತವಾಗಿದೆ.
ಟಿವಿಕೆ ಪಕ್ಷದ ಮೊದಲ ವಾರ್ಷಿಕೋತ್ಸವದಲ್ಲಿ ನಟ ವಿಜಯ್​ ಜತೆ ಪ್ರಶಾಂತ್ ಕಿಶೋರ್ ಕಾಣಿಸಿಕೊಂಡಿದ್ದು ತಮಿಳು ರಾಜಕೀಯ ಪಡಸಾಲೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ವಿಜಯ್​ ಟಿವಿಕೆ ಪಕ್ಷದ ಭವಿಷ್ಯದ ರಾಜಕೀಯ ನಡೆಗಳ ಬಗ್ಗೆ ಡಿಎಂಕೆ, ಎಐಎಡಿಎಂಕೆ ತಲೆಬಿಸಿ ಮಾಡಿದೆ.
ದಳಪತಿ ವಿಜಯ್‌ ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಅಸ್ತಿತ್ವಕ್ಕೆ ಭದ್ರಬುನಾದಿ ಹಾಕಲು ಪ್ರಶಾಂತ್‌ ಕಿಶೋರ್‌ ಮೊರೆ ಹೋಗಿರುವುದು ಸ್ಪಷ್ಟವಾಗಿದೆ. ಅಷ್ಟೇ ಅಲ್ಲ, ಈ ಬಾರಿಯ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಟಿವಿಕೆ ಪಕ್ಷದ ಪರವಾಗಿ ಕೆಲಸ ಮಾಡುವುದಾಗಿ ಪ್ರಶಾಂತ್‌ ಕಿಶೋರ್‌ ಬಹಿರಂಗವಾಗಿ ಘೋಷಿಸಿರುವುದು ವಿರೋಧಿಗಳ ನಿದ್ದೆಗೆಡೆಸಿದೆ.
ತಮಿಳು ಯುವ ಸಮುದಾಯವನ್ನೇ ಗುರಿಯಾಗಿಸಿಕೊಂಡಿರುವ ವಿಜಯ್​, ಯುವ ಜನಾಂಗದ ಆಶಾಕಿರಣ ಎಂಬಂತೆ ಬಿಂಬಿಸಿಕೊಳ್ಳಲು ಪಕ್ಕಾ ಪ್ಲಾನ್ ಮಾಡಿದ್ದಾರೆ. ಇದಕ್ಕೆ ಅವರು ರೂಪಿಸುವ ಕಾರ್ಯಕ್ರಮಗಳು, ವೇದಿಕೆಗಳ ಮೇಲಿನ ಹೀರೋ ಭಾಷಣ, ಡಿಎಂಕೆ ಸರ್ಕಾರ, ಮೋದಿ ಸರ್ಕಾರವನ್ನು ಟೀಕಿಸುವ ಪರಿ ನೋಡಿದರೆ, ವಿಜಯ್​ ಗೇಮ್ ಪ್ಲಾನ್ ಅರ್ಥವಾಗದ್ದೆನಲ್ಲ.
ಆದರೆ, ಪ್ರಶಾಂತ್ ಕಿಶೋರ್ ಗೆ ತಮಿಳರ ಎಮೋಷನ್ ಅರ್ಥ ಮಾಡಿಕೊಳ್ಳುವುದೇ ದೊಡ್ಡ ಸವಾಲು. ಭಾಷೆ, ಕಾವೇರಿ ನೀರು, ಹಿಂದಿ, ಪೆರಿಯಾರ್, ಜಲ್ಲಿಕಟ್ಟು ಎಂಬ ಅಸ್ಮಿತೆಗಾಗಿಯೇ ಎದೆಬಡಿದುಕೊಳ್ಳುವ ತಮಿಳರನ್ನು, ಸದ್ಯಕ್ಕೆ ಭ್ರಷ್ಟಾಚಾರದ ಬಗ್ಗೆಯಷ್ಟೇ ಮಾತಾಡ್ತಿರೋ ವಿಜಯ್
ರತ್ತ ಸೆಳೆಯುವಲ್ಲಿ ಪ್ರಶಾಂತ್ ಕಿಶೋರ್ ಯಶಸ್ವಿಯಾಗ್ತಾರಾ ಅನ್ನೋದೇ ಸದ್ಯದ ಕುತೂಹಲ.

ಎಂಜಿಆರ್ ಮತ್ತು ಜಯಲಲಿತಾ‌ ಬಳಿಕ ತಮಿಳುನಾಡು ರಾಜಕೀಯವನ್ನು ಅಕ್ಷರಶಃ ಆಳಿದ ಮತ್ತೊಬ್ಬ ನಟನಿಲ್ಲ. ವಿಜಯಕಾಂತ್ ಸ್ವಲ್ಪಮಟ್ಟಿನ ಸಕ್ಸಸ್ ಕಂಡರು. ಕಮಲ್ ಹಾಸನ್‌ ಬೇರೂರಲಿಲ್ಲ. ರಜನೀಕಾಂತ್ ಸ್ಪೀಡ್​ ಎಂಟ್ರಿ ಕೊಟ್ಟರೂ, ಎಣಿಸಿ, ಗುಣಿಸಿ ಕೊನೆಗೂ ರಾಜಕೀಯದಿಂದ ಕಾಲ್ಕಿತ್ತರು. ತಾರೆಯರ ರಂಗು ಕಳೆದುಕೊಂಡಿದ್ದ ತಮಿಳುನಾಡು ರಾಜಕೀಯಕ್ಕೆ ಜೋಸೆಫ್​ ವಿಜಯ್​​ ಎಂಟ್ರಿ ಬಿರುಗಾಳಿ ಎಬ್ಬಿಸಿದ್ದಂತೂ ಸುಳ್ಳಲ್ಲ. ಆದ್ರೆ, ಡಿಎಂಕೆ- ಎಐಡಿಎಂಕೆ ಬಿಟ್ಟರೆ ಬಿಜೆಪಿ, ಕಾಂಗ್ರೆಸ್​ ತಳವೂರಲು ಬಿಡದ ತಮಿಳು ಮತದಾರರು, ದಳಪತಿ ವಿಜಯ್​ ಗೆ ಮಣೆ ಹಾಕ್ತಾರಾ? ಅಧಿಕಾರ ಕೊಡ್ತಾರಾ? ಅಮಿತ್ ಶಾ ತಂತ್ರಗಾರಿಕೆ, ಅಣ್ಣಾಮಲೈ ಪಾದಯಾತ್ರೆ ಯಾವುದೂ ವರ್ಕ್​ಔಟ್ ಆಗಲಿಲ್ಲ. ವಿಜಯ್ ಗೆಲ್ಲಿಸಿಯೇ ಬಿಡುವಂಥ ಪ್ರಶಾಂತ್ ಕಿಶೋರ್ ತಂತ್ರಕ್ಕೆ ತಮಿಳು ಮತದಾರ ಮರುಳಾಗ್ತಾನಾ ?
ತಮಿಳುನಾಡು ಅಷ್ಟು ಸುಲಭ ಇಲ್ಲ ಬಿಡಿ.

#ಶೋಭಾಮಳವಳ್ಳಿ